ಶಿವಮೊಗ್ಗ: ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು, ಗುರುವಾರವೂ ಶಿವಮೊಗ್ಗ ನಗರದ ವಿವಿಧೆಡೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತ್ತೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಎರಡು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.ಶಿವಮೊಗ್ಗ ನಗರದ ಹೆಲಿಪ್ಯಾಡ್ ಸರ್ಕಲ್ ಬಳಿಯಿರುವ ಪೊಲೀಸ್ ಕ್ಯಾಬಿನ್, ಅನುಪಿನಕಟ್ಟೆ ಬಳಿಯಿರುವ ಪಾಲಿಕೆ ಘನತ್ಯಾಜ್ಯ ವಿಲೇವಾರಿ ಘಟಕ, ನಗರದ ಸರ್ಕಾರಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್ ಕ್ಯಾಬಿನ್‌ಗಳು ಬಳಕೆಯಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಬಗ್ಗೆಯೂ ಬೇಸರ ವ್ಯಕ್ತಪಡಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಲೋಕಾಯುಕ್ತರು, ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿಯಾಗಬೇಕಾಗಿದೆ. ಗುಂಡಿ ತೋಡಿ ಕಸ ವಿಲೇವಾರಿ ಕ್ರಮ ಸರಿಯಲ್ಲ. ಈ ಸಂಬಂಧ ಸುಮೊಟೋ ಕೇಸ್ ದಾಖಲಿಸಿಕೊಳ್ಳಲಾಗಿದೆ. ಸಂಸ್ಕರಣೆಗೆ ಮತ್ತೊಂದು ಪ್ಲ್ಯಾಂಟ್ ಅಗತ್ಯವಿದೆ ಎಂದರು.ಶಾಶ್ವತ ಪರಿಹಾರ ಕ್ರಮಕೈಗೊಳ್ಳುವ ಬಗ್ಗೆ ಸಲಹೆ ನೀಡಲಾಗಿದೆ. ಸುಮೊಟೋ ಕೇಸ್ ದಾಖಲಿಸಿಕೊಳ್ಳಲಾಗುವುದು. ಪ್ರತಿ ಎರಡು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ವರದಿ ಪಡೆಯಲಾಗುವುದು ಎಂದರು.ಪೊಲೀಸ್ ಕ್ಯಾಬಿನ್‌ಗಳ ಪರಿಶೀಲನೆ ಮಾಡಲಾಯಿತು. 18 ರಿಂದ 20 ಕ್ಯಾಬಿನ್ ನಿರ್ಮಿಸಲಾಗಿದೆ. ಈ ಬಗ್ಗೆ ಎಸ್ಪಿ ಅವರನ್ನು ಕೇಳಿದಾಗ, ಅಗತ್ಯವಿಲ್ಲದಿದ್ದರೂ ನಿರ್ಮಾಣ ಮಾಡಿಕೊಡಲಾಗಿದೆ. ಸಿಬ್ಬಂದಿಗಳ ಕೊರತೆಯಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಡಿಸಿ, ಸಿಇಒ ಜೊತೆ ಚರ್ಚಿಸಿ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಎಸ್ಪಿ ಅವರಿಗೆ ಸೂಚನೆ ನೀಡಿದರು.ಈ ಬಗ್ಗೆಯೂ ಸುಮೊಟೋ ಕೇಸ್ ದಾಖಲಿಸಿಕೊಳ್ಳಲಾಗುವುದು. ಹಾಗೆಯೇ ಬಿಟ್ಟರೇ ಕ್ಯಾಬಿನ್‌ಗಳು ಉಪಯೋಗಕ್ಕೆ ಬರದಿರುವ ಸಾಧ್ಯತೆಯಿದೆ. ಇದರಿಂದ ಹಣ ವ್ಯರ್ಥವಾಗಲಿದೆ. ಈ ಬಗ್ಗೆಯೂ ನಿಯಮಿತವಾಗಿ ವರದಿ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದಾಗ ಸ್ವಚ್ಛವಾಗಿರುವುದು ಕಂಡುಬಂದಿದೆ. ಆದರೆ, ಕೆಲ ನಾಗರಿಕರು, ನೀವು ಬರುತ್ತಿರುವ ಕಾರಣದಿಂದ ಸ್ವಚ್ಛವಾಗಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ನಿಯಮಿತವಾಗಿ ಬಸ್ ನಿಲ್ದಾಣಕ್ಕೆ ಭೇಟಿಯಿತ್ತು ಪರಿಶೀಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ನ್ಯಾ.ಎನ್.ಆರ್.ಲೋಕಪ್ಪ, ನ್ಯಾ.ಜಿ.ವಿ.ವಿಜಯಾನಂದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಮಹಾನಗರಪಾಲಿಕೆ ಆಯುಕ್ತೆ ಕವಿತಾಯೋಗಪ್ಪನವರ್ ಮತ್ತಿತರರಿದ್ದರು.
