ಸಂಗೀತ, ಸಾಹಿತ್ಯವೇ ತಾರಾನಾಥ್‌ ಅವರ ಬದುಕಾಗಿತ್ತು: ಸಿ.ಎಸ್‌.ಸರ್ವಮಂಗಳಾ

KannadaprabhaNewsNetwork |  
Published : Jun 12, 2025, 01:26 AM IST
7 | Kannada Prabha

ಸಾರಾಂಶ

ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದ ರಾಜೀವ್‌ ತಾರಾನಾಥರು, ಅಪ್ಪಟ ಮನುಷ್ಯರಾಗಿದ್ದರು. ಅವರು ಸದಾ ಕಾಲ ಪರಿಪೂರ್ಣವಾದದ್ದನ್ನು ಸಾಧಿಸಬೇಕು ಎಂಬ ಭಯಕೆ ಹೊಂದಿದ್ದರು. ಸಂಗೀತ, ಸಾಹಿತ್ಯ ಯಾವುದರಲ್ಲೇ ಆಗಲಿ ಔನತ್ಯ ಸಾಧಿಸಬೇಕು ಎನ್ನುತ್ತಿದ್ದರು. ಅದರಂತೆಯೇ ಸಾಧಿಸಿ ತೋರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಂಗೀತ ಹಾಗೂ ಸಾಹಿತ್ಯವೇ ಪಂಡಿತ್‌ ರಾಜೀವ್‌ ತಾರಾನಾಥ್‌ ಅವರ ಬದುಕಾಗಿತ್ತು. ಸಂಗೀತವನ್ನು ಉಳಿಸಿ, ಬೆಳೆಸಿ ಮುಂದಿನ ತಲೆಮಾರಿಗೆ ತಲುಪಿಸಬೇಕು ಎಂದು ಜೀವಿಸಿದರು. ಅದಕ್ಕಾಗಿಯೇ ಜೀವನದ ಪ್ರತಿಕ್ಷಣವನ್ನೂ ಮುಡಿಪಾಗಿಟ್ಟಿದ್ದರು ಎಂದು ಸಿತಾರ್ ವಾದಕಿ ಸಿ.ಎಸ್. ಸರ್ವಮಂಗಳಾ ತಿಳಿಸಿದರು.

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಆವರಣದಲ್ಲಿ ರಘುಪತಿ ತಾಮ್ಹನ್ಕರ್ ಸಂಪಾದಕತ್ವದಲ್ಲಿ ಹೊರ ತಂದಿರುವ ಪಂಡಿತ್ ರಾಜೀವ್ ತಾರನಾಥ್ ಸರೋದ್ ಸ್ವರಾಂನ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದ ರಾಜೀವ್‌ ತಾರಾನಾಥರು, ಅಪ್ಪಟ ಮನುಷ್ಯರಾಗಿದ್ದರು. ಅವರು ಸದಾ ಕಾಲ ಪರಿಪೂರ್ಣವಾದದ್ದನ್ನು ಸಾಧಿಸಬೇಕು ಎಂಬ ಭಯಕೆ ಹೊಂದಿದ್ದರು. ಸಂಗೀತ, ಸಾಹಿತ್ಯ ಯಾವುದರಲ್ಲೇ ಆಗಲಿ ಔನತ್ಯ ಸಾಧಿಸಬೇಕು ಎನ್ನುತ್ತಿದ್ದರು. ಅದರಂತೆಯೇ ಸಾಧಿಸಿ ತೋರಿಸಿದ್ದಾಗಿ ಹೇಳಿದರು.

ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದರು. ಅವರ ಅಗಲಿಕೆ ರಾಜ್ಯಕ್ಕೆ ಮಾತ್ರವಲ್ಲ ಇಡೀ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಅವರು ಸಂಗೀತ ಕಲಾವಿದರು ಮಾತ್ರವಾಗಿರದೆ, ಅದನ್ನು ಮೀರಿ ಶ್ರೇಷ್ಠ ಮಾನವತಾವಾದಿಯಾಗಿದ್ದರು. ಅವರ ನಿಧನದಿಂದ ಮೈಸೂರಿನಲ್ಲಿ ದೊಡ್ಡ ಬೆಳಕು ಕಣ್ಮರೆಯಾದಂತೆ ಆಗಿದೆ. ಸಂಗೀತ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ನಮ್ಮ ಸುತ್ತಮುತ್ತ ನೋಡಿದಾಗೆಲ್ಲಾ ಅವರಂತಹ ಚಿಂತನಾ ಶೀಲ ಮನಸ್ಸಿನ ಸಂಗೀತದ ಗಣಿಯಾಗಿದ್ದರು. ಜನಪರ ಕಾಳಜಿಯೊಂದಿಗೆ ಜೀವಿಸುತ್ತಿರುವ ಕಲಾವಿದರಾಗಿದ್ದಾಗಿ ಸ್ಮರಿಸಿದರು.

