ಕೆಐಎಡಿಬಿ ಸೇರಿ ಎಲ್ಲ ಇಲಾಖೆಗಳಲ್ಲೂ ಕೈಗಾರಿಕಾ ಯೋಜನೆಗಳಿಗೆ ತ್ವರಿತ ಅನುಮೋದನೆ ದೊರೆಯುವಂತೆ ನೋಡಿಕೊಳ್ಳಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ಭವಿಷ್ಯ ಎಐನಿಂದ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಆದ್ದರಿಂದ ಕೆಐಎಡಿಬಿ ಸೇರಿ ಎಲ್ಲ ಇಲಾಖೆಗಳಲ್ಲೂ ಕೈಗಾರಿಕಾ ಯೋಜನೆಗಳಿಗೆ ತ್ವರಿತ ಅನುಮೋದನೆ ದೊರೆಯುವಂತೆ ನೋಡಿಕೊಳ್ಳಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಗುರುವಾರ ವಿಧಾನಸೌದದ ಸಮ್ಮೇಳನ ಸಭಾಂಗಣದಲ್ಲಿ ಸುಲಲಿತ ವಾಣಿಜ್ಯ ಸಂಸ್ಕೃತಿ ಮತ್ತು ಏಕಗವಾಕ್ಷಿ ಸಮಿತಿಗಳ ಮಹತ್ವದ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಸುಲಲಿತ ವಾಣಿಜ್ಯ ಸಂಸ್ಕೃತಿ ತರಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ನಮಗೆ ನೆರೆಹೊರೆ ರಾಜ್ಯಗಳಿಂದ ತೀವ್ರ ಸ್ಪರ್ಧೆ ಇದೆ. ನಾವು ಅಲ್ಲಿನ ನೀತಿ, ನಿಯಮಾವಳಿಗಳನ್ನೂ ಅಧ್ಯಯನ ಮಾಡಿದ್ದು, ಅದಕ್ಕಿಂತ ಉತ್ತಮವಾದ ಮತ್ತು ಕೈಗಾರಿಕಾ ಸ್ನೇಹಿಯಾದ ವ್ಯವಸ್ಥೆಯನ್ನು ರಾಜ್ಯದಲ್ಲಿ ತರಲು ಪಣ ತೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ಬಾಕಿ ಇರುವ 28 ಸೇವೆಗಳನ್ನು ಸುಗಮಗೊಳಿಸಿ ಕೈಗಾರಿಕಾ ಸ್ನೇಹಿಯನ್ನಾಗಿಸಲು ತ್ವರಿತವಾಗಿ ನಿಯಮಾವಳಿಗೆ ಅಗತ್ಯ ತಿದ್ದುಪಡಿ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಐನಿಂದ ಏನಾಗುತ್ತೋ ಗೊತ್ತಿಲ್ಲ:ಐಟಿಯಲ್ಲಿ ಎಐ ಬಂದಿರುವುದರಿಂದ ಭವಿಷ್ಯದಲ್ಲಿ ಏನಾಗುತ್ತದೋ ಗೊತ್ತಿಲ್ಲ. ಹಾಗಾಗಿ ಕೆಐಎಡಿಬಿ ಸೇರಿ ಎಲ್ಲ ಇಲಾಖೆಗಳಲ್ಲೂ ಕೈಗಾರಿಕಾ ಯೋಜನೆಗಳಿಗೆ ತ್ವರಿತ ಅನುಮೋದನೆ ದೊರೆಯುವಂತೆ ನೋಡಿಕೊಳ್ಳಿ. ವಿದ್ಯುತ್ ಸಂಪರ್ಕ, ಅಗ್ನಿಶಾಮಕ ಇಲಾಖೆ ಅನುಮತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಗಳು ತ್ವರಿತವಾಗಿ ಸಿಗುವಂತೆ ಮಾಡಬೇಕು. ಈ ವಿಷಯದಲ್ಲಿ ಉದ್ಯಮಿಗಳಿಗೆ ಸತಾಯಿಸುವುದನ್ನು ತಪ್ಪಿಸಬೇಕು ಎಂದು ಸೂಚಿಸಿದರು.
