ಸಂವಿಧಾನ ಅರಿವು । ಜನಹಿತಾಶಕ್ತಿ ಹೋರಾಟ ವೇದಿಕೆ, ಕನ್ನಡ, ಸಂಸ್ಕೃತಿ ಇಲಾಖೆ ಆಯೋಜನೆ ಸಂವಿಧಾನ ಪೀಠಿಕೆ ಬೋಧನೆ
ದೇಶದ ಅಖಂಡತೆಗೆ, ಸಾರ್ವಭೌಮತ್ವಕ್ಕೆ ಪೂರಕವಾದ ಲಿಖಿತ ಸಂವಿಧಾನವನ್ನು ಬರೆದು ಅಂಬೇಡ್ಕರ್ ಭಾರತದಂತಹ ಬೃಹತ್ ರಾಷ್ಟçಕ್ಕೆ ಅರ್ಪಿಸಿದ್ದಾರೆ ಎಂದು ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ, ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಸಲಹೆ ನೀಡಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಜನಹಿತಾಶಕ್ತಿ ಹೋರಾಟ ವೇದಿಕೆ, ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೆಎಸ್‌ಎಸ್ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ದೇಶದ ತಾಯಿ ಸಂವಿಧಾನ, ಅದನ್ನು ಯಥಾಸ್ಥಿತಿ ಕಾಪಾಡುವ ಮಹತ್ವದ ಜವಾಬ್ದಾರಿ ಎಲ್ಲರ ಮೇಲಿದೆ, ಆದರೆ ಈಚೆಗೆ ಸಂವಿಧಾನ ಬದಲಾವಣೆ ಮಾಡುವ ಹೇಳಿಕೆಗಳು ಬರುತ್ತಿರುವುದು ಆತಂಕಕಾರಿ, ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ನಾನಾ ಭಾಷೆ, ಧರ್ಮ, ವಿವಿಧ ಜಾತಿಯ ಜನರಿದ್ದು, ಇವರ ಅಭಿವೃದ್ದಿಗೆ ಪೂರಕವಾದ ಸಂವಿಧಾನ ರಚನೆಯಾಗಿರುವುದು ಖುಷಿಯ ವಿಚಾರ ಎಂದರು.
ವಿಚಾರಮಂಡನೆ ಮಾಡಿದ ಭೋಗಾಪುರ ವಸತಿಯುಕ್ತ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು ಮಾತನಾಡಿ, ನಮ್ಮ ದೇಶದಲ್ಲಿ 7530 ಜಾತಿಗಳಿದ್ದು, ಅನೇಕ ವೈರುಧ್ಯಗಳಿವೆ, ಸಾವಿರಾರು ಭಾಷೆ ಮಾತನಾಡುವ ಜನರಿದ್ದಾರೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಉರುಳಿದರೂ ಸಂವಿಧಾನಕ್ಕೆ ಯಾವುದೇ ಅಪಚಾರವಾಗಿಲ್ಲ. ಪ್ರಪಂಚದ 44 ದೇಶಗಳಲ್ಲಿ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಬಗ್ಗೆ ಆಮೂಲಾಗ್ರ ಚರ್ಚೆಗಳಾಗುತ್ತಿರುವುದು ಸಂವಿಧಾನದ ಪವಿತ್ರತೆಯಿಂದ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿದ್ದಾರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ,ರಂಗಸ್ವಾಮಿ ಸಂವಿಧಾನ ಪೀಠಿಕೆ ಬೋಧಿಸಿದರು.