ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಸೂಚನೆ
ಹರಾಜಿನಲ್ಲಿ ಪಡೆದಿರುವ ನಗರಸಭೆ ಮಳಿಗೆಗಳನ್ನು ಸ್ವಂತಕ್ಕೆ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಒಳ ಬಾಡಿಗೆ ನೀಡಬಾರದು ಎಂದು ನಗರ ಸಭಾಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.
ಕೆ.ಎಂ. ರಸ್ತೆಯ ಕತ್ರಿಮಾರಮ್ಮ ದೇವಸ್ಥಾನ ಬಳಿ ಹೊಸದಾಗಿ ನಿರ್ಮಿಸಿರುವ ಮಳಿಗೆಗಳು, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ ಹಾಗೂ ಕೆ.ಎಂ. ರಸ್ತೆಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಮಂಗಳವಾರ ಭಾಗವಹಿಸಿ ಅವರು ಮಾತನಾಡಿದರು.ಇಂದು ಹರಾಜಿನಲ್ಲಿ ಪಡೆದುಕೊಂಡಿರುವುದನ್ನು ಹೊರತುಪಡಿಸಿ ಉಳಿದ ಮಳಿಗೆಗಳನ್ನು ಮುಂದಿನ ದಿನಗಳಲ್ಲಿ ಹರಾಜು ಮಾಡಲಾಗುವುದು. ಮೇ 7 ರಂದು ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಗರಸಭೆ ಆವರಣದಲ್ಲಿ ನಿರ್ಮಿಸಿರುವ ಫುಡ್ ಕೋರ್ಟ್‌ನ ಆಹಾರ ಮಳಿಗೆಗಳನ್ನು ಹರಾಜಿನಲ್ಲಿ ಭಾಗವಹಿಸಿ ಪಡೆಯಬಹುದು ಎಂದರು.
ಮಳಿಗೆಗಳ ಬಾಡಿಗೆ ಸರಿಯಾಗಿ ಪಾವತಿಸದೇ ಇರುವವರು ನಗರಸಭೆಗೆ ಮುಂಗಡವಾಗಿ ಪಾವತಿಸಿರುವ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನಿಸಿದ್ದು, ಅಂತಹವರ ಮಳಿಗೆಯನ್ನು ಮರು ಹರಾಜು ಮಾಡಿ ಅರ್ಹರಿಗೆ ಕೊಡುತ್ತೇವೆ ಎಂದು ತಿಳಿಸಿದರು.
ಫುಡ್‌ಕೋರ್ಟ್‌ನಲ್ಲಿ ಮಳಿಗೆ ಪಡೆದವರು ಒಳ ಬಾಡಿಗೆ ನೀಡಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಂಡು ನಗರಸಭೆ ನೀಡಿರುವ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಹೇಳಿದರು.
ಚಿಕ್ಕಮಗಳೂರು ನಗರಸಭೆಯಲ್ಲಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯಿತು. ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಪೌರಾಯುಕ್ತ ಬಿ.ಸಿ. ಬಸವರಾಜು ಇದ್ದರು.