ಕನ್ನಡಪ್ರಭ ವಾರ್ತೆ ಸಕಲೇಶಪುರ
ವಾಣಿಜ್ಯಮಳಿಗೆಗಳ ಬಾಕಿ ಬಾಡಿಗೆ ವಸೂಲು ಮಾಡಿ ಎಂಬ ಜಿಲ್ಲಾಧಿಕಾರಿಗಳ ಕಟ್ಟನಿಟ್ಟಿನ ಆದೇಶದಿಂದ ಬೆಚ್ಚಿದ ಪುರಸಭೆ ಅಧಿಕಾರಿಗಳು ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಬಾಡಿಗೆ ಕಟ್ಟದ ಏಳು ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿದರು.ಬಾಡಿಗೆ ವಸೂಲಿ ಮಾಡಿ ಅಥವಾ ಅಮಾನತಿಗೆ ಸಿದ್ಧರಾಗಿ ಎಂಬ ಜಿಲ್ಲಾಧಿಕಾರಿಗಳ ಆದೇಶದಿಂದ ಬೆದರಿದ ಅಧಿಕಾರಿಗಳು ಶುಕ್ರವಾರ ಹಾಗೂ ಶನಿವಾರ ಕಾರ್ಯಾಚರಣೆ ನಡೆಸಿ ಹೇಮಾವತಿ ಸಂಕೀರ್ಣದಲ್ಲಿನ ಎರಡು ಅಜಾದ್ ರಸ್ತೆಯಲ್ಲಿ ೧೦ನೇ ಹಣಕಾಸು ಯೋಜನೆಯಡಿ ನಿರ್ಮಿಸಿದ್ದ ಐದು ಮಳಿಗೆಗಳಿಗೆ ಬೀಗ ಹಾಕಲಾಯಿತು. ಈ ಐದು ಮಳಿಗೆಗಳಿಂದ ೨೦ ಲಕ್ಷ ಬಾಡಿಗೆ ಬಾಕಿ ಇದ್ದು ಒಳಬಾಡಿಗೆ ನೀಡುವ ಮೂಲಕ ಬಾಡಿಗೆದಾರರಿಗೆ ಹಾಗೂ ಪುರಸಭೆಗೆ, ಪುರಸಭೆ ಮಾಜಿ ಅಧ್ಯಕ್ಷರೊಬ್ಬರು ವಂಚಿಸಿದ್ದಾರೆ ಎಂಬ ಆರೋಪ ಮಳಿಗೆಗಳಿಗೆ ಬೀಗ ಹಾಕುವ ವೇಳೆ ಕೇಳಿ ಬಂದಿತ್ತು. ಪುರಸಭೆಗೆ ಸೇರಿದ ೧೪೦ ಮಳಿಗೆಗಳಿದ್ದು, ೮೯ ಲಕ್ಷ ಬಾಡಿಗೆ ಬಾಕಿ ಇದೆ. ಎರಡು ದಿನಗಳ ಕಾರ್ಯಾಚರಣೆಯಲ್ಲಿ ೧೫ ಲಕ್ಷ ರು. ವಸೂಲಾತಿಯಾಗಿದ್ದು ವಾರಕ್ಕೊಮ್ಮೆ ಮತ್ತೆ ಇದೆ ರೀತಿಯ ಕಾರ್ಯಾಚರಣೆ ನಡೆಸುವ ಮೂಲಕ ಬಾಕಿ ಬಾಡಿಗೆ ವಸೂಲು ಮಾಡಲಾಗುವುದು ಎಂದು ಕಾರ್ಯಾಚರಣೆ ವೇಳೆ ಪುರಸಭೆ ಮುಖ್ಯಾಧಿಕಾರಿ ನಟರಾಜ್ ತಿಳಿಸಿದರು.
ಪಕ್ಷಪಾತ ಬೇಡ: ಅಮಾಯಕ ಅಂಗಡಿ ಮಾಲೀಕರ ಅಂಗಡಿಗಳಿಗೆ ಬೀಗ ಹಾಕುವುದು, ಪ್ರಭಾವಿಗಳ ಅಂಗಡಿಗಳಿಗೆ ಬೀಗ ಹಾಕದೆ ಇರುವ ಪುರಸಭೆ ಅಧಿಕಾರಿಗಳ ನಡೆಯನ್ನು ಖಂಡಿಸಿದ ಸಾರ್ವಜನಿಕರು, ಬಾಡಿಗೆ ಬಾಕಿ ಮಾಡಿಕೊಂಡಿರುವ ಪುರಸಭೆ ಮಾಜಿ ಅಧ್ಯಕ್ಷರೊಬ್ಬರ ಅಂಗಡಿಗೆ ಬೀಗ ಹಾಕಿ, ತಪ್ಪಿದಲ್ಲಿ ಈಗ ಬೀಗ ಹಾಕಿರುವ ಅಂಗಡಿಯ ಬಾಗಿಲು ತೆಗೆಸಿ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷರ ಅಂಗಡಿಗೂ ಬೀಗ ಹಾಕಿಸಲಾಯಿತು.ಕಾರ್ಯಾಚರಣೆಯಲ್ಲಿ ಮುಖ್ಯಾಧಿಕಾರಿ ನಟರಾಜ್, ಕಂದಾಯ ನಿರೀಕ್ಷಕ ಕರವಸೂಲಿಗಾರರಾದ ಅನಿಲ್, ಪುಟ್ಟರಾಜ್, ರೇವಣ್ಣ, ಶ್ರೀನಿವಾಸ್ ಸೇರಿದಂತೆ ಹಲವರು ಭಾಗಿಯಾಗಿದ್ದರು.