ಜನರ ಕೈಗೆ ಆರ್‌ಟಿಸಿ ಕಾಂಗ್ರೆಸ್‌ ಕೊಡುಗೆ: ಐವನ್‌

KannadaprabhaNewsNetwork |  
Published : May 16, 2025, 02:29 AM IST
ಐವನ್‌ ಡಿಸೋಜ | Kannada Prabha

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐವನ್‌, ಕಳೆದ ಬಿಜೆಪಿ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಆರ್‌. ಅಶೋಕ್‌ ಅವರು ಪ್ರತಿ ಮನೆಗೆ ಆರ್‌ಟಿಸಿ ನೀಡುತ್ತೇವೆ ಎಂದು ಘೋಷಿಸಿದ್ದರೂ ಅವರಿಂದ ಕೊಡಲು ಸಾಧ್ಯವಾಗಿಲ್ಲ. ಆದರೆ ಕಾಂಗ್ರೆಸ್‌ ಸರ್ಕಾರ ಈ ಭರವಸೆಯನ್ನು ಪ್ರಣಾಳಿಕೆಯಲ್ಲೇ ಘೋಷಿಸಿದ್ದು, ಕಾರ್ಯರೂಪಕ್ಕೂ ತರುತ್ತಿದ್ದೇವೆ ಎಂದು ಹೇಳಿದರು.

ಸಿಎಂ ಅವರಿಂದ ಇಂದು 8 ಸಾವಿರ ಜನರಿಗೆ ಉಚಿತವಾಗಿ ಆರ್‌ಟಿಸಿ ವಿತರಣೆ

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಯಲ್ಲಿ ದಾಖಲೆಯ 8 ಸಾವಿರಕ್ಕೂ ಅಧಿಕ ಮಂದಿಗೆ ಏಕಕಾಲದಲ್ಲಿ ಆರ್‌ಟಿಸಿ ದಾಖಲೆಗಳನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಇಂದು (ಶುಕ್ರವಾರ) ವಿತರಿಸಲಿದ್ದಾರೆ. ಬಿಜೆಪಿ ಅವಧಿಯಲ್ಲಿ ಸಾಧ್ಯವಾಗದ ಈ ಜನಪರ ಕೆಲಸವನ್ನು ಕಾಂಗ್ರೆಸ್‌ ಮಾಡಿ ತೋರಿಸಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ, ಕೆಲಸ ಆಗುತ್ತಿಲ್ಲ ಎನ್ನುತ್ತಿರುವ ಬಿಜೆಪಿಯವರೇ, ಇದು ಅಭಿವೃದ್ಧಿ ಕೆಲಸ ಅಲ್ವಾ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಿಜೆಪಿ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಆರ್‌. ಅಶೋಕ್‌ ಅವರು ಪ್ರತಿ ಮನೆಗೆ ಆರ್‌ಟಿಸಿ ನೀಡುತ್ತೇವೆ ಎಂದು ಘೋಷಿಸಿದ್ದರೂ ಅವರಿಂದ ಕೊಡಲು ಸಾಧ್ಯವಾಗಿಲ್ಲ. ಆದರೆ ಕಾಂಗ್ರೆಸ್‌ ಸರ್ಕಾರ ಈ ಭರವಸೆಯನ್ನು ಪ್ರಣಾಳಿಕೆಯಲ್ಲೇ ಘೋಷಿಸಿದ್ದು, ಕಾರ್ಯರೂಪಕ್ಕೂ ತರುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪೋಡಿ ಅಭಿಯಾನದ ಮೂಲಕ ಹೆಚ್ಚುವರಿಯಾಗಿ ಸರ್ವೇಯರ್‌ಗಳನ್ನು ಕರೆಸಿ ಯುದ್ಧೋಪಾದಿಯಲ್ಲಿ ಸರ್ವೇ ಮಾಡಿ, ಆರ್‌ಟಿಸಿ ಇಲ್ಲದ ಜನರಿಗೆ ಪುಕ್ಕಟೆಯಾಗಿ ಆರ್‌ಟಿಸಿ ಮತ್ತು ಜಾಗದ ಸ್ಕೆಚ್‌ ನೀಡುವ ಕಾರ್ಯ ನಡೆಯುತ್ತಿದೆ. ಈ ಪೋಡಿ ಕಾರ್ಯದಲ್ಲಿ ಮೇ 15ಕ್ಕೆ ಅನ್ವಯಿಸಿದಂತೆ ದ.ಕ. ಜಿಲ್ಲೆ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ. ಯಾವುದೇ ಮಧ್ಯವರ್ತಿಗಳ ಕಾಟ ಇಲ್ಲದೆ, ಯಾವ ಶುಲ್ಕವೂ ಇಲ್ಲದೆ ಸರ್ಕಾರವೇ ಜನರ ಜಾಗದ ದಾಖಲೆ ಮಾಡಿಕೊಡುತ್ತಿರುವುದರಿಂದ ಜನರ ಬಹುದೊಡ್ಡ ಬೇಡಿಕೆ ಈಡೇರುತ್ತಿದೆ ಎಂದು ಐವನ್ ಡಿಸೋಜ ಹೇಳಿದರು.

