ವಿಂಟೇಜ್ ಕಾರ್ ರ್ಯಾಲಿಯ ಮೂಲಕ ಮತದಾನ ಜಾಗೃತಿ

KannadaprabhaNewsNetwork |  
Published : Apr 07, 2024, 01:54 AM IST
5 | Kannada Prabha

ಸಾರಾಂಶ

ಪ್ರಜೆಗಳೆಲ್ಲರೂ ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಯಜಮಾನರು. ಇದನ್ನು ಹೆಚ್ಚಿನ ಜಾಗರೂಕತೆಯಿಂದ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಆಗಿರುತ್ತದೆ. ಹೀಗಾಗಿ, ಪ್ರತಿ ಬಾರಿಯೂ ಚುನಾವಣಾ ಹಬ್ಬದ ಮೆರಗನ್ನು ಹೆಚ್ಚಿಸಲು ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಮತದಾರರಲ್ಲಿ ಚುನಾವಣಾ ಅರಿವು ಮೂಡಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಪುರಭವನದಿಂದ ಡಿ. ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆಯ ಮೂಲಕ ಪುರಭವನದವರೆಗೆ ವಿಂಟೇಜ್ ಕಾರ್ ರ್ಯಾಲಿಯನ್ನು ಶನಿವಾರ ಆಯೋಜಿಸಲಾಗಿತ್ತು.

ಈ ವಿಂಟೇಜ್ ಕಾರ್ ರ್ಯಾಲಿಗೆ ಚಾಲನೆ ನೀಡಿದ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, 70 ರಿಂದ 75 ವರ್ಷಗಳ ಇತಿಹಾಸವಿರುವ ಈ ಚುನಾವಣೆ ಮತ್ತು ವಿಂಟೇಜ್ ಕಾರ್ ಅನ್ನು ಹೋಲಿಸಿದರೆ ಪ್ರತಿ ವರ್ಷವೂ ಅದರ ಮಹತ್ವ ಹಾಗೂ ಛಾಪು ಹೆಚ್ಚಾಗುತ್ತಲೇ ಇದೆ ಎಂದರು.

ಪ್ರಜೆಗಳೆಲ್ಲರೂ ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಯಜಮಾನರು. ಇದನ್ನು ಹೆಚ್ಚಿನ ಜಾಗರೂಕತೆಯಿಂದ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಆಗಿರುತ್ತದೆ. ಹೀಗಾಗಿ, ಪ್ರತಿ ಬಾರಿಯೂ ಚುನಾವಣಾ ಹಬ್ಬದ ಮೆರಗನ್ನು ಹೆಚ್ಚಿಸಲು ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಅವರು ಕರೆ ನೀಡಿದರು.

ಪ್ರತಿಯೊಬ್ಬ ಮತದಾರನು ಈ ದೇಶದ ಹಾಗೂ ಪ್ರಜಾಪ್ರಭುತ್ವದ ಆಸ್ತಿ. ಮತದಾರರು ಯಾವುದೇ ರೀತಿಯ ಚುನಾವಣಾ ಅಕ್ರಮವನ್ನು ಮಾಡದೆ ನೈತಿಕ ಮತದಾನವನ್ನು ಮಾಡಿ ಬೇರೆಯವರಿಗೂ ನೈತಿಕ ಮತದಾನ ಮಾಡುವಂತೆ ಅರಿವು ಮೂಡಿಸಬೇಕು ಎಂದರು.

ಕಳೆದ 2018 ರ ಚುನಾವಣೆಯಲ್ಲಿ ಮೈಸೂರಿನಲ್ಲಿ ಶೇ.70 ರಷ್ಟು ಮತದಾನವಾಗಿದ್ದು, ಈ ಬಾರಿ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಫ್ಲಾಶ್ ಮಾಬ್, ರ್ಯಾಲಿ ಸೇರಿದಂತೆ ಮಾಲ್, ಅಪಾರ್ಟ್ಮೆಂಟ್ ಹೀಗೆ ನಗರದಾಧ್ಯಂತ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿ, ನಗರ ಪ್ರದೇಶದ ಮತದಾರರು ಹಾಗೂ ಯುವಜನರನ್ನು ಸೆಳೆಯಲಾಗುತ್ತಿದೆ ಎಂದು ಅವರು ವಿವರಿಸಿದರು.

ಎಷ್ಟೋ ಜನರು ಅಕ್ಷರಸ್ಥರಾಗಿದ್ದರೂ ಮತದಾನದ ವಿಷಯದಲ್ಲಿ ಪ್ರಜ್ಞಾವಂತರಾಗಿರುವುದಿಲ್ಲ. ಅಂತಹವರಿಗೂ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸ್ವೀಪ್ ಸಮಿತಿ ಮಾಡುತ್ತಿದೆ. ಹೀಗಾಗಿ, ಪ್ರತಿಯೊಬ್ಬರೂ ಮತದಾನದ ಮಹತ್ವವನ್ನು ಅರಿತು ಕಡ್ಡಾಯವಾಗಿ ಮತ ಹಾಕಬೇಕು ಎಂದರು.

ಜಿಲ್ಲಾ ಸ್ವೀಟ್ ಸಮಿತಿಯ ಅಧ್ಯಕ್ಷರಾದ ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಮೈಸೂರು ಎಸ್ಪಿ ಸೀಮಾ ಲಾಟ್ಕರ್, ನಗರ ಪಾಲಿಕೆಯ ಆಯುಕ್ತೆ ಡಾ.ಎನ್.ಎನ್. ಮಧು, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಎಸಿಪಿ ಶಾಂತಮಲ್ಲಪ್ಪ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು
ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