ಚಳ್ಳಕೆರೇಲಿ ಸಿಸಿ ಕ್ಯಾಮೆರ ಅಳವಡಿಸಲು ನಗರಸಭೆ ನಿರ್ಣಯ

KannadaprabhaNewsNetwork | Published : Mar 21, 2025 1:30 AM

ಸಾರಾಂಶ

ಚಳ್ಳಕೆರೆ ನಗರದ ನಗರಸಭಾ ಕಾರ್ಯಾಲಯದಲ್ಲಿ ಗುರುವಾರ ತುರ್ತು ಕೌನ್ಸಿಲ್ ಸಭೆ ನಡೆಯಿತು.

ಸುಮಾ ಭರಮಣ್ಣ ಅಧ್ಯಕ್ಷತೆಯಲ್ಲಿ ನಗರಸಭೆಯ ತುರ್ತು ಕೌನ್ಸಿಲ್ ಸಭೆ ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಗರಸಭೆಯ ತುರ್ತು ಕೌನ್ಸಿಲ್ ಸಭೆ ಪ್ರಭಾರ ಅಧ್ಯಕ್ಷೆ ಸುಮಾ ಭರಮಣ್ಣ ಅಧ್ಯಕ್ಷತೆಯಲ್ಲಿ ನಡೆದಿದ್ದು, ಚಳ್ಳಕೆರೆ ನಗರದಲ್ಲಿ ಸಿಸಿ ಕ್ಯಾಮೆರಾ, ಅಪರಾಧ ತಡೆ ಹಿನ್ನೆಲೆಯಲ್ಲಿ ಸೂಚನಾಫಲಕ ಅನಾವರಣ, ವಾರದ ಸಂತೆ ದಿನವಹಿ ಮಾರುಕಟ್ಟೆ ಸುಂಕ ವಸೂಲಾತಿ ಹಾಗೂ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಪ್ರಾರಂಭದಲ್ಲಿ ಪೌರಾಯುಕ್ತ ಎಚ್.ಜಿ.ಜಗರೆಡ್ಡಿ ಎಲ್ಲರನ್ನೂ ಸ್ವಾಗತಿಸಿ, ಪೊಲೀಸ್ ಇಲಾಖೆ ನಗರದ ಆಯಕಟ್ಟು ಪ್ರದೇಶಗಳಲ್ಲಿ ಆಗಾಗ ನಡೆಯುತ್ತಿರುವ ದರೋಡೆ, ಕಳ್ಳತನ ಪ್ರಕರಣ ಪತ್ತೆಗೆ ಅವಶ್ಯವಿರುವ ಸಿಸಿ ಕ್ಯಾಮೆರಾ ಅಳವಡಿಕೆ, ಅಪಘಾತಗಳನ್ನು ನಿಯಂತ್ರಿಸಲು ಸೂಚನಾ ಫಲಕ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸಭೆ ಆಯೋಜಿಸಿದ್ದು, ಸಭೆಯಲ್ಲಿ ಭಾಗವಹಿಸಿರುವ ಪ್ರಭಾರ ಅಧ್ಯಕ್ಷೆ ಹಾಗೂ ಎಲ್ಲಾ ಸದಸ್ಯರಿಗೂ ಸ್ವಾಗತಕೋರಿ ನಗರಸಭೆಯ ಹಿತದೃಷ್ಠಿಯಿಂದ ಸದಸ್ಯರು ಸೂಕ್ತ ಸಲಹೆ ಸೂಚನೆ ನೀಡುವಂತೆ ಮನವಿ ಮಾಡಿದರು.