ಮಳೆಗಾಲ ಮೊದಲು ಸಿಎಂ ಸಭೆ:

ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮಳೆಗಾಲಕ್ಕಿಂತ ಮೊದಲು ಪ್ರಗತಿ ಪರಿಶೀಲನೆ ನಡೆಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗಳು, ಅಭಿವೃದ್ಧಿ ಯೋಜನೆಗಳನ್ನು ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಮಂಗಳೂರಿನಿಂದ ಬೈಂದೂರುವರೆಗೆ ಮೆಟ್ರೋ ಯೋಜನೆ, ಎನ್‌ಐಟಿಕೆಯನ್ನು ಐಐಟಿ ಮಾಡುವ ಪ್ರಸ್ತಾಪವಿದ್ದು, ಇದು ಕಾರ್ಯಗತವಾದರೆ ಕರ್ನಾಟಕಕ್ಕೆ ಶೇ.50ರಷ್ಟು ಸೀಟ್‌ಗಳು ಲಭ್ಯವಾಗಲಿವೆ. ಪ್ರಸ್ತುತ ಖಾಲಿಯಾಗಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಹೈಕೋರ್ಟ್‌ ಸಂಚಾರಿ ಪೀಠಕ್ಕೆ ಕಾಯ್ದಿರಿಸಲು ಚಿಂತನೆ ನಡೆಸಲಾಗಿದೆ. ಪ್ರಸ್ತುತ ಇರುವ ಏರ್‌ಪೋರ್ಟ್‌ ವಿಸ್ತರಣೆ ಅಥವಾ ಹೊಸ ಏರ್‌ಪೋರ್ಟ್‌ ಸ್ಥಾಪನೆ, ಕರಾವಳಿಗೆ ಪ್ರತ್ಯೇಕ ಮರಳು ನೀತಿ ಇತ್ಯಾದಿಗಳ ಬೇಡಿಕೆಯಿದೆ. ಸಿಎಂ ನೇತೃತ್ವದಲ್ಲಿ ನಡೆಯುವ ಪ್ರಗತಿ ಪರಿಶೀಲನೆಯಲ್ಲಿ ಈ ಎಲ್ಲ ಯೋಜನೆಗಳ ಪ್ರಸ್ತಾಪ ಹಾಗೂ ಚರ್ಚೆ ನಡೆಯಲಿದೆ ಎಂದರು.

ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ ಕೆ., ಸತೀಶ್‌ ಪೆಂಗಲ್‌, ಸಲೀಂ ಮತ್ತಿತರರಿದ್ದರು.

---------

ಜನರ ಜಾಗ ಎಲ್ಲಿದೆ ಎಂದು ಸ್ಕೆಚ್‌ನಲ್ಲಿ ತೋರಿಸಿ, ಆರ್‌ಟಿಸಿ ಇಲ್ಲದವರಿಗೆ ಆರ್‌ಟಿಸಿ ನೀಡುವ ಕೆಲಸ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿಲ್ಲ. ಕಾಂಗ್ರೆಸ್‌ ಸರ್ಕಾರ ಯುದ್ಧೋಪಾದಿಯಲ್ಲಿ ಸರ್ವೇ ನಡೆಸಿ, ಸಿಎಂ ಹಸ್ತದಿಂದ ಏಕಕಾಲದಲ್ಲಿ 8 ಸಾವಿರ ಜನರಿಗೆ ಆರ್‌ಟಿಸಿ ನೀಡುವ ದಾಖಲೆಯ ಕಾರ್ಯ ನಡೆಯುತ್ತಿದೆ.

- ಐವನ್‌ ಡಿಸೋಜ, ಎಂಎಲ್ಸಿ

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು