ಕನ್ನಡಪ್ರಭ ವಾರ್ತೆ ಶಿರಸಿ
ಸಂಗೀತ ದೈವ ಸೃಷ್ಟಿಸಿದ ಅದ್ಭುತ ಕಲೆ ಎಂದು ಹಿರಿಯ ಚಿತ್ರನಟಿ ಪದ್ಮಾ ವಾಸಂತಿ ಹೇಳಿದರು.ನಗರದ ಟಿಆರ್‌ಸಿ ಸಭಾಂಗಣದಲ್ಲಿ ಇಲ್ಲಿನ ಜನನಿ ಮ್ಯೂಸಿಕ್ ಸಂಸ್ಥೆ ಹಾಗೂ ಹಾಡುವ ಗೂಡು ಹಮ್ಮಿಕೊಂಡ ಎದೆತುಂಬಿ ಹಾಡುವೆನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಗೀತ ಎಂದರೆ ಅದರಲ್ಲೂ ಹಾಡು ಎಲ್ಲರಿಗೂ ಇಷ್ಟ. ಕಲಾದೇವಿ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ ಎಂದ ಅವರು, ಜನನಿ ಮ್ಯೂಸಿಕ್ ಸಂಸ್ಥೆಯ ರೇಖಾ ದಿನೇಶ ಬಹಳ ವರ್ಷಗಳಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ನಟ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ, ಶಾಸ್ತ್ರೀಯ ಸಂಗೀತ ನಮ್ಮ ಬೇರು. ಮೊದಲು ಶಾಸ್ತ್ರೀಯ ಸಂಗೀತ ಕಲಿಯಬೇಕು. ಆ ನಂತರ ಲಘು ಸಂಗೀತ, ಭಾವಗೀತೆ ಇನ್ನುಳಿದವುಗಳನ್ನು ಹಾಡಬಹುದು. ಶಾಸ್ತ್ರೀಯ ಸಂಗೀತದ ಸೊಗಡಿನಲ್ಲಿಯೇ ಸಿನೆಮಾ ಹಾಡುಗಳಲ್ಲೂ ಅಳವಡಿಸಿಕೊಳ್ಳಲಾಗುತ್ತದೆ. ಅದರ ರಾಗವಿಲ್ಲದೇ ಸಿನೇಮಾ ಹಾಡುಗಳಿಲ್ಲ ಎಂದ ಅವರು ಕಲೆಯನ್ನು ಕಲೆಯಾಗಿ ನೋಡಬೇಕು ಎಂದರು.ಕಲೆಯಲ್ಲಿ ಬದುಕುತ್ತಿರುವವರು, ಪ್ರೋತ್ಸಾಹಿಸುವವರು, ಆರಾಧಿಸುವವರು ಕಲಾ ಸರಸ್ವತಿಗಳು. ನಮ್ಮ ಜಿಲ್ಲೆ ಕಲೆ ಸಂಸ್ಕೃತಿಯ ತವರು. ಇಲ್ಲಿ ಸಂಗೀತ, ನಾಟಕ, ಭರತನಾಟ್ಯ, ಕೋಲಾಟ ಮತ್ತಿತರ ಕಲಾಪ್ರಕಾರಗಳು ಹುಲುಸಾಗಿದೆ. ಯುವ ಸಮೂಹಕಕ್ಕೆ ಇದರ ಅರಿವು ಪಡೆಯುವುದಕ್ಕೆ ಸಾಕಷ್ಟು ಅವಕಾಶವಿದೆ ಎಂದರು.
ಜನನಿ ಮ್ಯೂಸಿಕ್ ಸಂಸ್ಥೆ ಅಧ್ಯಕ್ಷ ದಿನೇಶ ಹೆಗಡೆ, ವಿದುಷಿ ರೇಖಾ ದಿನೇಶ, ಹಾಡುವ ಗೂಡಿನ ಪ್ರಮುಖ ಗಣೇಶ ಕೂರ್ಸೆ ಮತ್ತಿತರರಿದ್ದರು.ಒಂದೆಡೆ ಮಳೆ ಸುರಿಯುತ್ತಿದ್ದರೆ ಇನ್ನೊಂದರೆ ಟಿಆರ್‌ಸಿ ಹಾಲ್‌ನಲ್ಲಿ ಇಡೀ ದಿನ ಜನನಿ ಮ್ಯೂಸಿಕ್ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಕರೋಕೆ ಕಲಾವಿದರಿಂದ ಕನ್ನಡ ಹಾಗೂ ಹಿಂದಿ ಚಲನಚಿತ್ರಗಳ ಗೀತೆಗಳು ಒಂದಾದ ನಂತರ ಒಂದರಂತೆ ಮೂಡಿಬಂದವು. ಸೇರಿದ್ದ ಪ್ರೇಕ್ಷಕರಿಗೆ ಸುಮಧುರ ಗೀತೆ ಮುದ ನೀಡಿದವು. ಜತೆಯಲ್ಲಿ ಅಮೃತಾ ಪೈ ನೃತ್ಯ ಸಹ ಗಮನಸೆಳೆಯಿತು. ಪ್ರವೀಣ ಕಾಮತ್, ಸುಮನಾ ಹೆಗಡೆ, ಪ್ರಿಯಾಂಕಾ, ರೇಖಾ ಭಟ್, ಸಂತೋಷ ಶೇಟ್, ರೇಷ್ಮಾ ಶೇಟ್ ಮತ್ತಿತರರು ನಿರೂಪಿಸಿದರು.