ನಟ ದರ್ಶನ್‌ ಭೇಟಿ ಮಾಡಿದ ಸಂಗೀತ ನಿರ್ದೇಶಕ ಹರಿಕೃಷ್ಣ

KannadaprabhaNewsNetwork |  
Published : Oct 11, 2024, 11:49 PM IST
ಬಳ್ಳಾರಿಯ ಕಾರಗೃಹದಲ್ಲಿರುವ ನಟ ದರ್ಶನ್‌ ಅವರನ್ನು ಭೇಟಿಯಾಗಲು ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಗುರುವಾರ ಜೈಲಿಗೆ ಆಗಮಿಸಿದ್ದರು. | Kannada Prabha

ಸಾರಾಂಶ

ಕೊಲೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ ಅವರನ್ನು ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಹಾಗೂ ಐವರು ಕುಟುಂಬ ಸದಸ್ಯರು ಗುರುವಾರ ಜೈಲಿಗೆ ಭೇಟಿ ನೀಡಿ, ನಟ ದರ್ಶನ್‌ ಆರೋಗ್ಯ ವಿಚಾರಿಸಿದರು.

ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ ಅವರನ್ನು ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಹಾಗೂ ಐವರು ಕುಟುಂಬ ಸದಸ್ಯರು ಗುರುವಾರ ಜೈಲಿಗೆ ಭೇಟಿ ನೀಡಿ, ನಟ ದರ್ಶನ್‌ ಆರೋಗ್ಯ ವಿಚಾರಿಸಿದರು.

ದರ್ಶನ್‌ ಅವರ ಅನೇಕ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದ ಹರಿಕೃಷ್ಣ ಅವರು ದರ್ಶನ್‌ ಜತೆ ಸುಮಾರು 20 ನಿಮಿಷ ಸಮಯ ಕಳೆದರು.

ಆರೋಗ್ಯದ ಕಡೆ ಗಮನ ನೀಡುವಂತೆ ಸಲಹೆ ನೀಡಿದ ಹರಿಕೃಷ್ಣ, ದೇವರ ಮೇಲೆ ಭಾರ ಹಾಕಿ, ಒಳ್ಳೆಯದಾಗುತ್ತದೆ. ಜಾಮೀನು ಸಿಗುತ್ತದೆ. ಧೈರ್ಯದಿಂದ ಇರಿ ಎಂದು ಸ್ಥೈರ್ಯ ತುಂಬಿದ್ದಾರೆ. ಇವರೊಂದಿಗೆ ಹರಿಕೃಷ್ಣ ಅವರ ಸಂಬಂಧಿ ಶೈಲಜಾ ನಾಗ್‌ ಇದ್ದರು. ದರ್ಶನ್‌ ಅವರಿಗಾಗಿ ತಂದಿದ್ದ ತಿಂಡಿ-ತಿನಿಸುಗಳನ್ನು ನೀಡಿದರು.

ಅಭಿಮಾನಿಗಳ ಕೂಗಿಗೆ ದರ್ಶನ್‌ ಸಂತಸ: ಜೈಲಿನಲ್ಲಿರುವ ದರ್ಶನ್‌ ಅವರು ತಮ್ಮ ಆಪ್ತರನ್ನು ಭೇಟಿಯಾಗಲು ಹೈಸೆಕ್ಯೂರಿಟಿ ಸೆಲ್‌ನಿಂದ ವಿಸಿಟರ್‌ ಕೊಠಡಿಗೆ ತೆರಳುವ ವೇಳೆ ಜೈಲ್‌ನ ಹೊರಗಡೆಯ ಗೇಟ್‌ ಬಳಿ ಇದ್ದ ಕೆಲವು ಅಭಿಮಾನಿಗಳು ದರ್ಶನ್‌ ಪರ ಘೋಷಣೆ ಕೂಗುತ್ತಿದ್ದಂತೆ ದರ್ಶನ್‌ ಅವರು ಅಭಿಮಾನಿಗಳನ್ನು ಕಂಡು ನಗುಮುಖದೊಂದಿಗೆ, ನನ್ನ ಹೃದಯದಲ್ಲಿ ನೀವಿದ್ದೀರಾ ಎಂಬ ಸಂಕೇತವಾಗಿ, ಕೈಯನ್ನು ಎದೆ ಮುಟ್ಟಿ ಅಭಿಮಾನಿಗಳಿಗೆ ಬೆರಳು ತೋರಿಸಿ ನಗುಮುಖದಿಂದ ತೆರಳಿದರು. ಇದೇ ಮೊದಲ ಬಾರಿಗೆ ಜೈಲಿನ ಮೂಲಕ ಅಭಿಮಾನಿಗಳಿಗೆ ಕೈಸನ್ನೆ ಮೂಲಕ ಪ್ರತಿಕ್ರಿಯಿಸಿದರು.

