ಹಗರಿಬೊಮ್ಮನಹಳ್ಳಿ: ಸಾಮಾನ್ಯ ಸಭೆಯನ್ನು ಕರೆಯುವಂತೆ ಸ್ವಪಕ್ಷೀಯರು ಸೇರಿದಂತೆ ಬಹುತೇಕ ಸದಸ್ಯರು ಪಟ್ಟು ಹಿಡಿದು ಗದ್ದಲ ಮಾಡಿದ್ದರಿಂದ ಪಟ್ಟಣದ ಪುರಸಭೆಯ ಕಾರ್ಯಾಲಯದಲ್ಲಿ ಮಂಗಳವಾರ ಕರೆಯಲಾಗಿದ್ದ ಬಜೆಟ್ ಪೂರ್ವ ಸಿದ್ಧತಾ ಸಭೆ ಹಠಾತ್ ರದ್ದಾಯಿತು.
ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೇ ಪಟ್ಟಣದ ಸಾರ್ವಜನಿಕರು ಉಸಿರಾಡುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಗಳು ಹಾಗೆಯೇ ಉಳಿದಿವೆ. ಯಾವ ವಾರ್ಡ್ ಅಭಿವೃದ್ಧಿ ಮಾಡಿದ್ದೀರಿ ಎಂದು ಬಹುತೇಕ ಸದಸ್ಯರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.
ಮಾಸಿಕ ಸಭೆ ಸೇರಿದಂತೆ ತುರ್ತು ಸಭೆಗಳನ್ನು ಕರೆಯಲಾಗುತ್ತಿಲ್ಲ. ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಯಾಗಿಲ್ಲ ಎಂದು ಸದಸ್ಯ ದೀಪಕ್ ಕಠಾರೆ ಮತ್ತು ಸಾರ್ವಜನಿಕ ಸಮಸ್ಯೆ ಕುರಿತಂತೆ ನಿಮ್ಮ ಬಳಿ ಯಾವ ದಾಖಲೆ ಇದೆ ಎಂದು ಸದಸ್ಯ ಜೋಗಿ ಹನಮಮಂತ ಪ್ರಶ್ನಿಸಿದರು.ಮನೆಗಳಿಗೆ ಗ್ಯಾಸ್ ವಿತರಿಸುವ ಸಂಸ್ಥೆ ಪೈಪಲೈನ್‌ಗಾಗಿ ರಸ್ತೆಗಳನ್ನು ಅಗೆದು ಹಾಳು ಮಾಡಿದೆ. ಇವರ ಕಡೆಯಿಂದ ಎಷ್ಟು ಹಣ ಕಟ್ಟಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ಒದಗಿಸುವಂತೆ ಅಂಬಳಿ ರವೀಂದ್ರಗೌಡ ಕೇಳಿದರು. ಪಟ್ಟಣದ ಸಾರ್ವಜನಿಕರ ಸಮಸ್ಯೆ ಬಗೆಹರಿಯುವ ಮೊದಲೇ ಬಜೆಟ್ ಸಿದ್ಧತೆಯ ಅಗತ್ಯವಿಲ್ಲ ಎಂದು ಸದಸ್ಯ ರಾಜೇಶ್ ಬ್ಯಾಡಗಿ ಹರಿಹಾಯ್ದರು.
ಸಭೆಯಲ್ಲಿ ತೀವ್ರ ಕೋಲಾಹಲ ಉಂಟಾದಾಗ, ಅಧ್ಯಕ್ಷರಾದ ಮರಿರಾಮಣ್ಣ ಮುಂದಿನ ತಿಂಗಳು ಮಾ. 10ರಂದು ಸಾಮಾನ್ಯ ಸಭೆ ಕರೆದು ಮುಂದಿನ ದಿನಗಳಲ್ಲಿ ಬಜೆಟ್ ಪೂರ್ವ ಸಭೆ ನಿಯೋಜಿಸಲಾಗುವುದು ಎಂದು ಸಭೆಯನ್ನು ಬರಕಾಸ್ತುಗೊಳಿಸಿದರು.