ಪ್ರೀತಿಸಿ ಮದುವೆಯಾಗಿ, ಕೂಲಿ ಮಾಡಿಕೊಂಡು 12 ವರ್ಷದಿಂದ ಸುಖ ಸಂಸಾರ ಮಾಡಿದ್ದ, ಎರಡು ಮುದ್ದಾದ ಮಕ್ಕಳನ್ನೂ ಹೊಂದಿದ್ದ ವ್ಯಕ್ತಿಯನ್ನು ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಕೊಲೆ ಮಾಡಿ, ನಾಪತ್ತೆ ಆಗಿದ್ದಾನೆಂದು ಕಥೆ ಕಟ್ಟಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
- ಪ್ರಿಯಕರ, ಆತನ ಸ್ನೇಹಿತರಿಂದ ಪತಿಯ ಕೊಲೆ । ಪತಿ ನಾಪತ್ತೆಯೆಂದು ದೂರು ಕೊಟ್ಟಿದ್ದ ಪತ್ನಿ!- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರೀತಿಸಿ ಮದುವೆಯಾಗಿ, ಕೂಲಿ ಮಾಡಿಕೊಂಡು 12 ವರ್ಷದಿಂದ ಸುಖ ಸಂಸಾರ ಮಾಡಿದ್ದ, ಎರಡು ಮುದ್ದಾದ ಮಕ್ಕಳನ್ನೂ ಹೊಂದಿದ್ದ ವ್ಯಕ್ತಿಯನ್ನು ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಕೊಲೆ ಮಾಡಿ, ನಾಪತ್ತೆ ಆಗಿದ್ದಾನೆಂದು ಕಥೆ ಕಟ್ಟಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಹೊರವಲಯದ ಪಾಮೇನಹಳ್ಳಿ ಗ್ರಾಮದ ರಘು (36) ಹಾಗೂ ಹಾವೇರಿ ಮೂಲದ ಶೃತಿ 12 ವರ್ಷಗಳ ಹಿಂದೆ ಪ್ರೀತಿಸಿ, ಮದುವೆಯಾಗಿದ್ದರು. ಈ ದಂಪತಿಗೆ ಎರಡು ಮಕ್ಕಳು ಸಹ ಇವೆ. 2 ವರ್ಷಗಳಿಂದ ಉಬೇದುಲ್ಲಾ ಅಲಿಯಾಸ್ ಮುನ್ನಾ ಎಂಬಾತನ ಪ್ರೀತಿಗೆ ಬಿದ್ದಿದ್ದ ಶೃತಿ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿ, ಅದರಲ್ಲಿ ಯಶಸ್ವಿಯಾಗಿದ್ದಳು.
ಮದ್ಯವ್ಯಸನಕ್ಕೆ ತುತ್ತಾಗಿದ್ದ ರಘುನನ್ನು ದಾವಣಗೆರೆಯ ಬಾರ್‌ವೊಂದಕ್ಕೆ ಕರೆದೊಯ್ದು ಉಬೇದುಲ್ಲಾ ಹಾಗೂ ಆತನ ಸ್ನೇಹಿತ ಸುರೇಶ ಚೆನ್ನಾಗಿ ಕುಡಿಸಿದ್ದಾರೆ. ಅನಂತರ ಹರಿಹರದ ತುಂಗಭದ್ರಾ ನದಿ ಬಳಿ ಕರೆದೊಯ್ದು, ಕತ್ತು ಹಿಸುಕಿ ಶವವನ್ನು ನದಿಗೆ ಎಸೆದಿದ್ದಾರೆಂಬ ಸಂಗತಿ ಪೊಲೀಸ್ ವಿಚಾರಣೆಯಲ್ಲಿ ಬಯಲಾಗಿದೆ. ಉಬೇದುಲ್ಲಾ ಹಾಗೂ ಆತನ ಸ್ನೇಹಿತ ಸುರೇಶ ಈ ಕೃತ್ಯವೆಸಗಲು ಮೃತ ರಘುವಿನ ಪತ್ನಿ ಶೃತಿ ಸಾಥ್ ನೀಡಿದ್ದಾಳೆಂದು ಹೇಳಲಾಗಿದೆ.
