ಕೊಪ್ಪಳ: ತ್ರಿಕೋನ ಪ್ರೇಮ ಪ್ರಕರಣದಲ್ಲಿ ನಗರದ ಬಹದ್ದೂರ್‌ಬಂಡಿ ರಸ್ತೆಯಲ್ಲಿ ಭಾನುವಾರ ರಾತ್ರಿ ಹಿಂದೂ ಯುವಕನ ಬರ್ಬರ ಕೊಲೆ ನಡೆದಿದ್ದರಿಂದ ಸೋಮವಾರ ನಗರದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಆರೋಪಿಸಿರುವ ಮೃತನ ಕುಟುಂಬಸ್ಥರು ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಕೊಲೆಯಾದ ಗವಿಸಿದ್ದಪ್ಪ ನಾಯಕನ ಮೃತ ದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ವೇಳೆ ಯುವಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಏನಿದು ಪ್ರಕರಣ:ನಗರದ ನಿವಾಸಿ ಗವಿಸಿದ್ದಪ್ಪ ನಾಯಕ ಮುಸ್ಲಿಂ ಯುವತಿ ಪ್ರೀತಿಸುತ್ತಿದ್ದ. ಆಕೆ ಅಪ್ರಾಪ್ತೆ ಎಂಬ ಕಾರಣದಿಂದ ಕಳೆದೆರಡು ವರ್ಷಗಳ ಹಿಂದೆ ರಾಜೀ ಪಂಚಾಯಿತಿ ಮಾಡಿ ಪರಸ್ಪರ ತಿಳಿ ಹೇಳಿ ಕಳುಹಿಸಲಾಗಿತ್ತು. ಇದಾದ ಮೇಲೆ ಇದೇ ಯುವತಿಯನ್ನು ಸಾದಿಕ್ ಪ್ರೀತಿಸುತ್ತಿದ್ದ. ಇದು ಇಬ್ಬರ ನಡುವಿನ ದ್ವೇಷಕ್ಕೆ ಕಾರಣವಾಗಿ ಜಗಳ ಮಾಡುತ್ತಿದ್ದರು. ಭಾನುವಾರ ಸಂಜೆ ಸಾದಿಕ್ ತನ್ನ ಸ್ನೇಹಿತರ ಮೂಲಕ ಗವಿಸಿದ್ದಪ್ಪನಿಗೆ ಕರೆ ಮಾಡಿ ಕರೆಯಿಸಿ ಮೂವರು ಸ್ನೇಹಿತರೊಂದಿಗೆ ಬಹದ್ದೂರುಬಂಡಿ ರಸ್ತೆಯಲ್ಲಿ ಸಂಜೆ 7.30ಕ್ಕೆ ಮಚ್ಚಿನಿಂದ ಕೊಲೆ ಮಾಡಿದ್ದಾನೆ. ಬಳಿಕ ಸಾದಿಕ್ ಕೊಪ್ಪಳ ನಗರ ಠಾಣೆಗೆ ಶರಣಾಗಿದ್ದಾನೆ. ಉಳಿದ ಮೂವರು ಆರೋಪಿಗಳು ನಾಪತ್ತೆಯಾಗಿದ್ದು, ಅವರನ್ನು ಸಹ ಪೊಲೀಸರು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ.
ಭುಗಿಲೆದ್ದ ಆಕ್ರೋಶ:ಮರಣೋತ್ತರ ಪರೀಕ್ಷೆ ವೇಳೆ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸೇರಿದ್ದ ಮೃತನ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಮಗನ ಕಳೆದುಕೊಂಡಿದ್ದ ಪಾಲಕರು ಆರೋಪಿಗಳ ವಿರುದ್ಧ ಹಿಡಿಶಾಪ ಹಾಕಿದರು. ಈ ಹಂತದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರಿಂದ ಪರಿಸ್ಥಿತಿ ಕೈಮೀರುವ ಹಂತಕ್ಕೆ ಹೋಗಬಹುದೆಂದು ಅರಿತ ಪೊಲೀಸರು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು.
ಸ್ಥಳಕ್ಕೆ ಎಸ್ಪಿ, ಶಾಸಕರು ಭೇಟಿ:ಜಿಲ್ಲಾಸ್ಪತ್ರೆಗೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಎಸ್ಪಿ ಡಾ. ರಾಮ ಎಲ್. ಅರಸಿದ್ದ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಮುಸ್ಲಿಂ ಯುವತಿ ಪ್ರೀತಿಸಿದ್ದೇ ತಪ್ಪಾಯಿತೇ...