ವೈಜ್ಞಾನಿಕ ವಿಧಾನದಲ್ಲಿ ಘನತ್ಯಾಜ್ಯಸಂಸ್ಕರಣ ಘಟಕ ಸ್ಥಾಪಿಸಿ
ಶಿವಮೊಗ್ಗ : ನಗರದ ಜನಸಂಖ್ಯೆಗನುಗುಣವಾಗಿ ಹೆಚ್ಚಿನ ಸಾಮರ್ಥ್ಯದ ಮತ್ತೊಂದು ಘನತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸಬೇಕಾದ ಅಗತ್ಯವಿದೆ ಎಂದು ಉಪಲೋಕಾಯುಕ್ತ ನ್ಯಾ. ಕೆ.ಎಸ್.ಫಣೀಂದ್ರ ಅಭಿಪ್ರಾಯಪಟ್ಟರು.ಅನುಪಿನಕಟ್ಟೆಯಲ್ಲಿರುವ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದ ಹೊರವಲಯ ಅನುಪಿನಕಟ್ಟೆಯಲ್ಲಿ ಮಹಾನಗರಪಾಲಿಕೆಯಿಂದ ನಿರ್ವಹಿಸಲಾಗುತ್ತಿರುವ ಘನತ್ಯಾಜ್ಯ ಸಂಸ್ಕರಣಾ ಘಟಕವು ಚಿಕ್ಕದಾಗಿದ್ದು, ನಗರದಲ್ಲಿ ಉತ್ಪಾದಿತವಾಗುತ್ತಿರುವ ತ್ಯಾಜ್ಯವು ದಿನೇದಿನೇ ಹೆಚ್ಚಾಗುತ್ತಿದೆ. ಹೀಗಾಗಿ ನಗರ ಪ್ರದೇಶದ ವ್ಯಾಪ್ತಿಯಿಂದ ಮತ್ತಷ್ಟು ದೂರದಲ್ಲಿ ಅತ್ಯಾಧುನಿಕವಾದ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಇನ್ನೊಂದು ಘನತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಬೇಕಾದ ಅಗತ್ಯವಿದೆ ಎಂದರು.
ಈಗಿರುವ ಘಟಕದಿಂದ ಸುತ್ತಮುತ್ತಲ ಪ್ರದೇಶದ ನಿವಾಸಿಗಳಿಂದ ನಾಯಿಗಳ ಹಾವಳಿ, ಪ್ರಾಣಿ ಪಕ್ಷಿಗಳ ಉಪಟಳ, ದುರ್ನಾತ, ನೊಣಗಳಿಂದ ಸಾಂಕ್ರಾಮಿಕ ರೋಗಗಳ ಹರಡುವ ಆತಂಕ ಇರುವ ಬಗ್ಗೆ ಲೋಕಾಯುಕ್ತದಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಇಲ್ಲಿನ ತ್ಯಾಜ್ಯದಿಂದ ಹೊರಸೂಸುವ ದುರ್ನಾತ, ಮಲಿನ ನೀರು ಪರಿಸರದಲ್ಲಿ ಮಿಳಿತವಾಗದಂತೆ ಹಾಗೂ ಮಲಿನ ನೀರನ್ನು ಸಂಸ್ಕರಿಸಿ ಬಿಡುವಲ್ಲಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.ಈಗಾಗಲೇ ಸಾರ್ವಜನಿಕರು ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಮನವಿ ನೀಡಿದ್ದು, ಯಾವುದೇ ಲಾಭ ಆಗಿಲ್ಲ. ಘಟಕದ ಸ್ಥಳಾಂತರದ ಬಗ್ಗೆಯೂ ಪರಿಶೀಲಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಇಲ್ಲಿನ ಘಟಕ ನಿರ್ವಹಣೆ ತೃಪ್ತಿಕರವಾಗಿಲ್ಲ. ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಸ್ವಯಂ ಪ್ರೇರಿತ ಮೊಕದ್ದಮೆಯನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುವುದಾಗಿ ಅವರು ತಿಳಿಸಿದರು.