ಹತ್ಯೆ ಆರೋಪ: ಬಂಗಾಲಿ ಕ್ಯಾಂಪಲ್ಲಿ ವ್ಯಕ್ತಿಯ ಮೇಲೆ ಸಾಮೂಹಿಕ ಥಳಿತ

KannadaprabhaNewsNetwork |  
Published : Aug 04, 2025, 11:45 PM IST

ಸಾರಾಂಶ

ತಾಲ್ಲೂಕಿನ ಪುನರ್ವಸತಿ ಕ್ಯಾಂಪ್-3ರಲ್ಲಿ ಭಾನುವಾರ ರಾತ್ರಿ ವ್ಯಕ್ತಿಯ ಮೇಲೆ ಗುಂಪೊಂದು ಸಾಮೂಹಿಕ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ತೀವ್ರ ಹೋರಾಟ ನಡೆಸುತ್ತಿದ್ದಾನೆ. ಈ ಗಲಾಟೆಯಲ್ಲಿ ನಾಲ್ಕು ಜನ ಪೊಲೀಸರಿಗೂ ಗಾಯಗಳಾಗಿವೆ

ಕನ್ನಡಪ್ರಭ ವಾರ್ತೆ ಸಿಂಧನೂರು

ತಾಲ್ಲೂಕಿನ ಪುನರ್ವಸತಿ ಕ್ಯಾಂಪ್-3ರಲ್ಲಿ ಭಾನುವಾರ ರಾತ್ರಿ ವ್ಯಕ್ತಿಯ ಮೇಲೆ ಗುಂಪೊಂದು ಸಾಮೂಹಿಕ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ತೀವ್ರ ಹೋರಾಟ ನಡೆಸುತ್ತಿದ್ದಾನೆ. ಈ ಗಲಾಟೆಯಲ್ಲಿ ನಾಲ್ಕು ಜನ ಪೊಲೀಸರಿಗೂ ಗಾಯಗಳಾಗಿವೆ.

ಪುನರ್ವಸತಿ ಕ್ಯಾಂಪ್ 3ರ ಕೂಲಿಕಾರ್ಮಿಕ ಅಂಗಾತ್ ಸಿಗ್ದರ್ ಎನ್ನುವ ವ್ಯಕ್ತಿಯನ್ನು ಕಾರ್ಮಿಕ ಗುತ್ತಿಗೆದಾರ ದೀಪಂಕರ್ ಸರ್ದಾರ್ ವ್ಯಕ್ತಿ ಕೆಲಸಕ್ಕೆ ಮಹಾರಾಷ್ಟ್ರಕ್ಕೆ ಕರೆದು ಕೊಂಡು ಹೋಗಿದ್ದು, ಒಂದು ತಿಂಗಳ ಹಿಂದೆ ಅಂಗಾತ್ ಸಿಗ್ದರ್ ಮೃತಪಟ್ಟಿರುತ್ತಾನೆ. ಅದು ಅಸಹಜ ಸಾವೆಂದು ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಅಂಗಾತ್ ಸಿಗ್ದರ್ ಅವರ ಸಂಬಂಧಿಕರಾದ ರಾಹುಲ್ ಸಿಗ್ದರ್, ಶಾಂತ ಸಿಗ್ದರ್, ಸೂರಜ್ ಮತ್ತಿತರ 16 ಜನರು ಸೇರಿ ದೀಪಂಕರ್ ಸರ್ದಾರ್ನೇ ಮಹಾರಾಷ್ಟ್ರದಲ್ಲಿ ತಮ್ಮ ಕುಟುಂಬದ ಅಂಗಾತ್ ಸಿಗ್ದರ್‌ನನ್ನು ಕೊಲೆ ಮಾಡಿದ್ದಾನೆಂದು ಆರೋಪಿಸಿ ಕ್ಯಾಂಪಿನ ದುರ್ಗಾದೇವಿ ದೇವಸ್ಥಾನಕ್ಕೆ ಕರೆದೊಯ್ದು ದೀಪಂಕರ್ ಸರ್ದಾರ್‌ನನ್ನು ಸಾಮೂಹಿಕವಾಗಿ ಮನಬಂದಂತೆ ಹಲ್ಲೆಗೊಳಿಸಿದ್ದಾರೆ.

ಗಲಾಟೆ ನಡೆಯುತ್ತಿರುವುದನ್ನು ಅಲ್ಲಿಯ ಜನರು ಪೊಲೀಸರಿಗೆ ತಿಳಿಸಿದ್ದು, ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ, ಹಲ್ಲೆ ಎಸಗುತ್ತಿರುವ ಗುಂಪನ್ನು ಚದುರಿಸಲು ಪ್ರಯತ್ನಿಸಿದ ಕಾನಸ್ಟೇಬಲ್‌ಗಳಾದ ದೌಲತ್, ಶರಣಪ್ಪ, ಟೋಪಣ್ಣ, ಅಮರೇಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಭಾರಿ ಸಬ್ ಇನ್ಸ್ಪೆಕ್ಟರ್ ಎರಿಯಪ್ಪ ಅಂಗಡಿ ತನಿಖೆ ಕೈಗೊಂಡಿದ್ದಾರೆ.

ಎಸ್.ಪಿ.ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಸೋಮವಾರ ಮಧ್ಯಾಹ್ನ ಸ್ಥಳಕ್ಕೆ ತೆರಳಿ ಘಟನೆ ಕುರಿತು ಮಾಹಿತಿ ಪಡೆದು ಕ್ಯಾಂಪಿನಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಂತೆ ಗ್ರಾಮೀಣ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎರಿಯಪ್ಪ ಅವರಿಗೆ ಸೂಚಿಸಿದರು.

ಈ ವೇಳೆ ಡಿ.ವೈ.ಎಸ್.ಪಿ. ಬಿ.ಎಸ್.ತಳವಾರ, ಸಿಪಿಐ ವೀರಾರೆಡ್ಡಿ, ಸಿಂಧನೂರು ಪೊಲೀಸ್ ಠಾಣೆಯ ಪಿ.ಎ.ದುರುಗಪ್ಪ ಡೊಳ್ಳಿನ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