ಕನ್ನಡಪ್ರಭ ವಾರ್ತೆ ಅರಸೀಕೆರೆನಗರಸಭೆಯ ಎಂಟು ವಾರ್ಡ್ಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ಸೇರಿದಂತೆ ಏಳು ಮಂದಿ ಕಾಂಗ್ರೆಸ್ ನಿಂದ ಆಯ್ಕೆಯಾಗುವುದರೊಂದಿಗೆ ನಗರಸಭೆಯನ್ನು ಪ್ರವೇಶಿಸಿದ್ದಾರೆ.
ಸತತ ಐದು ಬಾರಿ ಗೆಲುವು ಸಾಧಿಸಿದ್ದ ಬಿ,ಎನ್ ವಿದ್ಯಾಧರ್, ಮೊದಲ ಬಾರಿಗೆ ಪರಾಜಿತಗೊಂಡರೆ ವಾರ್ಡ್ ನಂಬರ್ 19 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇಮ್ರಾನ್ ಪಾಷಾ ಸೇರಿದಂತೆ ನೂತನವಾಗಿ ಗೆಲುವು ಸಾಧಿಸಿರುವ ಎಲ್ಲಾ ಎಂಟು ಮಂದಿಯೂ ಸಹ ನಗರಸಭೆಗೆ ಹೊಸ ಮುಖಗಳಾಗಿರುವುದು ವಿಶೇಷ.
ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಶಾಸಕ ಕೆಎಂ ಶಿವಲಿಂಗೇಗೌಡ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದ ನೂತನ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ತಿನಿಸುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಶಾಸಕ ಕೆ,ಎಂ ಶಿವಲಿಂಗೇಗೌಡ ಮಾತನಾಡಿ, ನಮ್ಮ ಕ್ಷೇತ್ರದ ಜನತೆ ಪ್ರಜ್ಞಾವಂತರಿದ್ದು ಅಭಿವೃದ್ಧಿಪರ ನಿಲುವು ಹೊಂದಿರುವುದರಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಗೆಲುವು ಸೇರಿದಂತೆ ಈಗ ನಡೆದಿರುವ ನಗರಸಭೆಯ ಉಪಚುನಾವಣೆಯ ಫಲಿತಾಂಶ ಸಾಕ್ಷಿಯಾಗಿದೆ. ನಮ್ಮ ಅಭ್ಯರ್ಥಿಗಳ ಗೆಲುವಿಗೆ ಆಶೀರ್ವದಿಸಿರುವ ನಗರ ಜನತೆಗೆ ನಗರದ ಅಭಿವೃದ್ಧಿಯ ಮೂಲಕವೇ ಕೃತಜ್ಞತೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ವಿಜಯೋತ್ಸವದ ಮೆರವಣಿಗೆಯಲ್ಲಿ ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್,ನಗರ ಸಭೆ ಸದಸ್ಯ ವೆಂಕಟಮನಿ,ಕಾಂಗ್ರೆಸ್ ಮುಖಂಡರಾದ ಸುಬ್ರಹ್ಮಣ್ಯ ಬಾಬು,ವೆಂಕಟೇಶ್,ವೈ ಕೆ ದೇವರಾಜ್ ಮತ್ತು ಇತರರು ಪಾಲ್ಗೊಂಡಿದ್ದರು.
ಪಲ್ಲವಿ, 18ನೇ ವಾರ್ಡಿನಿಂದ ನೂತನವಾಗಿ ಆಯ್ಕೆಯಾಗಿರುವ ಸದಸ್ಯೆ