ಡಿಸಿ ರೋಷನ ವಿರುದ್ಧ ಕ್ರಮಕ್ಕೆ ಪಾಲಿಕೆ ಸದಸ್ಯರ ಹಕ್ಕೊತ್ತಾಯ

KannadaprabhaNewsNetwork |  
Published : Aug 26, 2025, 02:00 AM IST
ಮೇಯರ್‌ ಮಂಗೇಶ ಪವಾರ ಅಧ್ಯಕ್ಷತೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯಸಭೆ ನಡೆಯಿತು. | Kannada Prabha

ಸಾರಾಂಶ

ಗಣೇಶೋತ್ಸವಕ್ಕೆ ಎಲ್ಲ ಸಿದ್ಧತೆಗಳನ್ನು ಪಾಲಿಕೆ ವತಿಯಿಂದಲೇ ಮಾಡಲಾಗುತ್ತದೆ. ಅನುದಾನವನ್ನು ಕೂಡ ಪಾಲಿಕೆ ಖರ್ಚು ಮಾಡುತ್ತದೆ. ಆದರೆ, ಜಿಲ್ಲಾಡಳಿತ ಪಾಲಿಕೆಯನ್ನು ಕಡೆಗಣಿಸಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾನಗರ ಪಾಲಿಕೆ ಆಡಳಿತ ಕಡೆಗಣಿಸಿ, ಸಾರ್ವಜನಿಕ ಗಣೇಶೋತ್ಸವದಲ್ಲಿ ಮಹಾಪ್ರಸಾದ ಮಾಡುವುದಾಗಿ ಏಕಪಕ್ಷೀಯವಾಗಿ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ವಿರುದ್ಧ ಪಾಲಿಕೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ ಮಹಾನಗರ ಪಾಲಿಕೆ ಸಭಾಭವನದಲ್ಲಿ ಸೋಮವಾರ ಮೇಯರ್‌ ಮಂಗೇಶ ಪವಾರ ಅಧ್ಯಕ್ಷತೆಯಲ್ಲಿ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಬೇಧ ಮರೆತು ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದರು. ಗಣೇಶೋತ್ಸವ ಪೂರ್ವಭಾವಿ ಸಭೆಗೆ ಪಾಲಿಕೆ ಆಡಳಿತವನ್ನು ನಿರ್ಲಕ್ಷಿಸಿ, ಪಾಲಿಕೆ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಗಣೇಶೋತ್ಸವದ ಸಂದರ್ಭದಲ್ಲಿ ಪಾಲಿಕೆ ವತಿಯಿಂದ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ಹೇಳಿಕೆ ನೀಡುವ ಮೂಲಕ ತಮ್ಮ ಅಧಿಕಾರ ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿ ಗಣೇಶೋತ್ಸವಕ್ಕೆ ಖ್ಯಾತಿ ಪಡೆದಿದ್ದು, ಗಣೇಶೋತ್ಸವಕ್ಕೆ ಎಲ್ಲ ಸಿದ್ಧತೆಗಳನ್ನು ಪಾಲಿಕೆ ವತಿಯಿಂದಲೇ ಮಾಡಲಾಗುತ್ತದೆ. ಅನುದಾನವನ್ನು ಕೂಡ ಪಾಲಿಕೆ ಖರ್ಚು ಮಾಡುತ್ತದೆ. ಆದರೆ, ಜಿಲ್ಲಾಡಳಿತ ಪಾಲಿಕೆಯನ್ನು ಕಡೆಗಣಿಸಿದೆ. ಮೇಯರ್‌, ಉಪಮೇಯರ್‌, ಆಯುಕ್ತರು ಹಾಗೂ ಪಾಲಿಕೆ ಸದಸ್ಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಗಣೇಶೋತ್ಸವ ಪೂರ್ವಭಾವಿ ಸಬೆಗೆ ಯಾರನ್ನೂ ಆಹ್ವಾನಿಸದೇ ಕಡೆಗಣಿಸಲಾಗಿದೆ. ಕೂಡಲೇ ಡಿಸಿ ಮೊಹಮ್ಮದ ರೋಷನ್ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಜಿಲ್ಲಾಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯಮಂತ್ರಿ, ರಾಜ್ಯಪಾಲರ ಬಳಿಗೂ ಪಾಲಿಕೆ ಸದಸ್ಯರ ನಿಯೋಗ ತೆರಳಲು ಹಾಗೂ ಪ್ರಸಂಗ ಬಂದರೆ ರಾಜ್ಯಭವನ ಹಾಗೂ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ಕೈಗೊಳ್ಳಲು ತೀರ್ಮಾನಿಸಲಾಯಿತು.

