ಗದಗ: ಸೆ. 5ರಂದು (ಈದ್ ಮಿಲಾದ್) ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಹಬ್ಬದ ದಿನ ಯುವಕರು ಡಿಜೆ ಬಳಬಾರದು. ಹಬ್ಬದ ದಿನದಂದು ಜನೋಪಯೋಗಿ ಕಾರ್ಯಗಳನ್ನು ಮಾಡಲಿದ್ದೇವೆ. ಡಿಜೆಗೆ ಬಳಸುವ ಹಣದಿಂದ ಬಡವರಿಗೆ ಫುಡ್ ಕಿಟ್ ನೀಡಿ ಶಾಂತಿಯ ಸಂದೇಶ ಸಾರಬೇಕು ಅಂತ ಮೌಲಾನಾ ಜಕಾರಿಯಾಸಾಬ್ ಹೇಳಿದರು.
ಆ. 27ರಂದು ಜಮಾತ್ ಮುಖಂಡರು, ಈದ್ ಮಿಲಾದ್ ಕಮಿಟಿ ಪದಾಧಿಕಾರಿಗಳು, ನೌ-ಜವಾನ್ ಕಮಿಟಿಯ ಮುಖಂಡರು ಸೇರಿ ಈದ್ ಮಿಲಾದ್ ಹಬ್ಬದ ಕುರಿತು ಗಂಗಿಮಡಿಯ ಅಬು ಹುರೇರಾ ಮಸೀದಿಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದು, ಡಿಜೆ ಬಳಸದಂತೆ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಅಂತ ಮಾಹಿತಿ ನೀಡಿದರು.
ಈ ಕುರಿತು ಈಗಾಗಲೇ ಸಮಾಜದ ಎಲ್ಲ ಮುಖಂಡರು ಒಂದುಗೂಡಿ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಈದ್ ಮಿಲಾದ್ ಹಬ್ಬವನ್ನು ಯಾರಿಗೂ ತೊಂದರೆ ಆಗದಂತೆ ಆಚರಿಸಲು ತೀರ್ಮಾನಿಸಲಾಗಿದೆ. ಶಾಂತಿ ನಮ್ಮ ಮೂಲ ಧರ್ಮವಾಗಿದೆ. ಈ ನಿಟ್ಟಿನಲ್ಲಿ ಈದ್ ಮಿಲಾದ್ ದಿನದಂದು ಯಾರೇ ಡಿಜೆಗೆ ಅವಕಾಶ ನೀಡಿ ಅಂತ ಮನವಿ ಮಾಡಿದರೇ ಆ ಮನವಿಗೆ ಅವಕಾಶ ಕೊಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮೌಲಾನಾ ಅಬ್ದುಲ್ ರಹೀಮ್, ಮುಪ್ತಿ ಆರೀಫಸಾಬ್, ಮೌಲಾನಾ ಅಬ್ದುಲ್ ಗಬ್ಬರ್ ಸಾಬ್, ಮುಪ್ತಿ ಶಬ್ಬಿರಅಹಮದ್, ಯೂಸೂಪ್ ಸಾಬ್ ನಮಾಜಿ, ಮಹೆಬೂಬ್ ನದಾಫ್, ಮುನ್ನಾ ರಷ್ಮೀ, ಮುನ್ನಾ ