ಎರಡು ಆಸ್ಪತ್ರೆಗಳ ಮುಂದೆ ಕಸ ಸುರಿದ ಪಾಲಿಕೆ ಸಿಬ್ಬಂದಿ

KannadaprabhaNewsNetwork |  
Published : Feb 05, 2026, 02:30 AM IST
ಬಳ್ಳಾರಿಯ ಪಾರ್ವತಿನಗರದಲ್ಲಿರುವ ಪದ್ಮಾಕಿಡ್ನಿಕೇರ್ ಸೆಂಟರ್ ಮುಂದೆ ಪಾಲಿಕೆ ಸಿಬ್ಬಂದಿ ಬುಧವಾರ ಬೆಳಿಗ್ಗೆ ಕಸ ಸುರಿದರು.  | Kannada Prabha

ಸಾರಾಂಶ

ರಸ್ತೆಯ ಬದಿ ಕಸ ಸುರಿಯುತ್ತಿದ್ದ ನಗರದ ಎರಡು ಖಾಸಗಿ ಆಸ್ಪತ್ರೆಗಳ ಮುಂದೆ ಬುಧವಾರ ಕಸವನ್ನು ಹಾಕುವ ಮೂಲಕ ಮಹಾನಗರ ಪಾಲಿಕೆ ಸಿಬ್ಬಂದಿ ಚುರುಕು ಮೂಡಿಸಿದೆ

ಬಳ್ಳಾರಿ:ರಸ್ತೆಯ ಬದಿ ಕಸ ಸುರಿಯುತ್ತಿದ್ದ ನಗರದ ಎರಡು ಖಾಸಗಿ ಆಸ್ಪತ್ರೆಗಳ ಮುಂದೆ ಬುಧವಾರ ಕಸವನ್ನು ಹಾಕುವ ಮೂಲಕ ಮಹಾನಗರ ಪಾಲಿಕೆ ಸಿಬ್ಬಂದಿ ಚುರುಕು ಮೂಡಿಸಿದೆ.