ಸರೋದ್‌ವಾದನದ ಜತೆಗೆ ಗಾಯನ ಮತ್ತು ತಬಲ ವಾದನದಲ್ಲಿಯೂ ಅವರು ಶ್ರೇಷ್ಠ ಕಲಾವಿದರಾಗಿದ್ದರು. ಸರೋದ್‌ವಾದಕರಾಗದಿದ್ದರೆ ಶ್ರೇಷ್ಠ ಗಾಯಕರಾಗುತ್ತಿದ್ದಾಗಿ ಅವರು ಹೇಳಿದರು.

ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಮಾತನಾಡಿ, ಸಾಮಾಜಿಕ ಕಳಕಳಿ ಇದ್ದ ಮೇರು ಕಲಾವಿದರಾಗಿದ್ದ ಅವರಿಗೆ ಸಂಗೀತ, ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಬಗ್ಗೆ ಮುನ್ನೋಟವಿತ್ತು. ಕಿರಿಯರನ್ನು ಹಾಗೂ ಲೇಖಕರನ್ನು ಪ್ರೋತ್ಸಾಹಿಸುತ್ತಿದ್ದರು. 15 ವರ್ಷದಿಂದ ಒಡನಾಡಿಯಾಗಿದ್ದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ನಾಗೇಶ್ ವಿ. ಬೆಟ್ಟಕೋಟೆ, ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ್, ಕೃತಿ ಸಂಪಾದಕ ಗಣೇಶ ಅಮೀನಗಡ ಇದ್ದರು.ಶೇಕ್ಸ್‌ಪೀಯರ್‌ ನಮ್ಮ ಪರಂಪರೆಯ ಭಾಗ: ಸಿ.ನಾಗಣ್ಣ

ಕನ್ನಡಪ್ರಭ ವಾರ್ತೆ ಮೈಸೂರು

ಜಗತ್ತಿನ ಅಪ್ರತಿಮ ನಾಟಕಕಾರ ವಿಲಿಯಂ ಶೇಕ್ಸ್‌ಪೀಯರ್‌ಪರಕೀಯನಾಗಿ ಉಳಿಯದೇ ನಮ್ಮ ಪರಂಪರೆಯ ಒಂದು ಭಾಗವೇ ಆಗಿದ್ದಾನೆ ಎಂದು ಸಾಹಿತಿ ಡಾ.ಸಿ. ನಾಗಣ್ಣ ತಿಳಿಸಿದರು.

ಮೈಸೂರು ವಿವಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ 52ನೇ ಕನ್ನಡ ಪುನಶ್ಚೇತನ ಶಿಬಿರದಲ್ಲಿ ಬುಧವಾರ ಶೇಕ್ಸ್‌ಪೀಯರ್‌: ಅವನ ಮನಸ್ಸು ಮತ್ತು ಕಲೆ, ಭಾಷಾಂತರ: ಒಂದು ಚಾರಿತ್ರಿಕ ನೋಟ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಪಂಪ, ರನ್ನ, ಕುಮಾರವ್ಯಾಸ, ಲಕ್ಷ್ಮೀಶ, ವಚನಕಾರರು, ಹರಿದಾಸರು ಮುಂತಾದ ಕನ್ನಡ ಅಭಿಜಾತ ಕವಿಗಳನ್ನು ಜತನದಿಂದ ಕಾಪಿಟ್ಟುಕೊಳ್ಳುವ ರೀತಿಯಲ್ಲೇ ಶೇಕ್ಸ್‌ಪೀಯರ್‌, ಮಿಲ್ಟನ್, ಗಯಟೆ ಮುಂತಾದ ಪಾಶ್ಚಾತ್ಯ ಕವಿಗಳನ್ನು ಕಾಪಿಟ್ಟುಕೊಳ್ಳಬೇಕು. ಇದರಿಂದ ನಮ್ಮ ಸಾಂಸ್ಕೃತಿಕ ಯೋಗಕ್ಷೇಮ ಹೆಚ್ಚುತ್ತದೆ ಎಂದರು.

