ಕ್ಷುಲ್ಲಕ ವಿಚಾರಕ್ಕೆ ಕೊಲೆ: ಇಬ್ಬರ ಬಂಧನ

KannadaprabhaNewsNetwork |  
Published : Jul 05, 2024, 01:49 AM ISTUpdated : Jul 05, 2024, 10:54 AM IST
arrest 010

ಸಾರಾಂಶ

ನಗರದ ಪಿಎಸ್‌ಕೆ ನಾಯ್ಡು ಲೇಔಟ್‌ನಲ್ಲಿ ಬುಧವಾರ ನಡೆದಿದ್ದ ಖಾಸಗಿ ಕಂಪನಿ ಉದ್ಯೋಗಿ ಅಜಿತ್ ಹತ್ಯೆ ನಡೆದು 24 ತಾಸಿನೊಳಗೆ ಇಬ್ಬರು ಪ್ರಮುಖ ಆರೋಪಿಗಳನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ನಗರದ ಪಿಎಸ್‌ಕೆ ನಾಯ್ಡು ಲೇಔಟ್‌ನಲ್ಲಿ ಬುಧವಾರ ನಡೆದಿದ್ದ ಖಾಸಗಿ ಕಂಪನಿ ಉದ್ಯೋಗಿ ಅಜಿತ್ ಹತ್ಯೆ ನಡೆದು 24 ತಾಸಿನೊಳಗೆ ಇಬ್ಬರು ಪ್ರಮುಖ ಆರೋಪಿಗಳನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಗುಬ್ಬಿಯ ಕಿರಣ್ ಹಾಗೂ ರಾಹುಲ್ ಬಂಧಿತರಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ನಡೆದಿದೆ. ವೈಯಕ್ತಿಕ ಕಾರಣ ಹಿನ್ನಲೆಯಲ್ಲಿ ಅಜಿತ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳನ್ನು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹುಟ್ಟು ಹಬ್ಬದ ದಿನ ಅವಾಜ್

ಎರಡ್ಮೂರು ವರ್ಷಗಳಿಂದ ಕ್ಷುಲ್ಲಕ ವಿಚಾರಕ್ಕೆ ಕಿರಣ್ ಹಾಗೂ ಅಜಿತ್ ಮಧ್ಯೆ ಮನಸ್ತಾಪವಾಗಿತ್ತು. ಒಂದೂವರೆ ವರ್ಷದ ಹಿಂದೆ ರಾಮಮೂರ್ತಿ ನಗರ ಸಮೀಪ ಗುರಾಯಿಸಿದ ಎಂಬ ಕಾರಣಕ್ಕೆ ಕಿರಣ್‌ ಮೇಲೆ ಹಲ್ಲೆ ನಡೆಸಿದ್ದ. ಈ ಘಟನೆ ಬಳಿಕ ಇಬ್ಬರ ನಡುವೆ ದ್ವೇಷ ಹೆಚ್ಚಾಗಿತ್ತು. ಕಳೆದ ತಿಂಗಳ 19 ರಂದು ತನ್ನ ಹುಟ್ಟು ಹಬ್ಬ ಆಚರಿಸಲು ಸ್ನೇಹಿತರ ಜತೆ ಪಿಎಸ್‌ಕೆ ನಾಯ್ದು ಲೇಔಟ್‌ಗೆ ಬಂದಿದ್ದ ಕಿರಣ್‌ಗೆ ಮತ್ತೆ ಅಜಿತ್ ಹೊಡೆದು ಕಳುಹಿಸಿದ್ದ. ಆ ವೇಳೆ ರಾಮಮೂರ್ತಿ ನಗರದಲ್ಲಿ ಕೊಟ್ಟಿದ್ದ ಹೊಡೆತ ಸಾಕಾಗಿಲ್ವಾ ಎಂದು ಅಜಿತ್ ಲೇವಡಿ ಮಾಡಿದ್ದ. ಈ ಮಾತುಗಳಿಂದ ಕೆರಳಿದ ಕಿರಣ್, ಕೊನೆಗೆ ಅಜಿತ್ ಕೊಲೆಗೆ ನಿರ್ಧರಿಸಿದ್ದಾನೆ. ಈ ಕೃತ್ಯಕ್ಕೆ ಆತನ ಇಬ್ಬರು ಸ್ನೇಹಿತರು ಸಾಥ್ ಕೊಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಏಳೆಂಟು ದಿನಗಳಿಂದ ಪುಲಿಕೇಶಿನಗರ ಸಮೀಪದ ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡು ಅಜಿತ್ ಅನ್ನು ಆರೋಪಿಗಳು ಹಿಂಬಾಲಿಸಿ ಚಲನವಲನಗಳ ಮಾಹಿತಿ ಸಂಗ್ರಹಿಸಿದ್ದರು. ಅಂತಿಮವಾಗಿ ಪಿಎಸ್‌ಕೆ ನಾಯ್ಡು ಲೇಔಟ್‌ನ ಕಾರಿನ ಶೆಡ್‌ಗೆ ಅಜಿತ್ ಬರುವುದು ಖಚಿತ ಪಡಿಸಿಕೊಂಡು ಬುಧವಾರ ಬೆಳಗ್ಗೆ ಆರೋಪಿಗಳು ಹತ್ಯೆ ಕೃತ್ಯ ಎಸಗಿದ್ದಾರೆ. ಈ ಕೊಲೆ ಬಳಿಕ ತಪ್ಪಿಸಿಕೊಂಡಿದ್ದ ಆರೋಪಿಗಳನ್ನು ತಾಂತ್ರಿಕ ಮಾಹಿತಿ ಆಧರಿಸಿ ಕ್ಷಿಪ್ರ ಕಾರ್ಯಚರಣೆ ನಡೆಸಿ ಬಂಧಿಸಲಾಯಿತು. ವಿಚಾರಣೆಗೊಳಪಡಿಸಿದಾಗ ಹತ್ಯೆ ಹಿಂದಿನ ಕಾರಣವನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ ಚಾಲಕರಿಗೆ 20000 ಪರಿಹಾರಕ್ಕೆ ಆಗ್ರಹ
ನಿರ್ಲಕ್ಷ್ಯ ಚಾಲನೆಯಿಂದ ಬೈಕ್‌ಗೆಡಿಕ್ಕಿ: ಟೆಕ್ಕಿಗೆ ಹೈಕೋರ್ಟ್‌ ತರಾಟೆ