ವಿವೇಕಾನಂದ ಕಾಲೇಜ್: ನಾಳೆಯಿಂದ ೬೦ನೇ ವರ್ಷದ ಸಂಭ್ರಮಾಚರಣೆ

KannadaprabhaNewsNetwork | Published : Mar 21, 2025 12:38 AM

ಸಾರಾಂಶ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ)ದ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವ ಮತ್ತು ಪದವಿ ಕಾಲೇಜಿನ ೬೦ನೇ ವರ್ಷದ ಸಂಭ್ರಮಾಚರಣೆ ಶನಿವಾರದಿಂದ ನಡೆಯಲಿದೆ. ಮಾ.೨೩ಕ್ಕೆ ಸಪ್ತಪರ್ಣೋತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ ನೆರವೇರಲಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ)ದ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವ ಮತ್ತು ಪದವಿ ಕಾಲೇಜಿನ ೬೦ನೇ ವರ್ಷದ ಸಂಭ್ರಮಾಚರಣೆ ಶನಿವಾರದಿಂದ ನಡೆಯಲಿದೆ. ಮಾ.೨೩ಕ್ಕೆ ಸಪ್ತಪರ್ಣೋತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ ಹಾಗು ಮಾ.೨೪ಕ್ಕೆ ಕಾಲೇಜು ವಾರ್ಷಿಕೋತ್ಸವ ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಆವರಣದಲ್ಲಿ ಜರುಗಲಿದೆ ಎಂದು ವಿದ್ಯಾಲಯದ ಸಂಚಾಲಕ ನ್ಯಾಯವಾದಿ ಮುರಳಿಕೃಷ್ಣ ಕೆ ಎನ್ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಸ್ನಾತಕೋತ್ತರ ವಿಭಾಗದ ದಶಮಾನೋತ್ಸವವನ್ನು ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಡಾ. ಸುಕಾಂತ ಮಜುಂದಾರ್ ಉದ್ಘಾಟಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿವೇವಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್, ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಭಾಗವಹಿಸಲಿದ್ದಾರೆ.

ಸಾಧಕರಿಗೆ ಸನ್ಮಾನ:

ಈ ಸಂದರ್ಭ ವಿವಿಧ ಕ್ಷೇತ್ರಗಳ ೧೦ ಸಾಧಕರನ್ನು ಸನ್ಮಾನಿಸಲಾಗುತ್ತಿದ್ದು, ವೈದ್ಯಕೀಯ ಮತ್ತು ಸಮಾಜ ಸೇವೆಯಲ್ಲಿ ಡಾ. ಗೌರಿ ಪೈ, ಕಾನೂನು ವಿಭಾಗದಲ್ಲಿ ಹಿರಿಯ ನ್ಯಾಯವಾದಿ ಎಂ ರಾಮಮೋಹನ್ ರಾವ್, ಸಾಮಾಜಿಕ ಹೋರಾಟ ವಿಭಾಗದಲ್ಲಿ ಡಾ. ಮೋಹನ್ ಕುಮಾರ್ ವೈ, ಶಿಕ್ಷಣ ಕ್ಷೇತ್ರದಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ, ಉದ್ಯಮ ಮತ್ತು ವ್ಯವಹಾರದಲ್ಲಿ ಶಂಕರ್ ಗ್ರೂಪ್ಸ್‌ನ ಸತ್ಯಶಂಕರ್, ಧಾರ್ಮಿಕ ಮತ್ತು ಸಮಾಜ ಸೇವೆಯಲ್ಲಿ ವೇ ಮೂ ಕಶೆಕೋಡಿ ಸೂರ್ಯನಾರಾಯಣ ಭಟ್, ಜನಪದ ವಿಭಾಗದಲ್ಲಿ ಡಾ. ರವೀಶ್ ಪಡುಮಲೆ, ಕೃಷಿ ವಿಭಾಗದಲ್ಲಿ ದೇವಿಪ್ರಸಾದ್ ಕಡಮಜೆ, ಮಳೆ ದಾಖಲೀಕರಣದಲ್ಲಿ ಪಿ.ಜಿ.ಎಸ್.ಎನ್ ಪ್ರಸಾದ್, ಯಕ್ಷಗಾನದಲ್ಲಿ ಗೋವಿಂದ ನಾಯಕ್ ಪಾಲೆಚ್ಚಾರು ಅವರನ್ನು ಸನ್ಮಾನಿಸಲಾಗುವುದು ಎಂದರು.

ಸಭಾ ಕಾರ್ಯಕ್ರಮದ ಬಳಿಕ ‘ಭಾರತೀಯ ಶ್ರೀಮಂತ ಜ್ಞಾನ ಸಂಪತ್ತಿನ ಅನಾವರಣ ಕಾರ್ಯಕ್ರಮದಲ್ಲಿ ಶಿಕ್ಷಣದ ಕುರಿತು ಹೊಸ ದೃಷ್ಟಿಕೋನ’ ಎಂಬ ವಿಚಾರಗೋಷ್ಠಿ ನಡೆಯಲಿದೆ. ಮೈಸೂರು ವಿವೇಕಾನಂದ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಮತ್ತು ಸ್ವಾಮಿ ವಿವೇಕಾನಂದ ಯುವಜನ ವಿಭಾಗದ ಮಾರ್ಗದರ್ಶಕ ಡಾ. ಸೀತಾರಾಮ್ ಎಂ.ಆರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್ ಧರ್ಮ ಮತ್ತು ಹಿರಿಯ ವಿದ್ಯಾರ್ಥಿ ಡಿಆರ್‌ಡಿಒ ವಿಜ್ಞಾನಿ ಡಾ. ಮಹಾದೇವ ಭಟ್ ಕಾನತ್ತಿಲ ಭಾಗವಹಿಸಲಿದ್ದಾರೆ. ಕಾಲೇಜಿನ ಸ್ನಾತಕೋತ್ತರ ವಿಭಾಗಗಳಲ್ಲಿ ಕಳೆದ ೧೦ ವರ್ಷಗಳಲ್ಲಿ ವ್ಯಾಸಂಗ ಮಾಡಿ ರ‍್ಯಾಂಕ್ ಗಳಿಸಿದ ವಿವಿಧ ವಿಭಾಗದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಮಾ.೨೩ಕ್ಕೆ ಸಪ್ತಪರ್ಣೋತ್ಸವ

ಮಾ.೨೩ಕ್ಕೆ ವಿದ್ಯಾರ್ಥಿ ಸಂಘದ ದಿನಾಚರಣೆಯಾಗಿ ಸಪ್ತಪರ್ಣೋತ್ಸವ ಕಾರ್ಯಕ್ರಮ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮತ್ತು ಕನ್ನಡ ಉಪನ್ಯಾಸಕಿ ಅರ್ಚನಾ ಆರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಗ್ಗೆ ಗಂಟೆ ೧೦ಕ್ಕೆ ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಮಣಿಪಾಲ ಎಂಬಿಟಿ ಇದರ ಸಹ ನಿರ್ದೇಶಕ ಡಾ. ರವಿಪ್ರಕಾಶ್ ರೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಪೂರ್ವಾಧ್ಯಕ್ಷ ಎಸ್.ಆರ್.ರಂಗಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣುಗಣಪತಿ ಭಟ್, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ ವಿಜಯ ಸರಸ್ವತಿ, ಉಪಪ್ರಾಂಶುಪಾಲ ಪ್ರೊ. ಶಿವಪ್ರಸಾದ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ನಿಡ್ಪಳ್ಳಿ ಮತ್ತು ಅಕ್ಷತಾ ಇದ್ದರು.

Share this article