ಪತಿಯನ್ನು ಕೊಲೆ ಮಾಡಿಸಿದ ನಂತರ ರಘು ಕಾಣೆ ಆಗಿದ್ದಾನೆಂದು ಶೃತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಅನುಮಾನಗೊಂಡ ಪೊಲೀಸರು ಶೃತಿಯ ಸಹೋದರಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಾಗಿದೆ. ಕೊಲೆ ಮಾಡಿಸಿದ ಆರೋಪಿ ಶೃತಿ, ಮೃತ ದೇಹ ಸಾಗಿಸಿದ್ದ ಮೂವರನ್ನು ಪೊಲೀಸರು ಬಂಧಿಸಿ, ತನಿಖೆಗೊಳಪಡಿಸಿದ್ದಾರೆ. ಮೃತ ರಘುವಿನ ದೇಹಕ್ಕಾಗಿ ತುಂಗಭದ್ರಾ ನದಿಯಲ್ಲಿ ಪೊಲೀಸರು ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ದಳದ ಸಹಾಯದಿಂದ ಶೋಧ ನಡೆಸಿದ್ದಾರೆ. ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ರಘುವಿನ ತಾಯಿ ಪುಟ್ಟಮ್ಮ, ಏನೂ ಅರಿಯದೇ ಶಾಲಾ ಸಮವಸ್ತ್ರದಲ್ಲೇ ಅಜ್ಜಿ ಜೊತೆಗೆ ಕುಳಿತು ಕಣ್ಣೀರಿಡುತ್ತಿದ್ದ ರಘುವಿನ ಮಕ್ಕಳ ಸ್ಥಿತಿ ನೋಡಿದರೆ ಕರುಳು ಚುರುಕು ಎನ್ನುವಂತಿತ್ತು. ಒಂದು ಗಂಡು ಮಗು, ಒಂದು ಹೆಣ್ಣು ಮಗುವಿದ್ದ ರಘು ಕೂಲಿ ಮಾಡಿಕೊಂಡು, ತನ್ನ ಹೆಂಡತಿ, ಮಕ್ಕಳನ್ನು ಸಾಕುತ್ತಿದ್ದ. ಕೊಲೆ ಘಟನೆಯಿಂದ ಇಡೀ ಪಾಮೇನಹಳ್ಳಿಯಲ್ಲಿ ನೀರವ ಮೌನ ಆವರಿಸಿದೆ.
ದಾವಣಗೆರೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಗಾರ್ಡನಿಂಗ್ ಕೆಲಸ ಮಾಡುತ್ತಿದ್ದ ಶೃತಿ ನಿಟ್ಟುವಳ್ಳಿ ವಾಸಿ ಉಬೇದುಲ್ಲಾ ಅಲಿಯಾಸ್ ಮುನ್ನಾ ಜೊತೆ 2 ವರ್ಷಗಳ ಹಿಂದೆ ಪರಿಚಯವಾಗಿ ಇಬ್ಬರ ಮಧ್ಯೆ ಅಕ್ರಮ ಸಂಬಂಧ ಏರ್ಪಟ್ಟಿತ್ತು ಎನ್ನಲಾಗಿದೆ. ಈ ಮಧ್ಯೆ ಆ.11ರಂದು ಪತಿ ರಘು ಹತ್ಯೆಗೆ ಪತ್ನಿ ಶೃತಿ ಹಾಗೂ ಆಕೆ ಪ್ರಿಯಕರ ಉಬೇದುಲ್ಲಾ ಯೋಜನೆ ರೂಪಿಸಿದ್ದರು. ರಘುಗೆ ಪರಿಚಯವಿದ್ದ ಸುರೇಶನಿಗೆ ಹೇಳಿ ಆತನನ್ನು ದಾವಣಗೆರೆ ಬಾರ್‌ಗೆ ಕರೆಸಿಕೊಂಡಿದ್ದಾನೆ. ಅಲ್ಲಿ ಕಂಠಪೂರ್ತಿ ಮದ್ಯ ಕುಡಿಸಿ ಹರಿಹರದ ತುಂಗಾ ನದಿ ತೀರಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ತುಂಗಭದ್ರಾ ನದಿಗೆ ಬಿಸಾಕಿ ಎಸ್ಕೇಪ್ ಆಗಿದ್ದಾರೆ. ಇದೆಲ್ಲಾ ಗೊತ್ತಿದ್ದರೂ ಗಂಡ ಕಾಣೆಯಾಗಿದ್ದಾನೆ ಅಂತಾ ಹೇಳಿ ಶೃತಿಯು ಅತ್ತೆ, ಮೈದುನ ಹಾಗೂ ಸಂಬಂಧಿಕರ ಜೊತೆ ಹುಡುಕಾಟದ ನಾಟಕವಾಡಿದ್ದಳು. ಈಗ ಪ್ರಿಯಕರ, ಆತನ ಸ್ನೇಹಿತರ ಜೊತೆ ಶೃತಿಯೂ ಜೈಲು ಪಾಲಾಗಿದ್ದು, ಎರಡೂ ಮಕ್ಕಳು ತಂದೆ-ತಾಯಿ ಇಲ್ಲದೇ ಅನಾಥವಾಗಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.