ಕನ್ನಡಪ್ರಭ ವಾರ್ತೆ ಬೀದರ್
ಸಂಗೀತವು ಭಾರತೀಯ ಸಂಸ್ಕೃತಿಯನ್ನು ಬೆಳೆಸುವುದರ ಜತೆಗೆ ವ್ಯಕ್ತಿಗಳಲ್ಲಿ ಏಕಾಗ್ರತೆ ಮತ್ತು ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.ನಗರದ ಜಿಲ್ಲಾ ರಂಗ ಮಂದಿರದಲ್ಲಿ ಪ್ರಗತಿ ಸಂಗೀತ ಕಲಾ ಸಂಸ್ಥೆಯ 17ನೇ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ `ಸಂಗೀತ ಸೌರಭ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೀತ ಕೇವಲ ಮನೋರಂಜನೆ ಸಾಧನವಲ್ಲ. ಆತ್ಮದ ಆನಂದ ಹಾಗೂ ಮನ ಶಾಂತಿ ನೀಡುತ್ತದೆ. ಭಾರತೀಯ ಸಂಗೀತದಲ್ಲಿ ಭಾವನಾತ್ಮಕ ಸ್ಪರ್ಷವಿದೆ. ಪಾಶ್ಚಾತ್ಯ ಸಂಗೀತದಲ್ಲಿ ಅದನ್ನು ಕಾಣಲು ಸಿಗದು ರಾಗಗಳಿಂದ ರೋಗವೂ ನಿವಾರಣೆಯಾಗಬಹುದು. ಹಾಗಾಗಿ ಶಾಸ್ತ್ರೀಯ, ಹಿಂದುಸ್ಥಾನಿ ಸಂಗೀತಕ್ಕೆ ವಿಶ್ವದಲ್ಲೇ ಮನ್ನಣೆ ಇದೆ ಎಂದು ಅಭಿಪ್ರಾಯಪಟ್ಟರು.
ಕಲಾವಿದ ರಮೇಶ ಕೋಳಾರಕರ್ ಕುಟುಂಬವೇ ಸಂಗೀತಕ್ಕೆ ಅರ್ಪಿಸಿಕೊಂಡಿದ್ದು, ಕಳೆದ ಹಲವು ವರ್ಷಗಳಿಂದ ನೆಲಮೂಲದ ಸಂಗೀತದ ಜ್ಞಾನವನ್ನು ಉಣಬಡಿಸಿ, ಈ ಭಾಗದ ಕಲಾವಿದರಿಗೆ ವೇದಿಕೆಗಳನ್ನು ಒದಗಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಬರುವ ದಿನಗಳಲ್ಲಿ ನಗರದಲ್ಲಿ ಬೃಹತ್ ಸಂಗೀತೋತ್ಸವ ಆಯೋಜನೆ ಮಾಡೋಣ, ಇದಕ್ಕೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದ ಶಾಸಕರು, ಬೀದರನಲ್ಲಿಯೇ ಈ ಹಿಂದಿನಂತೆ ಸಂಗೀತ ಪರೀಕ್ಷಾ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ಸಂಗೀತ, ನೃತ್ಯದಂತ ಕಲೆಗಳಿಂದ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯುತ್ತಾರೆ. ಸಂಗೀತದ ಸೇವೆಯಲ್ಲಿ ತೊಡಗಿರುವ ಕೋಳಾರಕರ್ ಕುಟುಂಬಕ್ಕೆ ಮುಂದಿನ ವರ್ಷದ ದಸರಾ ಉತ್ಸವದಲ್ಲಿ ವೇದಿಕೆ ಕಲ್ಪಿಸಿಕೊಡಲು ಮತ್ತು ಅಕಾಡೆಮಿಯಿಂದ ಒಂದು ಕಾರ್ಯಕ್ರಮ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ರಮೇಶ ಕೋಳಾರಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಪ್ರಗತಿ ಸಂಸ್ಥೆ ಶ್ರಮಿಸುತ್ತದೆ. ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಮನವಿ ಮಾಡಿದರು. ತ್ರಿವೇಣಿ ಕೊಳಾರಕರ್ ಸ್ವಾಗತಿಸಿ ದೇವಿದಾಸ ಜೋಶಿ ನಿರೂಪಿಸಿದರು.ಈ ಸಂದರ್ಭದಲ್ಲಿ ವಿವಿಧನ ಕ್ಷೇತ್ರದ ಸಾಧನೆಗಾಗಿ ಹಿರಿಯ ಕಲಾವಿದರಾದ ಪಂ. ಡಾ. ವೀರಭದ್ರಪ್ಪ ಗಾದಗೆ, ಪಂ. ಕೇಶವರಾ ಸೂರ್ಯವಂಶಿ, ಪಂ. ಜನಾರ್ಧನ ವಾಘಮಾರೆ, ಪ್ರೊ. ಎಸ್.ವಿ ಕಲ್ಮಠ, ಹಿರಿಯ ಚಿಂತಕ ರಾಮಕೃಷ್ಣ ಸಾಳೆ ಮತ್ತು ಪತ್ರಕರ್ತ ಸದಾನಂದ ಜೋಶಿ ಅವರನ್ನು ಗೌರವಿಸಲಾಯಿತು.
ಗುದಗೆ ಆಸ್ಪತ್ರೆಯ ಮುಖ್ಯಸ್ಥ ಡಾ. ಚಂದ್ರಕಾಂತ ಗುದಗೆ, ಜ್ಞಾನಸುಧಾ ಶಿಕ್ಷಣ ಸಂಸ್ತೆ ಅಧ್ಯಕ್ಷೆ ಡಾ. ಜಿ. ಪೂರ್ಣಿಮಾ, ಗುದಗೆ, ಧರ್ಮಸ್ಥಳ ಜನಜಾಗೃತಿ ವೇದಿಕೆ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್, ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರ, ಉದ್ಯಮಿ ಚಂದ್ರಶೇಖರ ಹೆಬ್ಬಾಳೆ ಮತ್ತಿತರರು ವೇದಿಕೆಯಲ್ಲಿದ್ದರು.ನಂತರ ಶ್ರೇಯಾ ಕೊಳಾರಕ್ ಅವರ ಕಥಕ್ ನೃತ್ಯ ಜನಮನ ಸೆಳೆಯಿತು. ಪುಣೆಯ ಸೀತಾರ ವಾದನ ಮತ್ತು ರೋಶನ್ ಕೊಳಾರಕರ್ ತಬಲಾ ಜುಗಲ ಬಂದಿ ಪ್ರೇಕ್ಷಕರನ್ನು ತಲೆದೂಗಿಸುವಂತೆ ಮಾಡಿತು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳು ಸಂಗೀತದ ರಸದೌತಣ ಉಣಬಡಿಸಿದರು.