11 ವರ್ಷಗಳಿಂದ ಜೈಲಿನಲ್ಲಿರುವ ಕೊಲೆ ಕೇಸ್‌ ಕೈದಿಗೆ ಕೃಷಿ ಮಾಡಲು ಹೈಕೋರ್ಟ್‌ ಪೆರೋಲ್‌!

KannadaprabhaNewsNetwork |  
Published : Dec 02, 2024, 01:15 AM ISTUpdated : Dec 02, 2024, 10:46 AM IST
ಹೈಕೋರ್ಟ್‌ | Kannada Prabha

ಸಾರಾಂಶ

  ಇದೀಗ ಕೃಷಿ ಚಟುವಟಿಕೆ ನೋಡಿಕೊಳ್ಳಲು 11 ವರ್ಷಗಳಿಂದ ಜೈಲಿನಲ್ಲಿರುವ ಸಜಾ ಕೈದಿಯೊಬ್ಬನಿಗೆ ಪೆರೋಲ್ ಮಂಜೂರು ಮಾಡಿ ಹೈಕೋರ್ಟ್‌ ಅಪರೂಪದ ಆದೇಶ ನೀಡಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು : ಅನಾರೋಗ್ಯಪೀಡಿತ ತಾಯಿಗೆ ಚಿಕಿತ್ಸೆ ಕಲ್ಪಿಸಲು, ತಂದೆಯ ಯೋಗಕ್ಷೇಮ ವಿಚಾರಿಸಲು ಮತ್ತು ಸಂತಾನ ಪಡೆಯಲು ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಸಜಾಬಂಧಿಗೆ ನ್ಯಾಯಾಲಯ ಪೆರೋಲ್ ನೀಡಿದ ಉದಾಹರಣೆ ಸಾಕಷ್ಟಿವೆ. ಆದರೆ ಇದೀಗ ಕೃಷಿ ಚಟುವಟಿಕೆ ನೋಡಿಕೊಳ್ಳಲು 11 ವರ್ಷಗಳಿಂದ ಜೈಲಿನಲ್ಲಿರುವ ಸಜಾ ಕೈದಿಯೊಬ್ಬನಿಗೆ ಪೆರೋಲ್ ಮಂಜೂರು ಮಾಡಿ ಹೈಕೋರ್ಟ್‌ ಅಪರೂಪದ ಆದೇಶ ನೀಡಿದೆ.

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಿದ್ದಿದೇವರಹಳ್ಳಿ ನಿವಾಸಿ ಚಂದ್ರ (36) ಎಂಬಾತ, ತನ್ನ ತಂದೆ ಹೆಸರಿನಲ್ಲಿರುವ ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳಲು ಪೆರೋಲ್‌ ನೀಡುವಂತೆ ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದ. ಆತನ ಮೊರೆ ಆಲಿಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ ಗೌಡರ್‌ ಅವರ ಪೀಠ, ಚಂದ್ರಗೆ 90 ದಿನಗಳ ಪೆರೋಲ್ ನೀಡಿ ಆದೇಶಿಸಿದೆ. ಆ ಮೂಲಕ ತಂದೆಯ ವೃತ್ತಿಯಲ್ಲಿ ತೊಡಗಿಕೊಳ್ಳಲು ಜೈಲು ಪಾಲಾಗಿರುವ ಮಗನಿಗೆ ಅವಕಾಶ ಕಲ್ಪಿಸಿದೆ.

ಅರ್ಜಿದಾರ ಚಂದ್ರ 11 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಪೆರೋಲ್‌ ಮೇಲೆ ಯಾವತ್ತೂ ಬಿಡುಗಡೆಯಾಗಿಲ್ಲ. ಪ್ರಕರಣದ ಸತ್ಯಾಂಶ ಪರಿಶೀಲಿಸಿದರೆ ಪೆರೋಲ್‌ ಮೇಲೆ ಬಿಡುಗಡೆಯಾಗುವ ಅಗತ್ಯವನ್ನು ಅರ್ಜಿದಾರ ಮೇಲ್ನೋಟಕ್ಕೆ ಸಾಬೀತುಪಡಿಸಿದ್ದಾರೆ. ಆದ್ದರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ಆತನನ್ನು 90 ದಿನಗಳ ಕಾಲ ಪೆರೋಲ್‌ ಮೇಲೆ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