ಪ್ರಾರಂಭದಲ್ಲೇ ಸಿಸಿ ಕ್ಯಾಮೆರಾ ಅಳವಡಿಕೆ ಕುರಿತಂತೆ ಕಳೆದ 2014-15ರ ಸಭೆಯಲ್ಲಿ 6 ಲಕ್ಷ ಹಣ ಮೀಸಲಿಟ್ಟಿದ್ದು, ಅದು ಕಾರ್ಯಗತವಾಗಿಲ್ಲ, ಮತ್ತೆ ಅದೇ ವಿಚಾರ ಸಭೆಯಲ್ಲಿ ಪ್ರಸ್ತಾಪಿಸಿರುವುದು ಸರಿಯಲ್ಲವೆಂದು ಹಿರಿಯ ಸದಸ್ಯ ಎಸ್.ಜಯಣ್ಣ, ಟಿ.ಶಿವಕುಮಾರ್, ಸಿ.ಶ್ರೀನಿವಾಸ್, ಸಿ.ಎಂ.ವಿಶುಕುಮಾರ್, ಎಂ.ನಾಗವೇಣಿ, ನಿರ್ಮಲ, ಸಾಕಮ್ಮ, ಪಾಲಮ್ಮ, ಮುಂತಾದವರು ಆಕ್ಷೇಪಿಸಿದರು.

ಆಡಳಿತ ಪಕ್ಷದ ಸದಸ್ಯ ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಪ್ಪ ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಪೌರಾಯುಕ್ತರ ಪರವಾಗಿ ಮಾಹಿತಿ ನೀಡಿದ ವ್ಯವಸ್ಥಾಪಕ ಲಿಂಗರಾಜು,2014-15ನೇ ಸಾಲಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಒಟ್ಟು 77 ಲಕ್ಷ ಹಣ ಅವಶ್ಯಕತೆ ಇರುವ ಬಗ್ಗೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಕಳಿಸಲಾಗಿತ್ತು. ಆದರೆ, ಜಿಲ್ಲಾಧಿಕಾರಿಗಳಿಂದ ಯಾವುದೇ ಅನುಮೋದನೆ ದೊರಕದ ಕಾರಣ ವಿಷಯವನ್ನು ಕೈಬಿಡಲಾಯಿತು ಎಂದು ತಿಳಿಸಿದ ನಂತರ ಚರ್ಚೆ ನಡೆಸಿ ನಗರಸಭೆಯಲ್ಲಿ ಲಭ್ಯವಿರುವ ಅನುದಾನವನ್ನು ಉಪಯೋಗಿಸಿಕೊಂಡು ಶಾಸಕರ ಅನುದಾನ ಪಡೆದು ಸಿಸಿ ಕ್ಯಾಮೆರಾ ಅಳವಡಿಸುವಂತೆ ನಿರ್ಧಾರ ಕೈಗೊಳ್ಳಲಾಯಿತು.

ಖಾಸಗಿ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯವಿಲ್ಲವೆಂದು ಬೇಸರ ವ್ಯಕ್ತಪಡಿಸಿದ ನಗರಸಭಾ ಸದಸ್ಯೆ ಸುಜಾತಪಾಲಯ್ಯ, ಸೌಲಭ್ಯ ನೀಡದೆ ಸುಂಕ ವಸೂಲಾತಿ ಸರಿಯಲ್ಲವೆಂದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಸೌಲಭ್ಯ ಕಲ್ಪಿಸಿ ಹರಾಜು ಪ್ರಕ್ರಿಯೆ ನಡೆಸಲಾಯಿತು ಎಂದರು.

ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಮಾಯವಾದ ಬಗ್ಗೆ ಆರೋಗ್ಯ ನಿರೀಕ್ಷಕರು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಸದಸ್ಯರು ಅಸಮದಾನ ಹೊರಹಾಕಿದರು. ಸರಿಪಡಿಸುವ ಭರವಸೆ ಪೌರಾಯುಕ್ತರು ನೀಡಿದರು.

ಸಭೆಯಲ್ಲಿ ಪ್ರಭಾರ ಅಧ್ಯಕ್ಷೆ ಸುಮಭರಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಕವಿತಾ ಬೋರಯ್ಯ, ಆರ್.ಮಂಜುಳಾ, ಚಳ್ಳಕೆರೆಯಪ್ಪ, ಪ್ರಶಾಂತ್‌ಕುಮಾರ್, ಹೊಯ್ಸಳಗೋವಿಂದ, ವೈ.ಪ್ರಕಾಶ್ ಹಾಜರಿದ್ದರು.

Share this article