ಇದೀಗ ಬೇಡ್ತಿ-ವರದಾ ತಿರುವು ಯೋಜನೆ ಜಿಲ್ಲೆ ಜಿಲ್ಲೆಗಳ ಮಧ್ಯೆ ದೊಡ್ಡ ಸಂಘರ್ಷವನ್ನೇ ಹುಟ್ಟುಹಾಕಿದ್ದು, ಮಠಾಧೀಶರು, ಪರಿಸರ ತಜ್ಞರು, ಜನಪ್ರತಿನಿಧಿಗಳು ಈ ಹೋರಾಟದಲ್ಲಿ ಧುಮುಕಿದ್ದರಿಂದ ಸಂಘರ್ಷ ತಾರಕಕ್ಕೇರಿದೆ

(ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಾಗಿ ನದಿಗಳ ನೀರು ಬಳಕೆ ವಿಷಯವಾಗಿ ಈ ವರೆಗೆ ಹಲವು ವಿವಾದಗಳು ತಲೆದೋರಿ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳೊಂದಿಗೆ ಕರ್ನಾಟಕ ಗುದ್ದಾಡುತ್ತಲೇ ಬಂದಿದೆ. ಇದೀಗ ಬೇಡ್ತಿ-ವರದಾ ತಿರುವು ಯೋಜನೆ ಜಿಲ್ಲೆ ಜಿಲ್ಲೆಗಳ ಮಧ್ಯೆ ದೊಡ್ಡ ಸಂಘರ್ಷವನ್ನೇ ಹುಟ್ಟುಹಾಕಿದ್ದು, ಮಠಾಧೀಶರು, ಪರಿಸರ ತಜ್ಞರು, ಜನಪ್ರತಿನಿಧಿಗಳು ಈ ಹೋರಾಟದಲ್ಲಿ ಧುಮುಕಿದ್ದರಿಂದ ಸಂಘರ್ಷ ತಾರಕಕ್ಕೇರಿದೆ.)

-ಮಲ್ಲಿಕಾರ್ಜುನ ಸಿದ್ದಣ್ಣವರ

ಬ್ಯುರೋ ಮುಖ್ಯಸ್ಥರು,

ಕನ್ನಡಪ್ರಭ ಹುಬ್ಬಳ್ಳಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ಸೇರುವ ಬೇಡ್ತಿ ನದಿಯ ಹೆಚ್ಚುವರಿ ನೀರನ್ನು ಬಯಲು ಸೀಮೆಯ ಹಾವೇರಿ ಜಿಲ್ಲೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ ವರದಾ ನದಿಗೆ ಕೂಡಿಸುವ ತಿರುವು ಯೋಜನೆ 1992ರಲ್ಲೇ ಹರಳುಗಟ್ಟಿದ್ದರೂ ಇದೀಗ ಮುನ್ನೆಲೆಗೆ ಬಂದಿದ್ದು, ಭಾರೀ ವಿವಾದ ಹುಟ್ಟು ಹಾಕಿದೆ.

ಸಮೃದ್ಧ ಹಸಿರಿನ ಪಶ್ಚಿಮ ಘಟ್ಟದ ಉತ್ತರ ಕನ್ನಡ ಜಿಲ್ಲೆ ಇದೀಗ ಅಕ್ಷರಶಃ ಅಗ್ನಿಕುಂಡವಾಗಿದ್ದರೆ, ಬಯಲು ಸೀಮೆಯ ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳು ಹೋರಾಟಕ್ಕೆ ಅವುಡುಗಚ್ಚಿವೆ. ಮಹದಾಯಿ, ಕೃಷ್ಣಾ ನದಿ ನೀರಿನ ಹಕ್ಕಿಗಾಗಿ ಹೋರಾಟ ಮಾಡುತ್ತ ಬಂದವರೀಗ ಬೇಡ್ತಿ ನದಿ ನೀರಿನ ವಿಚಾರವಾಗಿ ಅಕ್ಷರಶಃ ದಾಯಾದಿಗಳಾಗಿದ್ದಾರೆ. ನಾ ಕೊಡೆ- ನಾ ಬಿಡೆ ಎನ್ನುವ ಛಲದ ಮಾತುಗಳು ಜನಸಾಮಾನ್ಯರನ್ನು ಸಿಡಿದೇಳುವಂತೆ ಮಾಡಿವೆ.