ಕಸದ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸಿದ ಇಲ್ಲಿನ ಪಾರ್ವತಿ ನಗರ ಪದ್ಮಾ ಕಿಡ್ನಿಕೇರ್ ಸೆಂಟರ್ ಹಾಗೂ ಮೋಕಾ ರಸ್ತೆಯ ದ್ವಾರಕಾ ಆಸ್ಪತ್ರೆ ಮುಂದೆಯೇ ಪಾಲಿಕೆಯ ಪೌರ ಕಾರ್ಮಿಕ ಸಿಬ್ಬಂದಿ ಕಸ ಸುರಿಯುವ ಮೂಲಕ ರಸ್ತೆ ಬದಿ ಕಸ ಎಸೆದರೆ ಏನಾಗಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಪದ್ಮಾ ಕಿಡ್ನಿಕೇರ್ ಸೆಂಟರ್ ಹಾಗೂ ದ್ವಾರಕಾ ಆಸ್ಪತ್ರೆಯವರು ಕಸವನ್ನು ರಸ್ತೆಗೆ ಎಸೆಯುತ್ತಿದ್ದರು. ಇದರಿಂದ ನಿತ್ಯ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿತ್ತು. ಕಸವನ್ನು ರಸ್ತೆಗೆ ಹಾಕಬೇಡಿ. ನಿತ್ಯ ಮನೆ, ಕಚೇರಿ, ಆಸ್ಪತ್ರೆಗಳ ಮುಂದೆ ಬರುವ ವಾಹನಕ್ಕೆ ಕಸ ನೀಡುವಂತೆ ಅನೇಕ ಬಾರಿ ತಿಳಿಸಿ ಹೇಳಲಾಗಿತ್ತು. ಆದಾಗ್ಯೂ ಎರಡು ಆಸ್ಪತ್ರೆಯ ಸಿಬ್ಬಂದಿ ರಸ್ತೆಗೆ ಕಸ ಸುರಿಯುತ್ತಿದ್ದರು. ಬಯೋ ಮೆಡಿಕಲ್ ತ್ಯಾಜ್ಯವನ್ನು ಸಹ ರಸ್ತೆಗೆ ಹಾಕುತ್ತಿದ್ದರು. ಈ ಸಂಬಂಧ ಎರಡು ಬಾರಿ ಆಸ್ಪತ್ರೆಗಳಿಗೆ ನೊಟೀಸ್ ನೀಡಿದ್ದಾಗ್ಯೂ ಯಾವುದೇ ಕ್ರಮ ವಹಿಸದೆ ನಿರ್ಲಕ್ಷ್ಯತೆ ಮುಂದುವರಿಸಿದ್ದರು. ಹೀಗಾಗಿ ಕಸವನ್ನು ಆಸ್ಪತ್ರೆಯ ಮುಂದೆ ಸುರಿದು, ದಂಡ ಹಾಕುವ ಪ್ರಕ್ರಿಯೆ ಶುರುಗೊಳಿಸಿದ್ದೇವೆ. ಕಸ ಸುರಿಯುವ ಕೆಲಸ ಮುಂದುವರಿಯಲಿದೆ. ನಗರದಾದ್ಯಂತ ವಾರ್ಡ್ ವಾರು ಗಮನ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೇವೆ. ಕಸ ಮನೆ ಅಥವಾ ಆಸ್ಪತ್ರೆಯ ಮುಂದೆ ಸುರಿಯುವುದರ ಜೊತೆಗೆ ದೊಡ್ಡ ಮೊತ್ತದ ದಂಡ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ದ್ವಾರಕಾ ಆಸ್ಪತ್ರೆಗೆ ₹10 ಸಾವಿರ ದಂಡ ವಿಧಿಸಲಾಗಿದೆ. ಪದ್ಮಾ ಕಿಡ್ನಿಕೇರ್ ಸೆಂಟರ್‌ನ ಮಾಲೀಕರು ಇಲ್ಲದ ಕಾರಣ ನಾಳೆ ಅಥವಾ ನಾಡಿದ್ದು ದಂಡ ಹಾಕಲಾಗುವುದು. ಮೊದಲಿಗೆ ಆಸ್ಪತ್ರೆ ಹಾಗೂ ಅಂಗಡಿ, ಹೋಟೆಲ್‌ಗಳ ಕಡೆ ಗಮನ ನೀಡಿ ಕಸ ಸುರಿಯುವ ಪ್ರಕ್ರಿಯೆ ಆರಂಭಿಸಿದ್ದು, ನಂತರದಲ್ಲಿ ಉಳಿದ ಎಲ್ಲ ಕಡೆ ದಂಡ ಪ್ರಯೋಗ ಕೆಲಸ ಮಾಡುತ್ತೇವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಅಭಿಯಾನ ಶುರು

ಮನೆ, ಆಸ್ಪತ್ರೆ ಅಥವಾ ಅಂಗಡಿ ಮುಂದೆ ಬರುವ ವಾಹನಗಳಿಗೆ ಕಸ ನೀಡಬೇಕು. ರಸ್ತೆಗೆ ಕಸ ಚೆಲ್ಲಿದರೆ ಮರಳಿ ಅದೇ ಕಸವನ್ನು ಅವರ ಮನೆ, ಆಸ್ಪತ್ರೆ ಮುಂದೆ ಹಾಕಲಾಗುವುದು. ಜೊತೆಗೆ ದಂಡ ವಿಧಿಸಲಾಗುವುದು. ಅನೇಕ ಬಾರಿ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ. ರಂಗೋಲಿ ಜಾಗೃತಿ ಮೂಡಿಸಿದರೂ ಕೇಳಲಿಲ್ಲ. ಹೀಗಾಗಿ ಕಸ ಸುರಿಯುವ ಅಭಿಯಾನ ಶುರು ಮಾಡಿದ್ದೇವ ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್‌.ಮಂಜುನಾಥ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!