ಜೈಲಲ್ಲಿಯೇ ದಸರಾ ಹಬ್ಬ: ಕೊಲೆ ಆಪಾದನೆಯಲ್ಲಿ ಬಳ್ಳಾರಿಯ ಜೈಲಿನ ಹೈಸೆಕ್ಯೂರಿಟಿ ಸೆಲ್‌ನಲ್ಲಿರುವ ನಟ ದರ್ಶನ್ ಈ ಬಾರಿಯ ದಸರಾ ಹಬ್ಬದ ಸಂಭ್ರಮ ಇಲ್ಲದಂತಾಗಿದೆ.

ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿ ಬಂಧಿಯಾಗಿರುವ ನಟ ದರ್ಶನ್‌ ಅವರನ್ನು ಆ. 29ರಂದು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ಕಳೆದ ಎರಡು ತಿಂಗಳಿಂದ ಜೈಲಿನಲ್ಲಿ ಕಾಲ ಕಳೆಯುತ್ತಿರುವ ದರ್ಶನ್‌ ಅವರ ಪಾಲಿಗೆ ಈ ಬಾರಿ ಹಬ್ಬಗಳ ಆಚರಣೆಯ ಸಡಗರ, ಸಂಭ್ರಮವಿಲ್ಲದಂತಾಗಿದೆ.

ಪ್ರತಿವರ್ಷ ನಾಡಹಬ್ಬ ದಸರಾದಲ್ಲಿ ಕುಟುಂಬ ಸದಸ್ಯರೊಂದಿಗೆ ತೊಡಗಿಸಿಕೊಳ್ಳುತ್ತಿದ್ದ ದರ್ಶನ್‌ ಅವರು ಈ ಬಾರಿ ಕುಟುಂಬದಿಂದ ದೂರ ಉಳಿದಿದ್ದಾರೆ. ಇತ್ತೀಚಿಗೆ ಗಣೇಶ ಹಬ್ಬವನ್ನು ಜೈಲಿನಲ್ಲಿ ಕಳೆದಿದ್ದರು. ಬಂಧನ ಅವಧಿ ಮುಕ್ತಾಯವಾಗುತ್ತಿದ್ದಂತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ದರ್ಶನ್‌ ಅವರು ದಸರಾ ಹಬ್ಬದೊಳಗೆ ಬೇಲ್‌ ಸಿಗುವ ನಿರೀಕ್ಷೆ ವ್ಯಕ್ತಪಡಿಸಿದ್ದರು. ಆದರೆ, ಕೋರ್ಟ್‌ ಜಾಮೀನು ಅರ್ಜಿ ವಿಚಾರಣೆಯನ್ನು ಅ. 14ಕ್ಕೆ ಮುಂದೂಡಿದೆ. ಹೀಗಾಗಿ, ದರ್ಶನ್‌ ಅವರ ಪಾಲಿಗೆ ಈ ಬಾರಿಯ ದಸರಾ ದಿನವನ್ನು ಜೈಲಿನಲ್ಲಿಯೇ ಕಳೆಯುವಂತಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