ಕನ್ನಡಪ್ರಭ ವಾರ್ತೆ ಹುಣಸೂರು
ಅರ್ಜಿದಾರರ ಮೇಲ್ಮನವಿಯ ವಿಚಾರಣೆ ಅಂಗೀಕರಿಸುವ ಮೂಲಕ ಜೆಡಿಎಸ್-ಬಿಜೆಪಿ ಸದಸ್ಯರು, ಶಾಸಕ ಜಿ.ಡಿ. ಹರೀಶ್ ಗೌಡ ಸೇರಿದಂತೆ ಒಟ್ಟು 17 ಸದಸ್ಯರು ನಿರ್ಣಯದ ಪರಿವಾಗಿ ಕೈ ಎತ್ತುವ ಮೂಲಕ ಬೆಂಬಲಿಸಿದರೆ, 12 ಮಂದಿ ಕಾಂಗ್ರೆಸ್ ಸದಸ್ಯರು ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದರು.
ಎಸ್.ಡಿಪಿಐನ ಇಬ್ಬರು ಸದಸ್ಯರು ತಟಸ್ಥರಾಗಿ ಉಳಿದರೆ, ಜೆಡಿಎಸ್ ನ ಒಬ್ಬ ಸದಸ್ಯರಾದ ಮಾಜಿ ಅಧ್ಯಕ್ಷ ಶರವಣ ಗೈರಾಗಿದ್ದರು.ಘಟನೆ ವಿವರ: ಇತ್ತೀಚೆಗೆ ನಿರ್ಮಾಣಗೊಂಡಿರುವ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಗರಸಭೆ ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ, ನಿಯಮಬಾಹಿರವಾಗಿ ಸರ್ಕಾರಿ ರಸ್ತೆ ಸೆಪ್ಟಿಕ್ ಜಾಗ, ಸರ್ಕಾರಿ ಉದ್ಯಾನದ ಜಾಗವನ್ನು ಅತಿ ಕ್ರಮಿಸಿ ಕಟ್ಟಡ ನಿರ್ಮಿಸಿದ್ದಾರೆಂದು ಆರ್‌ಟಿಐ ಕಾರ್ಯಕರ್ತ ಒಬೇದುಲ್ಲ ಮತ್ತು ನಗರಸಭೆಯ ಕೆಲ ಸದಸ್ಯರು ಹೈಕೋರ್ಟ್ 2024ರಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ವಿಚಾರಣೆ ನಡೆಸಿ ಕಾನೂನಿನ ಉಲ್ಲಂಘನೆಯಾಗಿದೆ ಎಂದು ತಿಳಿಸಿ ನಗರಸಭೆ ಪೌರಾಯುಕ್ತರಿಗೆ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ತಮ್ಮ ಅಧಿಕಾರವನ್ನು ಬಳಸಲು ಸೂಚಿಸಿತ್ತು. ಇತ್ತೀಚೆಗೆ ನಗರಸಭೆಯಿಂದ ಈ ಕುರಿತು ಆಸ್ಪತ್ರೆ ವ್ಯವಸ್ಥಾಪಕರಿಗೆ ನೋಟೀಸ್ ಜಾರಿ ಮಾಡಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಸೂಚಿಸಿತ್ತು.
ಅದರಂತೆ ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಸೋಮವಾರ ವಿಶೇಷ ಸಭೆ ಆಯೋಜಿಸಿ ಮೇಲ್ಮನವಿಯ ಪುನರ್ ಪರಿಶೀಲನೆಗೆ ಮಾಡಲು ಸದಸ್ಯರ ಅಭಿಪ್ರಾಯ ಕೋರಿದ್ದರು. ಅದರಂತೆ ನಗರಸಭಾಧ್ಯಕ್ಷರು ಮೇಲ್ಮನವಿಯ ಪರಿಶೀಲನೆಗೆ ಬಹುಮತದ ಬೆಂಬಲ ಗಳಿಸಿದರು. ಶಾಸಕ ಜಿ.ಡಿ. ಹರೀಶ್ ಗೌಡ ಸಭೆಯಲ್ಲಿ ಹಾಜರಿದ್ದು, ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ನ ಸ್ವಾಮಿಗೌಢ ಮಾತನಾಡಿ, ನ್ಯಾಯಾಲಯ ನೀಡಿರುವ ತೀರ್ಪನ್ನು ಜಾರಿಗೊಳಿಸುವುದೇ ನಮ್ಮ ಆಯ್ಕೆಯಾಗಬೇಕು. ಸರ್ಕಾರಿ ಜಾಗ ಕಬಳಿಕೆ ಅಕ್ರಮವಾಗಿದ್ದು, ಮೇಲ್ಮನವಿ ಪರಿಷ್ಕರಣೆಗೆ ನಮ್ಮ ಬೆಂಬಲವಿಲ್ಲವೆಂದು ಘೋಷಿಸಿದರು.
ಹುಣಸೂರು ನಗರಸಭೆಯ ಆಸ್ತಿಗಳೆಷ್ಟು? ಆದಾಯವೆಷ್ಟು? ನಿಮ್ಮ ಆಸ್ತಿಗಳನ್ನು ಉಳಿಸಿಕೊಂಡಿದ್ದೀರಾ? ಆದಾಯ ಹೆಚ್ಚಿಸಲು ಕ್ರಮಗಳೇನು ವಹಿಸಿದ್ದೀರಿ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಅಧಿಕಾರಿಗಳಿಗೆ ಪ್ರಶ್ನಿಸುವ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡರು.
ಸಭೆಯಲಿ ಪೌರಾಯುಕ್ತೆ ಕೆ.ಮಾನಸ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸಾಮಾಜಿಕಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್, ಸದಸ್ಯರಾದ ದೊಡ್ಡಹೆಜ್ಜೂರು ರಮೇಶ್, ಮಾಲಿಕ ಪಾಷಾ, ದೇವರಾಜ್, ಮನು, ಮಂಜು, ಗೀತಾ ನಿಂಗರಾಜು, ಅಧಿಕಾರಿಗಳು ಇದ್ದರು.