ಶೇಕ್ಸ್‌ಪೀಯರ್‌ಅತಿಮಾನುಷ ಎನ್ನಬಹುದಾದ ಉತ್ಕಟತೆಯನ್ನೂ ಹೊಂದಿದ್ದ ಮನುಷ್ಯ. ಹರ್ಷದಲ್ಲೂ ಅತಿ, ಸಂಕಟದಲ್ಲಿ ಅತಿಯನ್ನೂ ಆಹ್ವಾನಿಸುವಲ್ಲಿ ಸರ್ವದಾ ಸಿದ್ಧ. ಆತ ಅಸದೃಶ ಮೇಧಾಶಕ್ತಿಯ ಅಪರೂಪದ ವ್ಯಕ್ತಿ. ಶೇಕ್ಸ್‌ಪೀಯರ್‌ ನಾಟಕಗಳು ಹಾಗೂ ಅವನ ಕಾವ್ಯದ ಓದಿನಿಂದ ಧೈರ್ಯ ಮತ್ತು ಬಲ ಪ್ರಾಪ್ತಿಯಾಗುತ್ತದೆ ಎಂದು ಅವರು ಹೇಳಿದರು.

ಭಾಷಾಂತರ ಜ್ಞಾನದ ಶಾಖೆ:

ಭಾಷಾಂತರದ ಚರಿತ್ರೆ ಇಲ್ಲದೆ ಜಗತ್ತಿನ ಚರಿತ್ರೆಯನ್ನು ಊಹಿಸಿಕೊಳ್ಳಲಾಗದು. ತತ್ತ್ವಶಾಸ್ತ್ರದಿಂದ ಹಿಡಿದು ಭೌತಶಾಸ್ತ್ರದವರೆಗೆ ಎಲ್ಲಾ ಜ್ಞಾನ ಶಾಖೆಗಳೂ ಭಾಷಾಂತರದ ಮೂಲಕ ತಮ್ಮ ಬೆಳವಣಿಗೆಯನ್ನು ಸಾಧಿಸಿವೆ ಎಂದರು.

ಜ್ಞಾನದ ಉತ್ಪತ್ತಿ ಮತ್ತು ಪ್ರಸಾದ ಭಾಷಾಂತರದೊಡನೆ ಅವಿನಾಭಾವ ಸಂಬಂಧವನ್ನು ಇರಿಸಿಕೊಂಡಿದೆ. ಹಾಗಾಗಿ ಭಾಷಾಂತರ ಮಾನವನ ಸರ್ವ ಸಾಮರ್ಥ್ಯವನ್ನು ಕುರಿತ ಚರಿತ್ರೆಯೇ ಆಗಿದೆ. ನಾವೇನಾದರೂ ಸಾಹಿತ್ಯ, ವಿಜ್ಞಾನ ಅಥವಾ ಸಮಾಜ ವಿಜ್ಞಾನಗಳ ಭಾಷಾಂತರ ಚರಿತ್ರೆಯನ್ನು ರಚಿಸಲು ಪ್ರಯತ್ನಿಸಿದರೆ ಜ್ಞಾನದ ಎಲ್ಲಾ ಶಾಖೆಗಳನ್ನು ಒಳಗೊಂಡಂತೆ ಆಗುತ್ತದೆ ಎಂದು ಅವರು ನುಡಿದರು.

ಭಾಷಾಂತರ ಚರಿತ್ರೆಯ ಬರವಣಿಗೆ ಮುಂದುವರಿಯುವ ಪ್ರಕ್ರಿಯೆಯೇ ಹೊರತು ಕೊನೆಯ ಮಾತನ್ನು ಆಡಲು ಯಾವ ವಿದ್ವಾಂಸರಿಗೂ ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟರು.

ಪ್ರಸಾರಾಂಗದ ನಿರ್ದೇಶಕ, ಶಿಬಿರದ ಸಂಚಾಲಕ ಡಾ. ನಂಜಯ್ಯ ಹೊಂಗನೂರು, ಮಾಳವಿಯ ಮಿಷನ್ ಶಿಕ್ಷಕ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ.ಎಚ್‌. ಜ್ಯೋತಿ, ಸಹಾಯಕ ಪ್ರಾಧ್ಯಾಪಕ ಡಾ.ಎಲ್. ನಂಜುಂಡಸ್ವಾಮಿ, ಶಿಬಿರಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆ.ಎಸ್.ಪುಟ್ಟಣ್ಣಯ್ಯ ಆದರ್ಶ ಎಲ್ಲಾ ಕಾಲಕ್ಕೂ ಮಾದರಿ, ಅನುಸರಣೀಯ: ನಾಗತಿಹಳ್ಳಿ ಚಂದ್ರಶೇಖರ್
ಮೇಲುಕೋಟೆ: ಶ್ರೀದೇವಿ ಭೂದೇವಿಯರಿಗೆ ನೂರ್ ತಡಾ ಉತ್ಸವ