ತಾಲೂಕು ಪಂಚಾಯ್ತಿ ಆವರಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಶಾಸಕ ಸಿಮೆಂಟ್ ಮಂಜು, ಸಾರ್ವಜನಿಕರ ಕೆಲಸಗಳಲ್ಲಿ ಕಾಲಹರಣ ಮಾಡದೆ ತಕ್ಷಣ ಸ್ಪಂದಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಗೆ ಮಾಹಿತಿ ನೀಡದೆ ಗೈರಾಗಿದ್ದ ಲೋಕೋಪಯೋಗಿ ಇಲಾಖೆಯ ಎ.ಇ.ಇ ಮುರುಗೇಶ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ಕೊಡದೆ ಸಭೆಗೆ ಬಾರದಿರುವುದು ನಿರ್ಲಕ್ಷ್ಯದ ಪರಮಾವಧಿ” ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿಗೆ ಬಂದಿರುವ ಮಳೆ ಹಾನಿ ಪರಿಹಾರ ಕಲ್ಬುರ್ಗಿ ಜಿಲ್ಲೆಗೆ ಸರ್ಕಾರ ವರ್ಗಾವಣೆ ಮಾಡಿರುವುದು ಖಂಡನೀಯ, ಇದರ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಪಟ್ಟಣದ ತಾಲೂಕು ಪಂಚಾಯ್ತಿ ಆವರಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಶಾಸಕ ಸಿಮೆಂಟ್ ಮಂಜು, ಸಾರ್ವಜನಿಕರ ಕೆಲಸಗಳಲ್ಲಿ ಕಾಲಹರಣ ಮಾಡದೆ ತಕ್ಷಣ ಸ್ಪಂದಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಗೆ ಮಾಹಿತಿ ನೀಡದೆ ಗೈರಾಗಿದ್ದ ಲೋಕೋಪಯೋಗಿ ಇಲಾಖೆಯ ಎ.ಇ.ಇ ಮುರುಗೇಶ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ಕೊಡದೆ ಸಭೆಗೆ ಬಾರದಿರುವುದು ನಿರ್ಲಕ್ಷ್ಯದ ಪರಮಾವಧಿ” ಎಂದರು. ಕ್ಷೇತ್ರಕ್ಕೆ ಅನುಕೂಲಕರ ಯೋಜನೆಗಳ ಬಗ್ಗೆ ಚರ್ಚೆ:

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಹಲವು ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ್ ಮಾತನಾಡಿ ಸ್ಪ್ರಿಂಕ್ಲರ್‌ ನೀರಾವರಿ ಘಟಕಗಳಿಗೆ ಬೇಡಿಕೆ ಹೆಚ್ಚಿದ್ದು, ಅನುದಾನ ಕಡಿಮೆ ಇದೆ ಎಂದರು. 2000 ಮೆಣಸು ಬೆಳೆಗಾರರಿಗೆ 400 ಕೋಟಿ ರು. ವಿಮೆ ಬಂದಿದೆ ಎಂದರು. ಇದಕ್ಕೆ ಶಾಸಕರು ಮೊತ್ತ ವಿತರಣೆ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದರು. ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಚೆಸ್ಕಾಂ ಇಲಾಖೆಯವರು ಮೋಟಾರ್‌ಗಳಿಗೆ ಸರಿಯಾದ ವಿದ್ಯುತ್ ಸಂಪರ್ಕ ನೀಡಬೇಕು ಎಂದರು. ಹಿಂದುಳಿದ ವರ್ಗಗಳ ಕಲ್ಯಾಣ ವತಿಯಿಂದ ಹೆತ್ತೂರು ಹಾಗೂ ಅಜಾದ್ ರಸ್ತೆ ಭಾಗದಲ್ಲಿರುವ ಬಾಡಿಗೆ ಕಟ್ಟಡಗಳ ಸ್ಥಿತಿ ಪರಿಶೀಲನೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಹಾಗೂ ಕಪ್ಪಿನಕೋಡಿ ಪ್ರದೇಶದ ಶಿಥಿಲಾವಸ್ಥೆಯ ಕಟ್ಟಡಗಳ ಬಗ್ಗೆ ಕೂಡ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ ಪಶುವೈದ್ಯಕೀಯ ಇಲಾಖೆಗೆ 68 ಸಿಬ್ಬಂದಿ ಅಗತ್ಯವಿದ್ದರೂ ಕೇವಲ 16 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಶಾಸಕರು ಇದಕ್ಕೆ ಪ್ರತಿಕ್ರಿಯಿಸಿ ಪಶು ಇಲಾಖೆಯ ಆ್ಯಂಬುಲೆನ್ಸ್ ಸೇವೆ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಮಾತ್ರ ಸೀಮಿತವಾಗಿದ್ದು, ಎರಡು ಶಿಫ್ಟ್‌ಗಳಲ್ಲಿ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಆರೋಗ್ಯ ಕ್ಷೇತ್ರದ ಸಮಸ್ಯೆಗಳು:

