ಮತಗಳಿಗಾಗಿ ಕಾಂಗ್ರೆಸ್ ಸರ್ಕಾರದಿಂದ ಮುಸ್ಲಿಂ ತುಷ್ಠೀಕರಣ

KannadaprabhaNewsNetwork |  
Published : Nov 23, 2024, 12:30 AM IST
ಪೊಟೋ: 22ಎಸ್‌ಎಂಜಿಕೆಪಿ05ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಭೂಮಿ ನಮ್ಮ ಹಕ್ಕಿಗಾಗಿ ಪ್ರತಿಭಟನಾ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್ ಸರ್ಕಾರ ಮುಸ್ಲಿಂ ಮತಗಳಿಗಾಗಿ ತುಷ್ಟೀಕರಣ ಮಾಡುತ್ತ ಬಂದಿದ್ದು, ರಾಷ್ಟ್ರ ಧ್ವಜದಲ್ಲಿ ಕೇಸರಿ ಬಿಳಿ ಹಸಿರು ಇದ್ದರು ಸಹ ಹಸಿರನ್ನು ಮಾತ್ರ ಪ್ರೀತಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದರು.

ರಾಜ್ಯ ಬಿಜೆಪಿ ಕರೆಯ ಮೇರೆಗೆ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ‘ನಮ್ಮ ಭೂಮಿ ನಮ್ಮ ಹಕ್ಕಿಗಾಗಿ’ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಅನ್ವರ್ ಮಾಣಿಪ್ಪಾಡಿಯವರು ವಕ್ಫ್ ಹೆಸರಲ್ಲಿ ಲೂಟಿಯಾಗಿದ್ದು, ತನಿಖೆಯಾಗಬೇಕೆಂದು ವರದಿ ನೀಡಿದ್ದರು. ಸರ್ಕಾರ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. 9 ಲಕ್ಷ ಎಕರೆಗೂ ಹೆಚ್ಚಿನ ಭೂಮಿಯನ್ನು ಯಾವುದೇ ಮಾನದಂಡವಿಲ್ಲದೆ ವಕ್ಫ್ ಆಸ್ತಿಯಾಗಿ ಮಾರ್ಪಾಡು ಮಾಡಲಾಗಿದೆ ಎಂದು ದೂರಿದರು.

ರೈಲ್ವೆ, ರಕ್ಷಣಾ ಇಲಾಖೆಯಂತಹ ದೊಡ್ಡ ಇಲಾಖೆಗಳ ಆಸ್ತಿ ಬಿಟ್ಟರೆ ಈಗ ವಕ್ಫ್ ಮಂಡಳಿಯೇ ಅತಿ ದೊಡ್ಡ ಆಸ್ತಿ ಹೊಂದಿದ ಸಂಸ್ಥೆಯಾಗಿದೆ. ಗುಜರಾತ್ ಸಮೀಪ ದ್ವೀಪಗಳನ್ನು ಕಬಳಿಸಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆರ್‌.ಕೆ.ಸಿದ್ದರಾಮಣ್ಣ ಮಾತನಾಡಿ, ದೇಶ ವಿಭಾಜನೆಯಾದಾಗ ಪಾಕಿಸ್ಥಾನಕ್ಕೆ ಭಾರತದ ಜಾಗ ಮತ್ತು ಆರ್ಥಿಕ ನೆರವು ನೀಡಲಾಗಿತ್ತು. ಪಾಕಿಸ್ತಾನಕ್ಕೆ ಹೋದವರ ಆಸ್ತಿ ಇಲ್ಲಿ ಉಳಿದಿದ್ದರೆ ಅದು ಸರ್ಕಾರದ ಆಸ್ತಿಯಾಗುತ್ತದೆ. ವಕ್ಫ್ ಆಸ್ತಿಯಾಗುವುದಿಲ್ಲ. ಈಗ ಅದನ್ನು ವಕ್ಫ್ ಆಸ್ತಿ ಮಾಡಿಕೊಂಡಿದ್ದಾರೆ. ಮೋದಿಯವರು ಸಂಸದೀಯ ಜಂಟಿ ಸಮಿತಿ ರಚನೆ ಮಾಡಿ, ವಕ್ಫ್ ಕಾಯಿದೆಯ ಬಗ್ಗೆ ವ್ಯಾಪಕ ಚರ್ಚೆಗೆ ಅವಕಾಶ ನೀಡಿದ್ದಾರೆ. ವಕ್ಫ್ ಕಮಿಷನರ್ ಇದು ತನ್ನ ಆಸ್ತಿ ಎಂದು ನಿರ್ಣಯಿಸಿದರೆ ಸುಪ್ರೀಂ ಕೋರ್ಟ್‌ನಲ್ಲೂ ಪ್ರಶ್ನೆ ಮಾಡುವಾಗಿಲ್ಲ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ. ವಿಶೇಷ ಅಧಿಕಾರ ಹೊಂದಿದ ವಕ್ಫ್ ಕಾಯ್ದೆಯನ್ನು ಬದಲಿಸಲು ಮೋದಿ ಹೊರಟಿದ್ದಾರೆ ಎಂದು ತಿಳಿಸಿದರು.

ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿ, ಶಿವಮೊಗ್ಗದಲ್ಲೇ ಪ್ರಾರ್ಥನೆಗಾಗಿ ಅವಕಾಶ ನೀಡಿದ ಜಾಗವನ್ನು ವಕ್ಫ್ ಆಸ್ತಿ ಮಾಡಿಕೊಂಡಿದ್ದಾರೆ. ವಿನಾಯಕ ಚಿತ್ರಮಂದಿರ ಬಳಿ ಇದ್ದ ಪಾಲಿಕೆ ಆಸ್ತಿಯನ್ನು ಕೂಡ ತಮ್ಮದೆಂದು ನ್ಯಾಯಾಲಯದ ಮೊರೆ ಹೋಗಿದ್ದು ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.

ತೊಗರ್ಸಿ ಮಠದ ಚನ್ನವೀರ ದೇಸಿಕೇಂದ್ರ ಸ್ವಾಮೀಜಿ ಮಾತನಾಡಿ, ಸರ್ಕಾರ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಮಠ ಮಂದಿರಗಳ ಆಸ್ತಿಗಳು ವಕ್ಫ್ ಆಸ್ತಿಯಾಗಲು ಹೇಗೆ ಸಾಧ್ಯ. ನೂರಾರು ವರ್ಷಗಳ ಇತಿಹಾಸವಿರುತ್ತದೆ. ಜಿಲ್ಲೆಯಲ್ಲಿ ಈ ರೀತಿ ನಡೆದರೆ, ಯಾವುದೇ ಸಂದರ್ಭದಲ್ಲೂ ಎಲ್ಲಾ ಮಠಾಧೀಶರು ಒಗ್ಗಟ್ಟಾಗಿ ಹೋರಾಟಕ್ಕೆ ಇಳಿಯುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬಿಳಕಿ ಶ್ರೀಗಳು, ಸೊರಬ ಜಡೆ ಮಠದ ಶ್ರೀಗಳು, ಶಿರಾಳಕೊಪ್ಪ ವಿರಕ್ತ ಮಠದ ಶ್ರೀಗಳು, ಹಾರನಹಳ್ಳಿ ರಾಮಲಿಂಗೇಶ್ವರ ಶ್ರೀಗಳು, ಶೈಣ ಭಗತ್ ಶ್ರೀಗಳು, ಜಂಗಮ ಕ್ಷೇತ್ರ ತಿಪ್ಪಾಯಿಕೊಪ್ಪದ ಮಹಾಂತ ಶ್ರೀಗಳು, ಚೌಕಿ ಮಠದ ನೀಲಕಂಡ ಶ್ರೀಗಳು, ಶಿಕಾರಿಪುರದ ವಿರಕ್ತ ಮಠದ ಚನ್ನಬಸವ ಸ್ವಾಮಿಗಳು, ಜಲ್ಲಪ್ಪ ಮಠದ ಶ್ರೀಗಳು, ಪ್ರಮುಖರಾದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್, ಮಾಜಿ ಶಾಸಕ ಅಶೋಕ್ ನಾಯ್ಕ, ಪ್ರಮುಖರಾದ ಗಿರೀಶ್ ಪಟೇಲ್, ಎಸ್.ದತ್ತಾತ್ರಿ, ಜ್ಞಾನೇಶ್ವರ್, ರತ್ನಾಕರ್ ಶೆಣೈ, ವೀರಭದ್ರಪ್ಪ ಪೂಜಾರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!