- ಚಿಕ್ಕಮಗಳೂರು ನಗರದ ವಿವಿಧೆಡೆ ಸ್ವಚ್ಛತೆ, ಕಾರ್ಯಕ್ರಮಕ್ಕೆ ಚಾಲನೆ,
ನಗರಸಭೆ ಕುಡಿಯುವ ನೀರು, ಸ್ವಚ್ಛತೆ, ರಸ್ತೆ, ಚರಂಡಿ, ಬೀದಿದೀಪ ಮುಂತಾದ ಮೂಲಭೂತ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಜಿಲ್ಲಾ ಆಟದ ಮೈದಾನದ ಸುತ್ತ ಹಾಗೂ ನ್ಯಾಯಾಲಯ, ಎಲ್‌ಐಸಿ ರಸ್ತೆಯಲ್ಲಿ ನಗರಸಭೆಯಿಂದ ಸೋಮವಾರ ನಡೆದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅನುದಾನದ ಕೊರತೆ ಮುಂದಿಟ್ಟುಕೊಂಡು ಜನರ ಅನಿಸಿಕೆ ಗಳಿಗೆ ತೊಂದರೆಯಾಗಬಾರದು. ನಗರಸಭೆ ಸಿಬ್ಬಂದಿಗಳನ್ನು ಬಳಸಿಈ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದು ಸಲಹೆ ನೀಡಿದರು.ಸ್ವಚ್ಚತೆಗೆ ಆದ್ಯತೆ ಈ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು. ನಗರದಲ್ಲಿ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆರವು ಮಾಡದಿದ್ದರೆ ₹5 ಸಾವಿರ ದಂಡ ವಿಧಿಸುವುದಾಗಿ ಸಂಬಂಧಪಟ್ಟ ಮಾಲೀಕರಿಗೆ ಸೂಚನಾ ಪತ್ರ ನೀಡಿ ಎಂದು ಹೇಳಿದರು.
ಸಂತೆ ಮಾರ್ಕೆಟ್‌ನಲ್ಲಿ ಜನರ ಓಡಾಟಕ್ಕೆ ತೊಂದರೆಯಾಗುವಂತೆ ಕಟ್ಟೆಯ ಮುಂಭಾಗದಲ್ಲಿ ತರಕಾರಿ ಇಡುತ್ತಿದ್ದಾರೆ. ಇದಕ್ಕೆ ನಗರಸಭೆ ಕಡಿವಾಣ ಹಾಕಬೇಕು, ಸ್ವಚ್ಚತೆಗೆ ಆದ್ಯತೆ ನೀಡಬೇಕು. ಈ ಎಲ್ಲಾ ಕಾರ್ಯಗಳು ಮುಂದಿನ 9 ತಿಂಗಳ ಅಧಿಕಾರವಧಿಯಲ್ಲಿ ನಿರಂತರವಾಗಿ ಸಾಗಬೇಕು ಎಂದು ಸಲಹೆ ನೀಡಿದರು.
ಪೌರ ಕಾರ್ಮಿಕರ ಹಲವು ಬೇಡಿಕೆಗಳ ಬಗ್ಗೆ ಶಾಸಕರ ನೇತೃತ್ವದಲ್ಲಿ ನಿಯೋಗ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಗೆಹರಿಸುವ ಜೊತೆಗೆ ನಗರಸಭೆಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.
ಸದಸ್ಯ ಎ.ಸಿ. ಕುಮಾರಗೌಡ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಯೋಜನೆ ರೂಪಿಸಲಾಗಿದೆ. ಜೊತೆಗೆ ಇಂದಿನಿಂದ ಕಸಮುಕ್ತ ನಗರ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಬಿ.ಸಿ. ಬಸವರಾಜ್, ಆರೋಗ್ಯ ನಿರೀಕ್ಷರು ಮತ್ತು ಸಿಬ್ಬಂದಿ ಹಾಜರಿದ್ದರು. 7 ಕೆಸಿಕೆಎಂ 1ಚಿಕ್ಕಮಗಳೂರು ನಗರದ ಎಲ್‌ಐಸಿ ರಸ್ತೆಯಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಸ್ವಚ್ಛತೆಗೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಪೌರಾಯುಕ್ತ ಬಿ.ಸಿ. ಬಸವರಾಜ್ ಇದ್ದರು.