ಎರಡು ದಿನಗಳ ಸುಗಮ ಸಂಗೀತ ತರಬೇತಿ ಶಿಬಿರ
ಬದುಕಿಗೆ ಔಷಧ ನೀಡುವ ಗುಣ ಸಂಗೀತಕ್ಕೆ ಇದೆ. ಸ್ನೇಹ, ಪ್ರೀತಿಯ ಅನ್ವರ್ಥನಾಮ ಕೂಡ ಸುಗಮ ಸಂಗೀತ. ಹಾಗಾಗಿ ಸುಗಮ ಸಂಗೀತವನ್ನು ಆಲಿಸದ, ಆಸ್ವಾದಿಸದ ಮನಸ್ಸು ಇದ್ದರೆ ಅದು ಕಲ್ಲು ಹೃದಯವೇ ಸರಿ ಎಂದು ಸಮಾಜ ಸೇವಕ, ರೋಟರಿ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಇ. ಜ್ಞಾನೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ನಿಜಗುಣ ರೆಸಿಡೆನ್ಸಿಯಲ್ ಹಾಲ್‌ನಲ್ಲಿ ಶನಿವಾರ ಸುಗಮ ಸಂಗೀತ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಶಿವಮೊಗ್ಗ ಹಾಗೂ ತಾಲೂಕು ಘಟಕ ಸೊರಬ ಮತ್ತು ಗುರುಕುಲ ಸೊರಬ ಜಂಟಿಯಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ಸುಗಮ ಸಂಗೀತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ವಿಶ್ವದ ಬೇರೆ ಯಾವ ಭಾಗದಲ್ಲಿಯೂ ಇರದ ಕಲಾ ಪ್ರಕಾರ ಸುಗಮ ಸಂಗೀತ. ಕನ್ನಡದ ಅಸ್ಮಿತೆಯಂತೆ ಇರುವ ಸುಗಮ ಸಂಗೀತದ ಬಗ್ಗೆ ಕನ್ನಡಿಗರು ಹೆಮ್ಮೆಪಡಬೇಕು. ಸೃಷ್ಟಿಯ ಪ್ರತಿಯೊಂದು ಅಣುವು ತರಂಗವೇ ಆಗಿದ್ದು ಇದೇ ಸಂಗೀತದ ಮೂಲತತ್ವವಾಗಿದೆ ಎಂದ ಅವರು, ಮರಾಠಿ ರಂಗಗೀತೆ ಅನುಸರಿಸಿ ಹುಟ್ಟಿದ ಸುಗಮ ಸಂಗೀತ ಪ್ರತ್ಯೇಕ ಅಸ್ಮಿತೆ ಉಳಿಸಿಕೊಂಡಿದೆ. ಹಿಂದಿ, ತಮಿಳು, ಮರಾಠಿ ಸೇರಿ ಬೇರೆ ಯಾವುದೇ ಭಾಷೆಯಲ್ಲಿ ಈ ಕಲಾ ಪ್ರಕಾರ ಇಲ್ಲ ಎಂದರು.
ಸಮಾಜ ಸೇವಕ ನಾಗರಾಜ್ ಗುತ್ತಿ ಮಾತನಾಡಿ, ಸುಗಮ ಸಂಗೀತದಿಂದ ಮನಸ್ಸು ಅರಳುವ ಜತೆಗೆ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಮಕ್ಕಳಲ್ಲಿ ಸುಗಮ ಸಂಗೀತ ಬಗ್ಗೆ ಆಸಕ್ತಿ ಮೂಡಿಸಲು ಇಂತಹ ಶಿಬಿರಗಳು ಅವಶ್ಯಕ. ಸಂಗೀತ ಮನುಷ್ಯ ಸಮಾಜಕ್ಕೆ ಆಧ್ಯಾತ್ಮ ಶಿರಗಳಂತೆ ಶಾಂತಿ ಮತ್ತು ನೆಮ್ಮದಿಯನ್ನ ಕೊಡುವ ಕೆಲಸ ಮಾಡುತ್ತವೆ ಎಂದರು.
ಸುಗಮ ಸಂಗೀತ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಶೆಟ್ಟಿ ಮಾತನಾಡಿ, ಸೊರಬ ತಾಲೂಕು ಕಲಾವಿದರದರನ್ನು ಗೌರವಿಸುವ ನೆಲೆಯಾಗಿದ್ದು ಸಂಗೀತ ಪ್ರೇಮಿಯಾಗಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಕಲಾವಿದರನ್ನು ಗೌರವಿಸಿ ಪುರಸ್ಕರಿಸುತ್ತಿದ್ದರು ಎಂದರು.