ಸಂಪತ್‌ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗೆ ಪೊಲೀಸ್ ತನಿಖೆ ಚುರುಕು

KannadaprabhaNewsNetwork |  
Published : May 16, 2025, 02:37 AM IST
ಪ್ರಕರಣ | Kannada Prabha

ಸಾರಾಂಶ

ಸೋಮವಾರಪೇಟೆ ಮೂಲದ ಸಂಪತ್‌ ಎನ್ ಡಿ ಅಲಿಯಾಸ್‌ ಶಂಭುವನ್ನು ಅಮಾನುಷವಾಗಿ ಕತ್ತಿಯಿಂದ ಕಡಿದು ಹತ್ಯೆ ಮಾಡಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕಳೆದ ಶುಕ್ರವಾರದಂದು ನಾಪತ್ತೆಯಾಗಿ ಬುಧವಾರ ಮಾಗೇರಿ ಸಮೀಪದ ಹೊಸಳ್ಳಿ ಮಠದ ಸನಿಹ ದೂರದಲ್ಲೇ ಇದ್ದ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದ ಸೋಮವಾರಪೇಟೆ ಮೂಲದ ಸಂಪತ್ ಎನ್.ಡಿ ಅಲಿಯಾಸ್ ಶಂಭುವನ್ನು ಅಮಾನುಷವಾಗಿ ಕತ್ತಿಯಿಂದ ಕಡಿದು ಹತ್ಯೆ ಮಾಡಿರುವುದಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.ಪ್ರಕರಣದ ಕುರಿತು ಗುರುವಾರ ಹಾರಂಗಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಎಸ್ಪಿ ಅವರು, ಹತ್ಯೆಗೆ ಅಕ್ರಮ ಸಂಬಂಧವೇ ಪ್ರಮುಖ ಕಾರಣ ಎನ್ನಲಾಗಿದ್ದು, ಕೇಸಿಗೆ ಸಂಬಂಧಿಸಿದಂತೆ ಹಾನಗಲ್ ಗ್ರಾಮದ ಸಂಗೀತ, ಆಕೆಯ ಪತಿ ಕಿರಣ್ ಮತ್ತು ಚೌಡ್ಲು ಗ್ರಾಮದ ಪಿ.ಎಂ.ಗಣಪತಿ ಅವರು ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದು, ಪ್ರಕರಣದ ಕುರಿತು ಮೂವರನ್ನು ಸೆರೆ ಹಿಡಿಯಲು ಪೊಲೀಸ್ ಇಲಾಖೆ ತಂಡಗಳು ಮುಂದಾಗಿದೆ ಎಂದು ತಿಳಿಸಿದ್ದಾರೆ.ಶವ ಎಸೆದು ಪರಾರಿ:

ಸಂಪತ್ ನನ್ನು ಕೊಲೆ ಮಾಡಿ ಯಸಳೂರು ಠಾಣಾ ವ್ಯಾಪ್ತಿಯಲ್ಲಿ ಶವವನ್ನು ಎಸೆದು ಪರಾರಿಯಾಗಿದ್ದಾರೆ. ಅಲ್ಲದೇ 2023ರ ಮೇ ತಿಂಗಳಲ್ಲಿ ಆರೋಪಿ ಸಂಗೀತ ಮತ್ತು ಆಕೆಯ ಪುತ್ರಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಮೃತ ಸಂಪತ್ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ಶೀಘ್ರ ಪತ್ತೆಗಾಗಿ ಕ್ರಮ ಜರುಗಿಸಬೇಕೆಂದು ಮೃತ ಸಂಪತ್ ಸಹೋದರ ವಿನೋದ್ ಅವರು ಬುಧವಾರ ರಾತ್ರಿ ಕುಶಾಲನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ತನ್ನ ಸಹೋದರನಿಗೆ ಹಣಕಾಸು ವಿಚಾರ ಹಾಗೂ ಸಂಗೀತ ಹಾಗೂ ಕಿರಣ್ ಅವರು ಸಂಪತ್ ಖರೀದಿಸಿದ ಆಸ್ತಿಯನ್ನು ನೊಂದಣಿ ಮಾಡಿಕೊಡದ ಹಿನ್ನೆಲೆಯಲ್ಲಿ ಹಾಗೂ ಇಟ್ಟಿಗೆ ಫ್ಯಾಕ್ಟರಿ ಸಂಬಂಧಿಸಿದಂತೆ ಹಣವನ್ನು ಮರುಪಾವತಿ ಮಾಡುವ ಕುರಿತು ಸಂಪತ್ ರವರು ಕಿರಣ್ ಮತ್ತು ಮನೆಯವರಿಗೆ ಕೇಳಿಕೊಂಡಿದ್ದಾನೆ. ಈ ವಿಚಾರದ ಕುರಿತು ಆರೋಪಿಗಳಿಗೂ ಮತ್ತು ಸಂಪತ್ ನಡುವೆ ಜಗಳವಾಗಿದ್ದು, ಈ ಸಂಬಂಧ ತನ್ನ ಸಹೋದರನಿಗೆ ಕೊಲೆ ಬೆದರಿಕೆ ಹಾಕಿದ್ದರು. ಆದ್ದರಿಂದ ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ಕುಶಾಲನಗರ ಟೌನ್ ಠಾಣೆಯ ಪೊಲೀಸರು ದಿನಾಂಕ ಮೇ 10 ರಂದು ವರದಿಯಾಗಿದ್ದ ಕಾಣೆ ಪ್ರಕರಣದಲ್ಲಿ ಮೇ 14 ರಂದು ಕಲಂ 61 103(2), 238, 309 (4) ರೆ,/ವಿ 3(5) ಬಿಎನ್‌ಎಸ್ ಅನ್ನು ಅಳವಡಿಸಿಕೊಂಡು ಮಾನ್ಯ ನಾಯಾಲಯಕ್ಕೆ ತನಿಖೆ ನಡೆಸಲು ವರದಿಯನ್ನು ಸಲ್ಲಿಸಿದ್ದಾರೆ. ಮೃತ ಸಂಪತ್ ಅಂತ್ಯಕ್ರಿಯೆ: ಹತ್ಯೆಯಾದ ಮೃತ ಸಂಪತ್‌ನ ಮರಣೋತ್ತರ ಪರೀಕ್ಷೆ ಗುರುವಾರ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಗ್ಗೆ ನಡೆದು, ಶವವನ್ನು ಸೋಮವಾರಪೇಟೆಯ ನಿವಾಸಕ್ಕೆ ತರಲಾಯಿತು. ನಂತರ ಕರ್ಕಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರವನ್ನು ನೆರವೇರಿಸಲಾಯಿತು. ಸಂಪತ್‌ನ ಮೃತ ದೇಹ ಮನೆಗೆ ಆಗಮಿಸುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮಟ್ಟಿತ್ತು. ಮೃತ ಸಂಪತ್ ಸ್ನೇಹಿತರು ಹಾಗೂ ಅಪಾರ ಬಂಧು ಬಳಗ ಅಂತ್ಯಕ್ರಿಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?