ರಸ್ತೆ ಅಗಲೀಕರಣ ಏಕ ಪಕ್ಷೀಯ ತೀರ್ಮಾನಕ್ಕೆ ಆಕ್ಷೇಪ । ಶಾಸಕ ವೀರೇಂದ್ರ ಪಪ್ಪಿ ವಿರುದ್ಧ ಸದಸ್ಯರ ಪರೋಕ್ಷ ವಾಗ್ದಾಳಿ ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಂಗಳವಾರ ನಡೆದ ಚಿತ್ರದುರ್ಗ ನಗರಸಭೆ ಸಾಮಾನ್ಯ ಸಭೆಯಲ್ಲಿ ನಾನಾ ನೀನಾ ಎಂಬ ಸಂವಿಧಾನಾತ್ಮಕ ಅಂಶಗಳು ಸಭೆಯುದ್ದಕ್ಕೂ ಮಾರ್ದನಿಸಿತು. ಪಕ್ಷಾತೀತವಾಗಿ ಸದಸ್ಯರು ಶಾಸಕ ವೀರೇಂದ್ರ ಪಪ್ಪಿ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದರು. ರಸ್ತೆ ಅಗಲೀಕರಣದ ವಿಚಾರದಲ್ಲಿ ಏಕ ಪಕ್ಷೀಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಪಗಳ ಮಳೆಗರೆದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಗೊಪ್ಪೆ ಮಂಜುನಾಥ್, ಕಟ್ಟಡಗಳ ಅಳತೆ ಮಾಡಿ 21 ಮೀಟರ್‌ಗೆ ಕೆಂಪು ಮಾರ್ಕ್ ಹಾಕಲು ಯಾರು ಹೇಳಿದರು. ಮುಖ್ಯರಸ್ತೆ ಕಟ್ಟಡಗಳು ನಗರಸಭೆ ವ್ಯಾಪ್ತಿಗೆ ಬರುತ್ತವೆಯೇ ಇಲ್ಲವೋ, ಈ ವಿಚಾರದಲ್ಲಿ ಕೌನ್ಸಿಲ್ ತೀರ್ಮಾನ ತೆಗೆದುಕೊಳ್ಳುವಂತಿಲ್ಲವಾ ಎಂಬಿತ್ಯಾದಿ ಪ್ರಶ್ನೆಗಳ ಹರವಿದರು.ಈ ಮಾತಿಗೆ ಪ್ರತಿಕ್ರಿಯಿಸಿದ ಪೌರಾಯುಕ್ತೆ ರೇಣುಕಾ, ನಗರಸಭೆ ಕೌನ್ಸಿಲ್ ನಿರ್ಣಯ ಕೈಗೊಳ್ಳದ ಹೊರತು ಏನೂ ಮಾಡಲು ಬರುವುದಿಲ್ಲ, ಹಾಗಾಗಿಯೇ ರಸ್ತೆ ಒತ್ತುವರಿ ತೆರವು ವಿಷಯವ ಸಭೆಯ ಗಮನಕ್ಕೆ ಏತರಲಾಗಿದೆ ಎಂದರು. ಪೌರಾಯುಕ್ತರ ಮಾತು ಗೊಪ್ಪೆ ಮಂಜುನಾಥ್‌ರಲ್ಲಿ ಕೋಪ ತರಿಸಿತು. ಒತ್ತುವರಿ ತೆರವೋ ಅಥವಾ ರಸ್ತೆ ಅಗಲೀಕರಣವೋ ಮೊದಲು ಸ್ಪಷ್ಟಪಡಿಸಿ. ಒತ್ತುವರಿ ಬೇರೆ, ತೆರವು ಬೇರೆ ಎಂದು ಏರು ದನಿಯಲ್ಲಿ ಪ್ರಶ್ನಿಸಿದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯ ಜೈನುದ್ದೀನ್, ಕಳೆದ ಒಂದುವರೆ ತಿಂಗಳಿಂದ ನಗರಸಭೆಯಲ್ಲಿ ನೌಕರರಾರೂ ಕೆಲಸ ಮಾಡಿಲ್ಲ. ಎಲ್ಲರೂ ಕಟ್ಟಡಗಳ ಮೇಲೆ ಮಾರ್ಕಿಂಗ್ ಮಾಡಲು ಹೋಗಿದ್ದಾರೆ. ಸಾರ್ವಜನಿಕರು ಕೆಲಸವಾಗದೆ ಶಪಿಸಿ ವಾಪಾಸ್ಸು ಹೋಗಿದ್ದಾರೆ. ಕೌನ್ಸಿಲ್ ನಿರ್ಣಯ ಆಗದೆ ಮಾರ್ಕ್ ಮಾಡೋಕೆ ನೌಕರರ ಏಕೆ ಕಳಿಸಿಬೇಕಿತ್ತು ಎಂದು ಪ್ರಶ್ನಿಸಿದರು.
ತೆರವು ಕಾರ್ಯಾಚರಣೆಗೆ ಸರ್ಕಾರದಿಂದ ಯಾವುದೇ ರೀತಿಯ ಹಣ ಕೊಡುವುದಿಲ್ಲವೆಂದು ಪೌರಾಡಳಿತ ನಿರ್ದೇಶಕರು ಈಗಾಗಲೇ ಸುತ್ತೋಲೆ ಹೊರಡಿಸಿದ್ದಾರೆ. ಹಾಗಾಗಿ ಏನೇ ತೆರವು ಗೊಳಿಸಿದರೂ ಅದರ ವೆಚ್ಚ ನಗರಸಭೆಯೇ ಭರಿಸಬೇಕಾಗುತ್ತದೆ. ಹಾಗೊಂದು ವೇಳೆ ನಗರಸಭೆ ಅನುದಾನಕ್ಕಾಗಿ ಸರ್ಕಾರವನ್ನು ಕೋರಬಹುದು ಎಂದು ಪೌರಾಯುಕ್ತೆ ರೇಣುಕಾ ಹೇಳಿದರು.ರಸ್ತೆ ಅಗಲೀಕರಣಕ್ಕೆ ಮಾರ್ಕ್ ಮಾಡಿರುವುದರಿಂದ ಜನ ನಮ್ಮನ್ನು ಬಿಡುತ್ತಿಲ್ಲ, ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರ ವರೆಗೂ ಯಾವಾಗ, ಎಷ್ಟು ಮೀಟರ್ ಎಂಬಿತ್ಯಾದಿ ಪ್ರಶ್ನೆ ಕೇಳುತ್ತಿದ್ದಾರೆ. ಅಗಲೀಕರಣದ ಪ್ರಸ್ತಾಪವಾದ ನಂತರ ಯಾರೂ ಕಂದಾಯ ಕಟ್ಟುತ್ತಿಲ್ಲ, ನಗರಸಭೆಗೆ 2 ಕೋಟಿ ನಷ್ಟವಾಗಿದೆ. ಇದಕ್ಕೆ ಯಾರು ಹೊಣೆ ಎಂದು ಗೊಪ್ಪೆ ಮಂಜುನಾಥ್ ಪ್ರಶ್ನಿಸಿದರು.