ಉತ್ತರ ಕನ್ನಡ ಜಿಲ್ಲೆಯ ಅಲ್ಲಲ್ಲಿ ಪಾದಯಾತ್ರೆ, ಸಭೆ ನಡೆಸುವ ಮೂಲಕ ಜನಾಂದೋಲನ ರೂಪಿಸಿದ ‘ಬೇಡ್ತಿ, ಅಘನಾಶಿನಿ ಕಣಿವೆ ಉಳಿಸಿ ಹೋರಾಟ’ ಕಳೆದ ಭಾನುವಾರ ಶಿರಸಿಯಲ್ಲಿ ನಡೆದ ಬೃಹತ್ ಸಮಾವೇಶವಾಗಿ ಮಾರ್ಪಟ್ಟು, ಸರ್ಕಾರಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ:

ಶಿರಸಿ ಸಮಾವೇಶದ ಸಾನಿಧ್ಯ ವಹಿಸಿದ್ದ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ‘ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಬೇಡ್ತಿ, ಅಘನಾಶಿನಿ ನದಿ ತಿರುವ ಯೋಜನೆ ವಿರೋಧಿ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡದಿದ್ದರೆ ಮುಂದೆ ಜಿಲ್ಲೆಯ ಜನತೆ ಸಾಮೂಹಿಕ ಚುನಾವಣೆ ಬಹಿಷ್ಕಾರ ಮಾಡುವ ಕಾಲ ಬರಬಹುದು’ ಎಂದು ಸೂಚ್ಯವಾಗಿ ಎಚ್ಚರಿಸಿರುವುದು ಅಲ್ಲಿನ ಜನಪ್ರತಿನಿಧಿಗಳಿಗೆ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಇಳಿಯುವಂತೆ ಮಾಡಿದೆ.

ಈ ಸಮಾವೇಶದ ಅಬ್ಬರ, ಬಿರುಸು ಗಮನಿಸಿದ ಬಯಲು ಸೀಮೆಯ ಜನ ಕೂಡ ಅಷ್ಟೇ ರೊಚ್ಚು-ಕೆಚ್ಚಿನಿಂದ ‘ಬೇಡ್ತಿ ನೀರು ಬೇಕೇ ಬೇಕು ಎನ್ನುವ ಹಕ್ಕೊತ್ತಾಯ’ಕ್ಕೆ ಮುಂದಾಗಿದ್ದಾರೆ. ಕಳೆದ ಮೂರು ದಶಕಗಳ ಹೋರಾಟದ ಫಲವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಸಂದರ್ಭದಲ್ಲಿ ಶಿರಸಿ ಸಮಾವೇಶ ನಡೆದಿರುವುದು ಹೋರಾಟಗಾರರಲ್ಲಿ ಆತಂಕ ಮೂಡಿಸಿದ್ದರಿಂದ ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳ ಜನತೆ ಸೇರಿ ಹಾವೇರಿಯಲ್ಲಿ ಬೃಹತ್ ಸಮಾವೇಶ ಆಯೋಜಿಸುತ್ತಿದ್ದಾರೆ. ಇದಕ್ಕೂ ಮೊದಲು ಈ ಮೂರೂ ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿ ಜನಾಭಿಪ್ರಾಯ ರೂಪಿಸುತ್ತಿದ್ದಾರೆ. ಮಠಾಧೀಶರನ್ನೂ ಹೋರಾಟಕ್ಕೆ ಆಹ್ವಾನಿಸಿದ್ದಾರೆ. ಹಾಗಾಗಿ ರೈತ ಹೋರಾಟದ ತವರು ಹಾವೇರಿ ಮತ್ತೊಂದು ಹೋರಾಟಕ್ಕೆ ವೇದಿಕೆ ಆಗುತ್ತಿದೆ.

ಏನಿದು ತಿರುವು ಯೋಜನೆ?:

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ‘ನದಿಗಳ ಜೋಡಣೆ ಯೋಜನೆ’ ಅಡಿಯಲ್ಲಿ ಈ ‘ಬೇಡ್ತಿ-ವರದಾ ತಿರುವು ಯೋಜನೆ’ಯನ್ನು ಪ್ರಸ್ತಾಪಿಸಲಾಗಿದ್ದು, ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಇದರ ಟೆಕ್ನಿಕಲ್‌ ಏಜನ್ಸಿಯಾಗಿದೆ.

