ಕಂಪ್ಲಿ: ಅಹಿಂದ ನಾಯಕರೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದು ಇದೀಗ ಒಳ ಮೀಸಲಾತಿ ಜಾರಿಗೆ ವಿಳಂಬ ತೋರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಅನುಮಾನ ಮೂಡಿಸಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರಾದ ಎಚ್. ಜಡೆಪ್ಪ ಆರೋಪಿಸಿದರು.
ಈ ಕುರಿತು ಪಟ್ಟಣದ ತಹಸೀಲ್ದಾರ್ ಕಚೇರಿಯ ಬಳಿ ಗುರುವಾರ ತಹಸೀಲ್ದಾರ್ ಶಿವರಾಜ್ ಶಿವಪುರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಮಾದಿಗ ಮತ್ತು ಉಪ ಜಾತಿಗಳು ಒಳ ಮೀಸಲಾತಿಗೆ ಕಳೆದ 35 ವರ್ಷಗಳಿಂದ ಹೋರಾಟ ನಡೆಸಿಸುತ್ತಿದ್ದರೂ ಮಾದಿಗ ಸಮುದಾಯಕ್ಕೆ ನ್ಯಾಯಯುತ ಪಾಲು ದೊರಕುತ್ತಿಲ್ಲ. ಒಳ ಮೀಸಲಾತಿ ನೀಡುವ ಜವಾಬ್ದಾರಿಯನ್ನು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ನೀಡಿದೆ. ಅದರಂತೆ ಈಗಾಗಲೇ ತೆಲಂಗಾಣ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಒಳ ಮೀಸಲಾತಿ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಅಹಿಂದ ನಾಯಕನೆಂದು ಹೇಳಿಕೊಂಡು ಅಧಿಕಾರಿಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಬೇಕು. ಉದಾಸೀನ ತೋರಿದಲ್ಲಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು. ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಇದಕ್ಕೂ ಮುನ್ನ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ, ತಾಲೂಕಿನ ಎಮ್ಮಿಗನೂರು ಗ್ರಾಮದ ಕೆಂಚಮ್ಮ ದೇವಸ್ಥಾನದಿಂದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸದಸ್ಯರು ತಹಸೀಲ್ದಾರ್ ಕಚೇರಿಯ ವರೆಗೂ ಪಾದಯಾತ್ರೆ ನಡೆಸಿದರು. ವಿವಿಧ ಸಂಘಟನೆಗಳ ಪ್ರಮುಖರಾದ ಎಚ್. ಪಂಪಾಪತಿ, ಎಚ್. ಮಲ್ಲೇಶ್, ಲಕ್ಷ್ಮಿಪತಿ, ಗಾದಿಲಿಂಗಪ್ಪ, ಎಚ್. ರಾಮಪ್ಪ, ಫಕ್ಕೀರಪ್ಪ, ಚಂದ್ರಶೇಖರ, ಜಿ. ರಾಮಣ್ಣ, ವೀರಾಂಜನೇಯಲು, ಕೆ. ಲಕ್ಷ್ಮಣ, ಪ್ರಸಾದ್, ಕರಿಯಪ್ಪ ಗುಡಿಮನಿ, ಎ.ಎಸ್. ಯಲ್ಲಪ್ಪ, ಸಣಾಪುರ ಮರಿಸ್ವಾಮಿ, ಎಂ. ಹನುಮಂತ, ವೀರೇಶ ಇತರರಿದ್ದರು.