ಏಕಗವಾಕ್ಷಿ ಯೋಜನೆಯಡಿ ಈವರೆಗೆ 20 ಇಲಾಖೆಗಳ 115 ಸೇವೆಗಳನ್ನು ಜೋಡಣೆ ಮಾಡಿದ್ದು, ಬಾಕಿ ಇರುವ 28 ಸೇವೆಗಳನ್ನು ಆದ್ಯತಾ ಕ್ಷೇತ್ರಗಳೆಂದು ಪರಿಗಣಿಸಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು. ಇದರಲ್ಲಿ ಕಂದಾಯ, ಅರಣ್ಯ, ಗೃಹ, ಪರಿಸರ, ಪ್ರಾಥಮಿಕ ಶಿಕ್ಷಣ, ಅಗ್ನಿಶಾಮಕ ದಳ, ಇಂಧನ ಮುಂತಾದವನ್ನು ಗುರುತಿಸಲಾಗಿದೆ. ಒಟ್ಟಿನಲ್ಲಿ ಹೂಡಿಕೆದಾರರಿಗೆ ಸಮಯ ವ್ಯರ್ಥವಾಗದಂತೆ, ಅವರನ್ನು ರಾಜ್ಯಕ್ಕೆ ಸೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಎಲ್ಲ ಇಲಾಖೆಗಳ ಸಹಕಾರ ಮುಖ್ಯ ಎಂದು ಹೇಳಿದರು.ಅಗ್ನಿಶಾಮಕ ದಳ ಎನ್‌ಒಸಿಗೆ 21 ದಿನ:
ಗೃಹ ಇಲಾಖೆಯಡಿ ಬರುವ ಅಗ್ನಿಶಾಮಕ ದಳದಿಂದ ಎನ್ಒಸಿ ಕೊಡಲು ಈವರೆಗೂ 60 ದಿನಗಳ ಅವಕಾಶವಿತ್ತು. ಇದನ್ನು ಈಗ 21 ದಿನಕ್ಕೆ ಇಳಿಸಲಾಗಿದೆ. ವಿದ್ಯುತ್ ಸೌಲಭ್ಯಕ್ಕೆ ಬೇಕಾದ ಅನುಮತಿಗೆ ಕಾಲಾವಕಾಶವನ್ನು 25 ದಿನದಿಂದ 10 ದಿನಕ್ಕೆ, ಲಿಫ್ಟ್/ಎಸ್ಕಲೇಟರ್ ಬಳಕೆಗೆ ಬೇಕಾದ ಅನುಮತಿಗೆ 40 ದಿನದಿಂದ 20 ದಿನಕ್ಕೆ, ಹೊಸ ನಲ್ಲಿ ಸಂಪರ್ಕಕ್ಕೆ 42 ದಿನದಿಂದ 30 ದಿನಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಕಾರ್ಮಿಕ ಇಲಾಖೆ ಕೈಗಾರಿಕಾ ಯೋಜನೆ ಮತ್ತು ಲೈಸೆನ್ಸ್, ಬಾಯ್ಲರ್ ನೋಂದಣಿಗಳನ್ನು ಇನ್ನು ಮುಂದೆ 30 ದಿನಗಳ ಬದಲು 14 ದಿನಗಳಲ್ಲಿ ಕೊಡಲಿದೆ. ಈ ಸಂಬಂಧದ ತಿದ್ದುಪಡಿಗಳಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಇವು ಸದ್ಯದಲ್ಲೇ ಸಂಪುಟ ಸಭೆ ಮುಂದೆ ಚರ್ಚೆಗೆ ಬರಲಿದ್ದು, ಕ್ಷಿಪ್ರಗತಿಯಲ್ಲಿ ಕಾನೂನು ರೂಪ ನೀಡಲಾಗುವುದು ಎಂದು ವಿವರಿಸಿದ್ದಾರೆ.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕೂಡ ವಿವಿಧ ರೀತಿಯ ಅನುಮತಿಗಳಿಗೆ ಈವರೆಗೆ ಇದ್ದ ಕಾಲಾವಧಿ ಗಣನೀಯವಾಗಿ ಕಡಿತಗೊಳಿಸಲಾಗಿದೆ. ಹಾಗೆಯೇ ಭೂ ಬಳಕೆ ಉದ್ದೇಶ ಪರಿವರ್ತನೆಗೆ ಅನುಮತಿ ನೀಡಲು ಬೆಂಗಳೂರಿನ ಪರಿಮಿತಿಯಲ್ಲಿ ಈವರೆಗೆ 120 ದಿನಗಳ ಕಾಲಾವಕಾಶವಿತ್ತು. ಇನ್ನು ಮುಂದೆ ಇದು 45 ದಿನಗಳಲ್ಲಿ ಆಗಲಿದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಜೋಳನ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕಂದಾಯ ಆಯುಕ್ತರಾದ ಮೀನಾ ನಾಗರಾಜ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವಶಂಕರ ಸೇರಿ ಬಹುತೇಕ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಹಾಜರಿದ್ದರು.