ಇದೇ ವೇಳೆ ಚಂದ್ರಗೆ ಪೆರೋಲ್‌ ನೀಡಲು ನಿರಾಕರಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು 2023ರ ಸೆ.23ರಂದು ನೀಡಿದ್ದ ಹಿಂಬರಹವನ್ನು ರದ್ದುಪಡಿಸಿರುವ ಹೈಕೋರ್ಟ್‌, ಪೆರೋಲ್ ಅವಧಿಯಲ್ಲಿ ಚಂದ್ರ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಬಾರದು. ಆತ ಪೆರೋಲ್‌ ಮುಗಿಸಿ, ಕಾರಾಗೃಹಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯ ಅಧೀಕ್ಷಕರು ಅಗತ್ಯ ಷರತ್ತು ವಿಧಿಸಬಹುದು. ಆ ಯಾವುದೇ ಷರತ್ತು ಉಲ್ಲಂಘಿಸಿದರೆ, ಪೆರೋಲ್‌ ಮಂಜೂರಾತಿ ಆದೇಶ ತನ್ನಿಂದ ತಾನೇ ರದ್ದಾಗುತ್ತದೆ. ಚಂದ್ರ ಪ್ರತಿ ವಾರದ ಮೊದಲ ದಿನದಂದು ಸ್ಥಳೀಯ ಪೊಲೀಸ್‌ ಠಾಣೆಗೆ ಹಾಜರಾಗಬೇಕೆಂದು ನ್ಯಾಯಾಲಯ ಆದೇಶದಲ್ಲಿ ನಿರ್ದೇಶಿಸಿದೆ.

ಕೊಲೆ ಪ್ರಕರಣದಲ್ಲಿ ಶಿಕ್ಷೆ:

ಆರೋಪಿ ಚಂದ್ರ ಗೃಹಿಣಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಆಕೆಯ ಗಂಡನನ್ನು ಕೊಲೆ ಮಾಡಿದ ಪ್ರಕರಣದಲ್ಲಿ 2014ರ ಡಿ.23ರಂದು ರಾಮನಗರ ಜಿಲ್ಲೆಯ ಕನಕಪುರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಇದರಿಂದ 11 ವರ್ಷಗಳಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಚಂದ್ರ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

ಇತ್ತೀಚೆಗೆ ಪೆರೋಲ್‌ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಚಂದ್ರ, ‘ನನ್ನ ತಂದೆಗೆ 78 ವರ್ಷವಾಗಿದೆ. ವೃದ್ಧಾಪ್ಯದಲ್ಲಿರುವ ತಂದೆಗೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕುಟುಂಬದ ಮತ್ಯಾವುದೇ ಸದಸ್ಯನೂ ಇಲ್ಲವಾದ ಕಾರಣ ತಂದೆ ಹೆಸರಿನಲ್ಲಿರುವ ಜಮೀನಿನಲ್ಲಿ ಕೃಷಿ ಚಟುವಟಿಕೆ ನೋಡಿಕೊಳ್ಳಲು 90 ದಿನಗಳ ಪೆರೋಲ್‌ ನೀಡಬೇಕು’ ಎಂದು ಕೋರಿದ್ದ. ಈ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿದೆ.

ಶಿಕ್ಷಾವಧಿಯಲ್ಲಿ ಸಜಾಬಂಧಿಯನ್ನು ಗರಿಷ್ಠ 90 ದಿನ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಜೈಲಿನಿಂದ ಹೊರಬಂದು ಕುಟುಂಬದವರೊಂದಿಗೆ ಬೆರೆತರೆ, ತಾನು ಅಪರಾಧ ಎಸಗಿ ಜೈಲಿ ಸೇರಿದ ಕಾರಣಕ್ಕೆ ಕುಟುಂಬದ ಸದಸ್ಯರು ಅನುಭವಿಸುತ್ತಿರುವ ನೋವು ಏನೆಂಬುದನ್ನು ಅರಿತುಕೊಂಡು ಪರಿವರ್ತನೆಯಾಗಲು ಕೈದಿಗೆ ನೆರವಾಗುತ್ತದೆ. ಕೃಷಿ ಒಂದು ಪವಿತ್ರ ಕೆಲಸ. ಕೃಷಿ ಮಾಡಬೇಕೆಂಬ ಚಂದ್ರನ ಮನವಿ ಪರಿಗಣಿಸಿ ಹೈಕೋರ್ಟ್‌ ಪೆರೋಲ್‌ ನೀಡಿದೆ.

- ಪಿ.ಪ್ರಸನ್ನಕುಮಾರ್ ಪಿ. ದಾರೋಜಿ, ಚಂದ್ರ ಪರ ವಕೀಲರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!