ಬಯಲು ಸೀಮೆಯ ಜನತೆಯ ಮೂರು ದಶಕಗಳ ಈ ಬೇಡಿಕೆಗೆ 2021ರಲ್ಲಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಬಜೆಟ್‌ನಲ್ಲಿ ಘೋಷಿಸುವ ಮೂಲಕ ಸ್ಪಂದಿಸಿದೆ. ಮುಂದೆ ಬಂದ ಬಸವರಾಜ ಬೊಮ್ಮಾಯಿ ಸರ್ಕಾರ ಯೋಜನೆಯನ್ನು ಪರಿಷ್ಕರಿಸಿ ಹೆಚ್ಚಿನ ಅರಣ್ಯ ಮತ್ತು ಪರಿಸರ ನಾಶ ತಪ್ಪಿಸಿದೆ. ಈಗಿನ ಸಿದ್ದರಾಮಯ್ಯ ಸರ್ಕಾರ ಡಿಪಿಆರ್‌ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಮಂಡಿಸಿದ್ದು, ಕೇಂದ್ರ ಸರ್ಕಾರವೂ ಹಸಿರು ನಿಶಾನೆ ತೋರಿದೆ.

ಭೌಗೋಳಿಕವಾಗಿ 20 ಕಿ.ಮೀ. ಅಂತರದಲ್ಲಿ ಇರುವ ಬೇಡ್ತಿ-ವರದಾ ನದಿಗಳನ್ನು ಜೋಡಿಸುವ ಯೋಜನೆ ಇದು. ಇದಕ್ಕೆ₹9,652 ಕೋಟಿ (ಕೇಂದ್ರ ₹8500, ರಾಜ್ಯ ₹1152) ವೆಚ್ಚವಾಗಲಿದೆ. ಯಲ್ಲಾಪುರ ರಸ್ತೆಯ ಬೇಡ್ತಿ ಸೇತುವೆ ಸಮೀಪದ ಸುರೇಮನೆ ಬಳಿ ಬೃಹತ್‌ ಅಣೆಕಟ್ಟೆ ನಿರ್ಮಾಣ. ಅಲ್ಲಿಂದ 178.42 ಕಿ.ಮೀ. ಉದ್ದದ ಕಾಲುವೆ (ಕೆಲವೆಡೆ ಸುರಂಗ) ನಿರ್ಮಿಸಿ ವರದಾ ನದಿಗೆ ಬರೋಬ್ಬರಿ 22 ಟಿಎಂಸಿ ನೀರೆತ್ತುವ ಯೋಜನೆ (ಲಿಫ್ಟ್‌ ಇರಿಗೇಷನ್‌) ಇದು.

ಇದರಿಂದ ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳ ಹಳ್ಳಿ-ಹಟ್ಟಣಗಳಿಗೆ ಕುಡಿವ ನೀರು ಮತ್ತು 16 ಲಕ್ಷ ಹೆಕ್ಟರ್‌ ಭೂಮಿಯನ್ನು ನೀರಾವರಿ ಮಾಡುವುದು ಈ ಯೋಜನೆಯ ಉದ್ದೇಶ.

ಯಾಕೆ ಬೇಡ ಯೋಜನೆ?:

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ 2012ರಲ್ಲೇ ಪಶ್ಚಿಮ ಘಟ್ಟ ಸೇರಿದೆ. ಅಲ್ಲದೇ ಪಶ್ಚಿಮ ಘಟ್ಟ ಪ್ರದೇಶದ ನದಿ ಜೋಡಣೆಯಿಂದ ಆಗುವ ಹಾನಿಯ ಬಗ್ಗೆ ವಿಜ್ಞಾನಿಗಳ ಹಲವು ಬಾರಿ ಅಧ್ಯಯನ ವರದಿ ಸಲ್ಲಿಸಿದ್ದಾರೆ. ಜೀವ ವೈವಿಧ್ಯತೆ ಮೇಲೆ ಆಗುವ ದುಷ್ಪರಿಣಾಮದ ಕುರಿತು ತಿಳಿಸಿದ್ದಾರೆ. ಅಪಾರ ಪ್ರಮಾಣದ ಅರಣ್ಯ ನಾಶವಾಗಿ ಕೆರೆ, ಬಾವಿಗಳಿಗೆ ಅಂತರ್ಜಲ ಮರುಪೂರಣ ಕಡಿಮೆಯಾಗುತ್ತದೆ. ನದಿ ನೀರು ಹರಿಯುತ್ತಿದ್ದರೆ ಅವಲಂಬಿತ ಜನರಿಗೆ ಸಮಸ್ಯೆಯಾಗುತ್ತದೆ. ಅಂತರ್ಜಲ ಮಟ್ಟ ಕಡಿಮೆಯಾಗಿ ಮಲೆನಾಡು ಬರಪೀಡಿತ ಜಿಲ್ಲೆಯಾಗುವ ಅಪಾಯವಿದೆ. ಮೀನುಗಾರಿಕೆ ದೊಡ್ಡ ಹೊಡೆತ ಬೀಳಲಿದೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ ಎನ್ನುವುದು ಬೇಡ್ತಿ-ವರದಾ ತಿರುವು ಯೋಜನೆ ವಿರೋಧಿಸುವ ಹೋರಾಟಗಾರರ ಕಳಕಳಿ.

ವನವಾಸಿಗಳು, ರೈತರು, ವನ್ಯಜೀವಿಗಳು, ಸಸ್ಯ ಸಂಕುಲ, ನದಿ ಪಾತ್ರಕ್ಕೆ ಬೇಡ್ತಿ ತಿರುವು ಯೋಜನೆ ಕುತ್ತು ಆಗಲಿದೆ. ಈಗಾಗಲೇ ಕೈಗಾ, ಕೊಂಕಣ ಸೇರಿದಂತೆ ಅನೇಕ ಯೋಜನೆಗಳು ಬಂದು ಪರಿಸರಕ್ಕೆ ಸಾಕಷ್ಟು ಹಾನಿಯಾಗಿದೆ. ಈಗಾಗಲೇ 588 ಕಡೆ ಭೂಕುಸಿತ ಆಗಿದ್ದು, ಇನ್ನೂ 439 ಅಪಾಯ ಸಂಭವಿಸುವ ಸ್ಥಳಗಳಿವೆ ಮತ್ತು ಜಿಲ್ಲೆಯ ಪರಿಸರ ಧಾರಣ ಸಾಮರ್ಥ್ಯ ಈಗಾಗಲೇ ಮುಗಿದಿದೆ. ನದಿ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತದೆ ಎಂಬುದು ತಪ್ಪು ಕಲ್ಪನೆ. ಸಮುದ್ರಕ್ಕೆ ಸಿಹಿ ನೀರು ಕೂಡುವುದು ಕೂಡ ಅಷ್ಟೇ ಮುಖ್ಯ. ಹಾಗಾಗಿ ಯಾವುದೇ ಕಾರಣಕ್ಕೂ ಈ ಬೇಡ್ತಿ ನೀರು ಬೇರೆಡೆ ತಿರುವುದು ಬೇಡವೇ ಬೇಡ ಎನ್ನುವುದು ಅವರ ವಾದ.

ಬೇಡ್ತಿ ನೀರು ಬೇಕೇ ಬೇಕು:

ಬೇಡ್ತಿ- ವರದಾ ತಿರುವು ಯೋಜನೆ ರಾಷ್ಟ್ರೀಯ ಜಲ ನೀತಿಯಲ್ಲಿದೆ. ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗೆ ಇಲ್ಲಿನ ನೀರು ಹಂಚಿಕೆ ಸಹಜ ನ್ಯಾಯವಾಗಿದೆ ಎನ್ನುವ ಯೋಜನೆಯ ಪರವಾಗಿರುವ ಬಯಲು ಸೀಮೆಯ ಹೋರಾಟಗಾರರ ಅಭಿಮತ.

ಅರಬ್ಬಿ ಸಮುದ್ರ ಸೇರಿ ವ್ಯರ್ಥವಾಗುವ ಬೇಡ್ತಿಯ 22 ಟಿಎಂಸಿ ನೀರನ್ನು ಕುಡಿಯಲು, ನೀರಾವರಿಗೆ ಬಳಕೆ ಮಾಡಿದರೆ ತಪ್ಪೇನು? ವರ್ಷದ 6 ತಿಂಗಳು ಮಾತ್ರ ಹರಿಯುವ ವರದಾ ಒಡಲಿಗೆ ಬೇಡ್ತಿ ನೀರು ಬಂದರೆ ಬಯಲು ಸೀಮೆಗೆ ವರದಾನ ಆಗಲಿದೆ. ಇದರಿಂದ ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳ ಬಹು ದಿನಗಳ ಕುಡಿಯುವ ನೀರಿನ ಅಭಾವ ನೀಗಲಿದೆ. ನಮ್ಮ ಕಡೆ ಬರಗಾಲ ಇದೆ. ಮಳೆಗಾಲದಲ್ಲಿ ಬೇಡ್ತಿ ನೀರು ಸಂಗ್ರಹ ಮಾಡಿದರೆ ನಮ್ಮ ಭಾಗಕ್ಕೆ ಅನುಕೂಲ ಆಗುತ್ತದೆ.

ಯಾವುದೇ ನದಿ ನಿಂತ ನೀರಲ್ಲ. ಕೃಷ್ಣಾ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕ, ಆಂಧ್ರಪ್ರದೇಶದಲ್ಲಿ ಹರಿಯುತ್ತದೆ. ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಅಲ್ಲ. ಕೃಷ್ಠಾ, ಮಹದಾಯಿ ನೀರಿನಲ್ಲಿ ಪಾಲು ಕೇಳುವ ನಾವು ನಮ್ಮ ಜಿಲ್ಲೆಗಳ ನೀರನ್ನು ಸೌಹಾರ್ದಯುತವಾಗಿ ಬಳಸಿಕೊಳ್ಳಬೇಕಿದೆ. ಮೇಲಾಗಿ ಸಮುದ್ರಕ್ಕೆ ಹರಿದು ವ್ಯರ್ಥವಾಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಯೋಜನೆ ಇದು.

ಈ ಯೋಜನೆಯನ್ನು ಭಾವನಾತ್ಮಕವಾಗಿ ನೋಡಬಾರದು. ಯಾರಿಗೂ ತೊಂದರೆ ಆಗದಂತೆ ಯೋಜನೆ ಮಾಡಬೇಕಿದೆ. ರಾಜ್ಯ ಸರ್ಕಾರ ಡಿಪಿಆರ್ ಮಾಡಲು ಒಪ್ಪಿಗೆ ಕೊಟ್ಟಿದೆ. ಡಿಪಿಆರ್ ಆದ ಬಳಿಕ ರಾಜ್ಯ ಸರ್ಕಾರ ಸಭೆ ಕರೆಯಲಿ. ವರದಾ-ಬೇಡ್ತಿ ಯೋಜನೆ ಆಗಲೇಬೇಕಿದೆ, ಯಾವುದೇ ರೀತಿಯ ಚರ್ಚೆಗೆ ನಾವು ಸಿದ್ಧ. ಗೊಂದಲವನ್ನು ಮಾತುಕತೆ ಮೂಲಕ ಬಗೆ ಹರಿಸಬೇಕು ಎನ್ನುತ್ತಾರೆ ಹೋರಾಟಗಾರರು.

ಗೊಂದಲದಲ್ಲಿ ಕಾಂಗ್ರೆಸ್‌-ಬಿಜೆಪಿ:

ಅಲ್ಲಿ ಬೇಡ್ತಿ ಕೊಳ್ಳದ ಪರ ಸಚಿವ ಮಂಕಾಳು ವೈದ್ಯ, ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಇಲ್ಲಿ ಶಿವಾನಂದ ಪಾಟೀಲ ಸೇರಿದಂತೆ ಮೂವರು ಹಾಲಿ ಸಚಿವರು, ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೋರಾಟದ ನೇತೃತ್ವ ವಹಿಸಿದ್ದು, ಸರ್ಕಾರ ಮತ್ತು ಪ್ರತಿಪಕ್ಷಕ್ಕೆ ಯಾರನ್ನು ಬೆಂಬಲಿಸಬೇಕು ಎನ್ನುವ ಗೊಂದಲ ಸೃಷ್ಟಿಯಾಗಿದೆ.

ಬೇಡ್ತಿ- ವರದಾ ತಿರುವು ಯೋಜನೆ ರಾಷ್ಟ್ರೀಯ ಜಲ ನೀತಿಯಲ್ಲಿದೆ. ಇದನ್ನು ಕೆಂದ್ರ-ರಾಜ್ಯ ಸರ್ಕಾರಗಳು ಜಂಟಿಯಾಗಿ ಕೈಗೆತ್ತಿಕೊಂಡಿವೆ. ಮೇಲಾಗಿ ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ ಅನುಮೋದನೆಗೊಂಡ ಯೋಜನೆ ಮತ್ತು ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅನುಷ್ಠಾನ ಆಗುತ್ತಿದ್ದರಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಪರ-ವಿರೋಧ ನಿಲುವಿನ ಬಗ್ಗೆ ಗೊಂದಲದಲ್ಲಿವೆ. ಹಾಗಾಗಿ ಎರಡೂ ಪಕ್ಷಗಳ ಪ್ರಮುಖರು ಈ ಯೋಜನೆ ಕುರಿತಂತೆ ಇನ್ನೂ ತುಟಿ ಬಿಚ್ಚಿಲ್ಲ.

