ಕನ್ನಡಪ್ರಭ ವಾರ್ತೆ ಮದ್ದೂರು
ಗಲಾಟೆ, ಗಲಭೆ ಮಾಡುವವರು ಮುಸ್ಲಿಂ ಗುಂಡಾಗಳು. ತಡೆಯೋದಿದ್ದರೆ ಮುಸ್ಲಿಂ ಕಿಡಿಗೇಡಿಗಳನ್ನು ತಡೆಯಿರಿ. ಮದ್ದೂರಿನ ಶಾಂತ ವಾತಾವರಣ ಕೆರಳಿಸುತ್ತಿರುವುದು ಕಾಂಗ್ರೆಸ್ ಸರ್ಕಾರ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆರೋಪಿಸಿದರು.ಶುಕ್ರವಾರ ಮದ್ದೂರು ಪ್ರವೇಶವನ್ನು ತಡೆದ ಪೊಲೀಸರ ವರ್ತನೆಯನ್ನು ಖಂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಕೆಲಸ ಮಾಡಿದರೆ ರೌಡಿಗಳಂತೆ ಬಿಂಬಿಸಿ ಪ್ರಕರಣ ದಾಖಲಿಸುತ್ತಾರೆ. ಇವೆಲ್ಲವೂ ರಾಜಕೀಯ ಪ್ರೇರಿತ ಪ್ರಕರಣಗಳು ಎಂದು ದೂರಿದರು.
ನಾವು ಮದ್ದೂರಿಗೆ ಯಾವುದೇ ಪ್ರತಿಭಟನೆ ನಡೆಸಲು ಹೋಗುತ್ತಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣದ ಬಗ್ಗೆ ವಕಾಲತ್ತು ವಹಿಸಲು ವಕೀಲರ ಜೊತೆ ಹೋಗುತ್ತಿದ್ದೇನೆ. ಆದರೆ, ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರ ನಮ್ಮನ್ನು ತಡೆಯುತ್ತಿದೆ. ತಡೆಯೋದಾದರೆ ಕಲ್ಲು ಹೊಡೆದವರನ್ನು, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರನ್ನು ತಡೆಯಬೇಕಿತ್ತು ಎಂದು ಗುಡುಗಿದರು.ನನ್ನ ಮೇಲೆ ಯಾವುದೇ ಪ್ರಕರಣಗಳಿಲ್ಲ. ಆದರೂ ನೋಟೀಸ್‌ನಲ್ಲಿ ಸುಳ್ಳು ಬರೆದಿದ್ದಾರೆ. ಗಣೇಶೋತ್ಸವ ಮೇಲೆ ಕಲ್ಲು ಎಸೆದ ಕಿಡಿಗೇಡಿಗಳ ಶೂಟ್ ಆ್ಯಟ್ ಸೈಟ್ ಆಗಬೇಕು. ಇಲ್ಲಿ ಹುಟ್ಟಿ, ಬೆಳೆದು ನಮ್ಮ ಮೇಲೆ ಕಲ್ಲು ಎಸೆಯುತ್ತಾರೆಂದರೆ ಅವರಿಗೆ ಎಷ್ಟು ಸೊಕ್ಕು? ಎಂತಹವರನ್ನ ಬೆಳೆಸುತ್ತಿದೆ ಕಾಂಗ್ರೆಸ್ ಸರ್ಕಾರ ಎಂದು ಖಾರವಾಗಿ ಪ್ರಶ್ನಿಸಿದರು.
ಕಳೆದ ೫೦ ವರ್ಷಗಳಿಂದ ನಡೆದ ಹೋರಾಟ ನನ್ನದು. ನನ್ನ ಭಾಷಣದಿಂದ ಎಲ್ಲಿಯೂ ಒಂದೇ ಒಂದು ಗಲಾಟೆ ಆಗಿಲ್ಲ. ಕಲ್ಲು ಎಸೆದು, ಪಾಕಿಸ್ತಾನ್ ಜಿಂದಾಬಾದ್ ಎಂದವರು, ಪ್ಯಾಲೆಸ್ತೀನ್ ಧ್ವಜ ಹಾರಿಸಿದವರು ಪ್ರಚೋದನೆ ಮಾಡುತ್ತಿದ್ದಾರೆ. ನಾವು ನಿಜ ಮಾತನಾಡಿದರೆ ಪ್ರಚೋದನೆ ಎನ್ನುತ್ತಾರೆ. ಪ್ರತಿಭಟನೆ ಮಾಡದಿದ್ದರೂ ನಮ್ಮನ್ನು ತಡೆಯುತ್ತಾರೆ. ಇವೆಲ್ಲವೂ ಸಂವಿಧಾನ ವಿರೋಧಿ ಎಂದು ದೂಷಿಸಿದರು.ದೇಶದ, ಧರ್ಮದ ವಿಚಾರ ಜನರಿಗೆ ತಲುಪದಂತೆ ಮಾಡುತ್ತಿದ್ದಾರೆ. ಹಿಂದೂ ನಾಯಕರು ಗಲಾಟೆ ಮಾಡುತ್ತಾರೆಂದು ಬಿಂಬಿಸುತ್ತಿದ್ದಾರೆ. ನನ್ನ ಮೇಲಿದ್ದ ೩೦ ಪ್ರಕರಣಗಳು ಖುಲಾಸೆಗೊಂಡಿವೆ. ಆದರೂ ನಿರ್ಬಂಧ ಆದೇಶದಲ್ಲಿ ಸುಳ್ಳು ಕೇಸ್ ಹಾಕಿದ್ದಾರೆ. ಗಣೇಶನ ಮೇಲೆ ಕಲ್ಲು ಎಸೆಯುವವರಿಗೆ ಪ್ರಚೋದನೆ ಕೊಟ್ಟವರು ಯಾರು, ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಹೇಳಲಿ ನೋಡೋಣ. ನಾವು ಕಲ್ಲು, ಬಾಂಬ್ ಹಿಡಿದರೆ ನೀವುಗಳು ಯಾರೂ ಉಳಿಯೋಲ್ಲ. ಸರ್ಕಾರ ನ್ಯಾಯ ಕೊಡುತ್ತಿಲ್ಲ, ಪೊಲೀಸರೂ ನ್ಯಾಯ ಕೊಡುತ್ತಿಲ್ಲ. ನಮ್ಮ ದೇವರು, ದೇವಾಲಯದ ಮೇಲೆ ಇನ್ನು ಮುಂದೆ ದಾಳಿ ಮಾಡಿದರೆ ಹಿಂದೂ ಸಮಾಜವೇ ಮನೆಗೆ ನುಗ್ಗಿ ಹೊಡೆಯುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ವಕೀಲ ಅಮೃತೇಶ್ ಇತರರಿದ್ದರು.