ನನ್ನ ತಮ್ಮ ಮುಸ್ಲಿಂ ಯುವತಿ ಪ್ರೀತಿಸಿದ್ದೇ ತಪ್ಪಾಯಿತು. ಯಾಕೆ ಹಿಂದೂಗಳು ಮುಸ್ಲಿಂ ಯುವತಿಯನ್ನು ಪ್ರೀತಿಸಬಾರದೆ. ಇದ್ಯಾವ ನ್ಯಾಯ. ಇಂಥವರನ್ನು ಸುಮ್ಮನೇ ಬಿಡಬಾರದು ಎಂದು ಕೊಲೆಯಾದ ಯುವಕನ ಸಹೋದರಿ ಮತ್ತು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂಥ ಘಟನೆ ಇನ್ನೆಂದೂ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಹೋದರನನ್ನು ಕೊಂದ ಪಾಪಿಗಳನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.
ಓಲೈಕೆ ರಾಜಕಾರಣದಿಂದ ಕೊಲೆ
ಗವಿಸಿದ್ದಪ್ಪ ನಾಯಕ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ನೇತೃತ್ವದಲ್ಲಿ ಬಿಜೆಪಿ ನಿಯೋಗ ಭೇಟಿ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿತು. ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಹೋರಾಟ ಮಾಡುತ್ತೇವೆ. ಇಂತಹ ಘಟನೆ ನಡೆಯಲು ಕಾಂಗ್ರೆಸ್ ಸರ್ಕಾರದ ಆಡಳಿತವೇ ಕಾರಣ ಎಂದು ಆರೋಪಿಸಿದರು. ನಗರದಲ್ಲಿ ಭೀಕರ ಕೊಲೆ ಮಾಡಲಾಗುತ್ತದೆ ಎಂದರೆ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿರಬೇಕು ಎಂದು ಪ್ರಶ್ನಿಸಿದರು. ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿರುವುದರಿಂದಲೇ ಇಂಥ ಘಟನೆಗಳು ನಡೆಯುತ್ತಿವೆ ಎಂದರು.
ರಾಕಿ ಕಟ್ಟಿದ ಸಹೋದರಿ
ಗವಿಸಿದ್ದಪ್ಪನ ಮೂವರು ಸಹೋದರಿಯರು ತಮ್ಮನ ಮೃತದೇಹಕ್ಕೆ ರಾಕಿ ಕಟ್ಟುವ ಮೂಲಕ ವಿದಾಯ ನೀಡಿದರು. ಬದುಕಿದ್ದರೆ ಆ.9ರಂದು ನಡೆಯುವ ರಕ್ಷಾ ಬಂಧನದ ದಿನ ರಾಕಿ ಕಟ್ಟುತ್ತಿದ್ದೆವು. ಅಷ್ಟರೊಳಗೆ ನಿನ್ನನ್ನು ಪಾಪಿಗಳು ಕೊಲೆ ಮಾಡಿದ್ದಾರೆ ಎಂದು ಕಣ್ಣೀರುಡುತ್ತಲೇ ರಾಕಿ ಕಟ್ಟಿ ಅಂತ್ಯಸಂಸ್ಕಾರ ಮಾಡಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಿದ್ದು ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ. ಕಾನೂನು ರೀತಿಯಲ್ಲಿ ಕ್ರಮವಹಿಸಲಾಗುವುದು.
ಡಾ. ರಾಮ ಎಲ್. ಅರಸಿದ್ದಿ ಎಸ್ಪಿ
ಧಾರ್ಮಿಕ ಅಸಹನೆಯ ಫಲ ಇದಾಗಿದ್ದು, ಇಂಥ ಘಟನೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಮುಂದೆ ಇಂಥ ಘಟನೆ ನಡೆಯದಂತೆ ಕ್ರಮವಹಿಸಬೇಕು. ತುಷ್ಟೀಕರಣ ರಾಜಕಾರಣವೇ ಇದಕ್ಕೆ ಹೊಣೆ.
ವಿಜಯಕುಮಾರ ತಾಳಕೇರಿ ಎಸ್ಚಿ ಮೋರ್ಚಾ ಅಧ್ಯಕ್ಷ ಬಿಜೆಪಿ