ಕನ್ನಡಪ್ರಭ ವಾರ್ತೆ ಹಾಸನ
ಮಾಜಿ ಶಾಸಕ ಪ್ರೀತಂಗೌಡರು ಶಾಸಕರಾಗಿದ್ದ ಅವಧಿಯಲ್ಲಿ ಇಲ್ಲಿ ಹೂವಿನ ಅಂಗಡಿ ಮಾರಾಟಕ್ಕೆಂದು ಮೇಲ್ಛಾವಣಿ ಹಾಕಿಸಿಕೊಟ್ಟಿದ್ದರು. ಆದರೆ ಹೂವಿನ ವ್ಯಾಪಾರಿಗಳು ಇಲ್ಲಿಗೆ ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಜಾಗದಲ್ಲಿ ಹಣ್ಣಿನ ಅಂಗಡಿಗಳು ತಲೆ ಎತ್ತಿವೆ. ಮೊದಮೊದಲು ಶೀಟ್ ಒಳಗೆ ಪೆಟ್ಟಿಗೆ ಅಂಗಡಿ ರೀತಿ ಹಾಕಿ ವ್ಯಾಪಾರ ಮಾಡುತ್ತಿದ್ದರು. ಇಲ್ಲಿ ಹಣ್ಣಿನ ಅಂಗಡಿ ಹೆಚ್ಚಾದಂತೆ ಸ್ಪರ್ಧೆಗೆ ಇಳಿದ ವ್ಯಾಪಾರಸ್ಥರು, ಪಾದಚಾರಿಗಳು ನಡೆದಾಡಲು ಸ್ಥಳವನ್ನೂ ಬಿಡದೆ ಅಂಗಡಿ ಹಾಕಲು ಪ್ರಾರಂಭಿಸಿದ್ದರು. ಅಂಗಡಿಗಳನ್ನು ಹಿಂದಕ್ಕೆ ಹಾಕಿಕೊಳ್ಳುವಂತೆ ಅನೇಕ ಬಾರಿ ನಗರಸಭೆ ಸೂಚನೆ ನೀಡಿದರೂ ಕ್ಯಾರೆ ಎನ್ನದೆ ಒತ್ತುವರಿ ಮಾಡಿ ತಮ್ಮ ವ್ಯಾಪಾರ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತರಾದ ನರಸಿಂಹ ಮೂರ್ತಿ ಅವರು ಗುರುವಾರ ಅಧಿಕಾರಗಳು ಹಾಗೂ ಸಿಬ್ಬಂದಿಗಳೊಂದಿಗೆ ಬಂದು ಪರಿಶೀಲಿಸಿದರು. ತಕ್ಷಣದಲ್ಲಿ ನಿಮಗೆ ನೀಡಿರುವ ಸ್ಥಳದಲ್ಲೆ ವ್ಯಾಪಾರ ಮಾಡದಿದ್ದರೇ ನಾವೆ ತೆರವು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದಾಗ ಕೆಲ ಸಮಯ ವ್ಯಾಪಾರಸ್ಥರೊಂದಿಗೆ ವಾಗ್ವಾದ ನಡೆಯಿತು. ನಂತರ ಒತ್ತುವರಿ ಜಾಗ ತೆರವು ಮಾಡುವುದಾಗಿ ಹೇಳಿ ಗಡುವು ನೀಡಿ ತೆರಳಿದರು.