ಜಿಲ್ಲಾಡಳಿತ ಪಾಲಿಕೆಗೆ ಯಾವುದೇ ಮಾಹಿತಿ ನೀಡದೇ ಇರುವ ಬೆಳವಣಿಗೆ ಸರಿಯಲ್ಲ. ಅದರಂತೆ ನಗರ ಪೊಲೀಸ್‌ ಆಯುಕ್ತರು ಕೂಡ ಭದ್ರತೆ ಕುರಿತು ಮಾಹಿತಿ ನೀಡದೇ ನಿರ್ಲಕ್ಷ್ಯವಹಿಸಿರುವುದು ಸರಿಯಲ್ಲ ಎಂದು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ದುಪ್ಪಟ್ಟು ಭೂ ಬಾಡಿಗೆ ವಸೂಲಿ:

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ವ್ಯಾಪಾರಿಗಳಿಂದ ಹೆಚ್ಚಿನ ಭೂ ಬಾಡಿಗಗೆ ವಸೂಲಿ ಮಾಡುತ್ತಿರುವ ಗುತ್ತಿಗೆದಾರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು.

ಅಧಿಕ ಭೂ ಬಾಡಿಗೆ ವಸೂಲಿ ಮಾಡುತ್ತಿರುವವರ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. ಸಭೆಯ ನಡಾವಳಿಗಳನ್ನು ಓದಿ ಅನುಮೋದನೆಗೊಳಿಸುವ ವೇಳೆ ಭೂ ಬಾಡಿಗೆ ಮತ್ತು ನೂತನ ಸ್ವಚ್ಛತಾ ನೌಕರರ ಪ್ಯಾಕೇಜ್‌ ವಿಷಯವನ್ನು ಓದಿ ಅನುಮೋದನೆಗಳಿಸುವ ಸಂದರ್ಭದಲ್ಲಿ ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವಿಷಯವನ್ನು ಮುಂದಿನ ಬಾರಿ ಚರ್ಚೆಸುವಂತೆ ಹೇಳಿದರು. ಆದರೆ, ಇದಕ್ಕೆ ರವಿ ಧೋತ್ರೆ ವಿರೋಧ ವ್ಯಕ್ತಪಡಿಸಿದರು. ಪ್ರತಿಪಕ್ಷದ ಶಾಹೀನಖಾನ್‌ ಪಠಾಣ, ಮುಝಮ್ಮಿಲ್‌ ಡೋಣಿ ಅವರು ತರಾತುರಿಯಲ್ಲಿ ಏಕೆ ಅನುಮೋದನೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಪ್ರತಿಪಕ್ಷದ ನಾಯಕ ಹನುಮಂತ ಕೊಂಗಾಲಿ ಅವರು ಈ ಕುರಿತು ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ ಎಂದರು.

ಪಾಲಿಕೆ ಆಯುಕ್ತೆ ಶುಭ ಬಿ ಮಾತನಾಡಿ, ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪ್ಯಾಕೇಜ್‌ ಪಾಸ್‌ ಮಾಡಲಾಗಿದೆ. ಸ್ವಚ್ಛತೆಗಾಗಿ ಹೊಸಬರನ್ನು ನೇಮಿಸಲಾಗಿದೆ. ಈ ಕುರಿತು ಏನಾದರೂ ಸಲಹೆ, ಸೂಚನೆಗಳಿದ್ದರೆ ಈ ಸಭೆಯಲ್ಲೇ ನೀಡಿದರೆ, ಮುಂದಿನ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಧಾನ ಪರಿಷತ್‌ ಸದಸ್ಯ ಸಾಬಣ್ಣ ತಳವಾರ ಮಾತನಾಡಿ, ಮಹಾನಗರ ಪಾಲಿಕೆಯು ನಗರದ ಪ್ರಮುಖ ಬೀದಿಗಳಲ್ಲಿ ಭೂಬಾಡಿಗೆಗೆ ಸಂಬಂಧಿಸಿದಂತೆ ಫಲಕಗಳನ್ನು ಅಳವಡಿಸಬೇಕು. ಈ ಕುರಿತು ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸಭೆ ಗಮನ ಸೆಳೆದರು. ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಬೀದಿ ದೀಪ ಸಮಸ್ಯೆ ನಿವಾರಣೆ, ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಕೈಗೊಂಡಿಲ್ಲ. ರಸ್ತೆಗಳೆಲ್ಲವೂ ಸಂಪೂರ್ಣವಾಗಿ ಹದಗೆಟ್ಟುಹೋಗಿವೆ. ಕೂಡಲೇ ಬೀದಿ ದೀಪಗಳ ವ್ಯವಸ್ಥೆ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