ತಾಲೂಕು ಆರೋಗ್ಯಧಿಕಾರಿ ಮಹೇಶ್ ಮಾತನಾಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು ಕೆಲವು ಔಷಧಿಗಳ ಅಭಾವ ಇದೆ ಎಂದರು. ಇದಕ್ಕೆ ಶಾಸಕರು ಮಾತನಾಡಿ ನಿಮ್ಮ ಕುಟುಂಬದವರ ಆರೋಗ್ಯದಂತೆ ಜನರ ಆರೋಗ್ಯದ ಕುರಿತು ಗಮನ ಹರಿಸಬೇಕು ಎಂದರು. ಕ್ರಾಫರ್ಡ್ ಆಸ್ಪತ್ರೆಯಲ್ಲಿ ಸೋಮವಾರ ಮತ್ತು ಗುರುವಾರ ವ್ಯಾಪಕ ರೋಗಿಗಳು ಸರದಿ ಸಾಲಿನಲ್ಲಿ ನಿಲ್ಲುವ ಸಮಸ್ಯೆ ಉಂಟಾಗುತ್ತಿದ್ದು ಹೀಗಾಗಿ ಹೆಚ್ಚುವರಿ ಕೌಂಟರ್‌ ತೆರೆಯಬೇಕು ಎಂದು ಆಸ್ಪತ್ರೆ ವೈದ್ಯಾಧಿಕಾರಿ ಅರುಣ್ ಕುಮಾರ್‌ ಅವರಿಗೆ ಸೂಚಿಸಿದರು.12 ವರ್ಷ ಹಳೆಯ ಸ್ಕ್ಯಾನಿಂಗ್ ಯಂತ್ರ ತುಕ್ಕು ಹಿಡಿಯುವಂತಗಿದೆ, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಆಸ್ಪತ್ರೆಯಲ್ಲಿ ಸ್ವಚ್ಛತೆ, ರೆಕಾರ್ಡ್‌ ನಿರ್ವಹಣೆ ಹಾಗೂ ಕಸ ವಿಲೇವಾರಿ ಕ್ರಮಬದ್ಧವಾಗಿರಬೇಕು ಎಂದರು. ಅಂಗನವಾಡಿ ಕೇಂದ್ರಗಳಿಗೆ ಹೋಗಿ ಸ್ಥಳ ಪರಿಶೀಲನೆ ಮಾಡಿ, ಉದ್ಘಾಟನೆ ಆಗದ ಕಟ್ಟಡಗಳ ಮಾಹಿತಿ ನೀಡಬೇಕು ಎಂದು ಶಾಸಕರು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು. ಹಲವಾರು ಅಂಗನವಾಡಿಗಳಲ್ಲಿ ವಿದ್ಯುತ್ ಕಡಿತ ಸಮಸ್ಯೆ ಇದೆ. ಅಂಗನವಾಡಿಗಳಿಗೆ ನೀಡಬೇಕಾದ ವಾಟರ್ ಫಿಲ್ಟರ್ ಗೋದಾಮಿನಲ್ಲಿದ್ದು ಕೂಡಲೇ ಇದನ್ನು ನೀಡಬೇಕು ಎಂದರು.ಪುರಸಭಾ ಮುಖ್ಯಧಿಕಾರಿ ಮಹೇಶ್ವರಪ್ಪರವರಿಗೆ ಮಾತನಾಡಿ ಪಟ್ಟಣದಲ್ಲಿ ಫ್ಲೆಕ್ಸ್ ಹಾವಳಿ ಮಿತಿಮೀರಿದ್ದು ಯಾರದ್ದೇ ಫ್ಲೆಕ್ಸ್‌ ಆಗಲಿ ಹಣ ಕಟ್ಟಿಸಿಕೊಳ್ಳಬೇಕು ಹಾಗೂ ಒಂದು ವಾರಕ್ಕಿಂತ ಹೆಚ್ಚು ಫ್ಕೆಕ್ಸ್‌ಗಳು ಇರದಂತೆ ನೋಡುಕೊಳ್ಳಬೇಕೆಂದು ಅದೇಶಿಸಿದರು. ಜೊತೆಗೆ ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿ ವಿದ್ಯುತ್ ಕಂಬಗಳಿಗೂ ಬಲ್ಬ್ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಹಾಗೂ ಪಟ್ಟಣ ವ್ಯಾಪ್ತಿಯ ಎಲ್ಲಾ ಸರ್ಕಾರಿ ಆಸ್ತಿಗಳಿಗೂ ದಾಖಲಾತಿ ಮಾಡಬೇಕೆಂದು ಆದೇಶಿಸಿದರು. ಮದ್ಯ ಸೇವನೆ ವಿರುದ್ಧ ಶಾಸಕರ ಆಕ್ರೋಶ:ಕೆಲವು ಕಡೆಗಳಲ್ಲಿ ಅತಿಯಾದ ಮದ್ಯ ಕುಡಿದು ಯುವಕರು ಸಾವನಪ್ಪಿರುವ ಪ್ರಕರಣಗಳು ಹೆಚ್ಚಿದೆ, ಗ್ರಾಮಾಂತರ ಪ್ರದೇಶ ಗಳಲ್ಲಿ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ವ್ಯಾಪಕ ದೂರು ಬಂದಿದೆ. ಕೂಲಿ ಕಾರ್ಮಿಕರು ಮದ್ಯಪಾನದಿಂದ ಕೆಲಸಕ್ಕೆ ಸಿಗದ ಪರಿಸ್ಥಿತಿ ಉಂಟಾಗಿದೆ. ಮುಂಚಿತವಾಗಿ ಮದ್ಯಪಾನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಮದ್ಯದ ಅಂಗಡಿಗಳನ್ನು ನಿಗದಿತ ಸಮಯಕ್ಕೆ ತೆರೆದು ನಿಗದಿತ ಸಮಯಕ್ಕೆ ಮುಚ್ಚಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಂಜುನಾಥ್, ತಹಸೀಲ್ದಾರ್‌ ಸುಪ್ರೀತಾ, ಇ.ಒ. ಗಂಗಾಧರ್‌, ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ಡಿವೈಎಸ್‌ಪಿ ಮಾಲತೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.