ಪಶ್ಚಿಮ ಘಟ್ಟಕ್ಕೆ ಆಗಲ್ಲ ನೀರಿನ ನಷ್ಟ

ಬೇಡ್ತಿ ನದಿಯಿಂದ ಕಡಿಮೆ ನೀರನ್ನು ಎತ್ತುವ ಯೋಜನೆ ಇದು. ಇದರಿಂದ ಪಶ್ಚಿಮ ಘಟ್ಟಕ್ಕೆ ಯಾವುದೇ ನೀರಿನ ನಷ್ಟ ಆಗುವುದಿಲ್ಲ. ಈ ವಿಚಾರವಾಗಿ ಮುಕ್ತವಾಗಿ ಚರ್ಚಿಸಲು ತಜ್ಞರು, ಪರಿಸರ ವಿಜ್ಞಾನಿಗಳನ್ನು ಕರೆಯಲಿ, ಸೌಹಾರ್ದಯುತ ನಿರ್ಣಯ ತೆಗೆದುಕೊಳ್ಳಬೇಕು. ಅದಕ್ಕಾಗಿ ನಾವು ಹಾವೇರಿಯಲ್ಲಿ ಮಠಾಧೀಶರು, ರಾಜಕೀಯ ನಾಯಕರು ಎಲ್ಲರನ್ನೊಳಗೊಂಡ ಸಭೆ ಕರೆಯುತ್ತೇವೆ. ಜನ ಜಾಗೃತಿ, ಜನಾಭಿಪ್ರಾಯ, ಸಮಾವೇಶ ಮಾಡುವ ಮೂಲಕವೂ ಮನವರಿಕೆ ಮಾಡುತ್ತೇವೆ.

-ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ, ಹಾವೇರಿ ಸಂಸದರು

ಧಾರಣ ಸಾಮರ್ಥ್ಯ ಅಧ್ಯಯನ ಅಗತ್ಯ

ನದಿ ಜೋಡಣೆ ವಿರೋಧಿಸಿ, ಕೊಳ್ಳ ಸಂರಕ್ಷಣಾ ಸಮಿತಿ ಮುಂದಾಳತ್ವದಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಧಾರಣ ಸಾಮರ್ಥ್ಯ ಅಧ್ಯಯನ ಮಾಡದೇ ಡಿಪಿಆರ್ ತಯಾರಿಗೆ ಅನುಮತಿ ನೀಡಬೇಡಿ ಎಂದು ವಿನಂತಿಸಿಕೊಳ್ಳಲಾಗಿತ್ತು. ಆದರೂ ಅನುಮತಿ ನೀಡಲಾಗಿದೆ. ಈಗ ಇದಕ್ಕೆ ಅವಕಾಶ ನೀಡಬಾರದು. ನದಿ ತಿರುವು ಯೋಜನೆಗಳ ಬಗ್ಗೆ ಡಿಪಿಆರ್ ತಯಾರಿಕೆಗೆ ರಾಜ್ಯ ಸರ್ಕಾರ ನೀಡಿರುವ ಒಪ್ಪಿಗೆಯನ್ನು ಹಿಂಪಡೆಯಬೇಕು.

-ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ.

*ಯಲ್ಲಾಪುರ ರಸ್ತೆಯ ಬೇಡ್ತಿ ಸೇತುವೆ ಸಮೀಪದ ಸುರೇಮನೆ ಬಳಿ ಬೃಹತ್‌ ಅಣೆಕಟ್ಟೆ ನಿರ್ಮಾಣ

*ಅಲ್ಲಿಂದ 178.42 ಕಿ.ಮೀ. ಉದ್ದದ ಕಾಲುವೆ (ಕೆಲವೆಡೆ ಸುರಂಗ) ನಿರ್ಮಿಸಿ ವರದಾ ನದಿಗೆ ನೀರು

*ಬರೋಬ್ಬರಿ ಬೇಡ್ತಿ ನದಿಯಿಂದ ವರ್ಷದ 6 ತಿಂಗಳಿನಲ್ಲಿ 22 ಟಿಎಂಸಿ ನೀರೆತ್ತುವ ಯೋಜನೆ ಇದು

*ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳ ಹಳ್ಳಿ-ಹಟ್ಟಣಗಳಿಗೆ ಕುಡಿವ ನೀರು, 16 ಲಕ್ಷ ಹೆಕ್ಟರ್‌ಗೆ ನೀರಾವರಿ