ಉಗ್ರರ ದಾಳಿ ಖಂಡಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

KannadaprabhaNewsNetwork | Published : Apr 25, 2025 11:51 PM

ಸಾರಾಂಶ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿ ಖಂಡಿಸಿ ಮುಸ್ಲಿಂ ಧರ್ಮಗುರುಗಳು ಹಾಗೂ ಸಮುದಾಯದ ಮುಖಂಡರು ಬಳ್ಳಾರಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗೆ ಮನವಿ ಕಳುಹಿಸಿದರು.

ಬಳ್ಳಾರಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿ ಖಂಡಿಸಿ ಮುಸ್ಲಿಂ ಧರ್ಮಗುರುಗಳು ಹಾಗೂ ಸಮುದಾಯದ ಮುಖಂಡರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಪೆಹಲ್ಗಾಮ್ ಹತ್ಯಾಕಾಂಡವು ಅತ್ಯಂತ ಭೀಕರವಾಗಿದ್ದು, ಕೃತ್ಯದಲ್ಲಿ ಪಾಲ್ಗೊಂಡವರು ಹಾಗೂ ಇಂತಹ ದುಷ್ಕೃತ್ಯಗಳಿಗೆ ಪ್ರಚೋದನೆ ನೀಡಿದವರ ವಿರುದ್ಧ ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಅಮಾಯಕರ ಜೀವಗಳನ್ನು ಬಲಿ ಪಡೆದವರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.

ದೇಶದ ಐಕ್ಯತೆ, ಸಾರ್ವಭೌಮತೆಗೆ ಧಕ್ಕೆ ತರುತ್ತಿರುವ ಉಗ್ರಗಾಮಿಗಳನ್ನು ಸದೆಬಡಿಯಬೇಕು. ಮುಗ್ಧಜನರನ್ನು ಹತ್ಯೆಗೈದ ನೀಚರನ್ನು ಸದೆಬಡಿಯಬೇಕು. ಮಡಿದವರ ಆತ್ಮಕ್ಕೆ ಶಾಂತಿ ಸಿಗಲು ಭಯೋತ್ಪಾದಕರಿಗೆ ಸೂಕ್ತ ಎದುರೇಟು ನೀಡಬೇಕು. ದೇಶದಲ್ಲಿ ಈ ರೀತಿಯ ಕೃತ್ಯಗಳು ಮತ್ತೆ ನಡೆಯದಂತೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಮಾತನಾಡಿದ ಮುಸ್ಲಿಂ ಸಮುದಾಯದ ಮುಖಂಡ ಹುಮಾಯೂನ್ ಖಾನ್, ಆತಂಕವಾದ ಹಾಗೂ ಕ್ರೌರ್ಯಕ್ಕೆ ಯಾವುದೇ ಜಾತಿ-ಧರ್ಮವಿಲ್ಲ. ಆತಂಕವಾದಿಗಳ ಕೃತ್ಯವನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕು. ದೇಶದಲ್ಲಿ ಶಾಂತಿ ನೆಲೆಸಲು ಉಗ್ರವಾದಿಗಳನ್ನು ಸಂಪೂರ್ಣವಾಗಿ ಸದೆಬಡಿಯಬೇಕು ಎಂದು ಒತ್ತಾಯಿಸಿದರು.

ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗೆ ಮನವಿ ಕಳುಹಿಸಿದರು.ಮುಸ್ಲಿಂ ಧರ್ಮಗುರು ಖಾಜಿ ಗುಲಾಮ್ ಮೊಹದ್ದೀನ್ ಸಿದ್ಧಿಕಿ, ಸಮಾಜದ ಹಿರಿಯ ಮುಖಂಡರಾದ ಅಯಾಜ್ ಅಹ್ಮದ್, ಹುಸೇನ್ ಪೀರ್, ಅಲ್ಲಾಬಕ್ಷೀ, ಸಮೀರ್ ಭಾಗವಹಿಸಿದ್ದರು.

ಕಾಂಗ್ರೆಸ್ ಪ್ರತಿಭಟನೆ:

ಕಾಶ್ಮೀರದಲ್ಲಿ ಪ್ರವಾಸಿಗರನ್ನು ಹತ್ಯೆಗೈದಿರುವ ಉಗ್ರವಾದಿಗಳ ಪೈಶಾಚಿಕ ಕೃತ್ಯ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬಳ್ಳಾರಿ ನಗರದಲ್ಲಿ ಶುಕ್ರವಾರ ಸಂಜೆ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.

ಉಗ್ರವಾದಿಗಳು ಹಾಗೂ ಅವರನ್ನು ಬೆಂಬಲಿಸುವ ದುಷ್ಕರ್ಮಿಗಳನ್ನು ಸಹ ದೇಶವಿರೋಧಿ ಪ್ರಕರಣದಡಿ ಬಂಧಿಸಬೇಕು. ಭಯೋತ್ಪಾದನೆ ಮೂಲಕ ದೇಶದಲ್ಲಿ ಆತಂಕ ಸೃಷ್ಟಿಸಲು ಹೊರಟಿರುವ ದೇಶದ್ರೋಹಿಗಳಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಘಟನೆಗೆ ಭದ್ರತಾಪಡೆಯ ವೈಫಲ್ಯವೇ ಕಾರಣವಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು. ದೇಶದಲ್ಲಿ ಮತ್ತೊಮ್ಮೆ ಇಂತಹ ಕೃತ್ಯಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಉಗ್ರರನ್ನು ಅಡಗಿಸಲು ಹೊಸ ಕಾನೂನು ತಂದು ಗುಂಡು ಹಾರಿಸಬೇಕು. ಭಾರತದ ತಂಟೆಗೆ ಬಂದರೆ ಏನಾಗುತ್ತದೆ ಎಂಬ ಎಚ್ಚರಿಕೆಯನ್ನು ಉಗ್ರವಾದಿಗಳಿಗೆ ರವಾನಿಸಬೇಕು ಎಂದು ಒತ್ತಾಯಿಸಿದರು. ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಹಾಗೂ ಪಕ್ಷದ ಮುಖಂಡರು, ಪಾಲಿಕೆ ಸದಸ್ಯರು, ಕಾಂಗ್ರೆಸ್‌ನ ಕಾರ್ಯಕರ್ತರು ಭಾಗವಹಿಸಿದ್ದರು.

Share this article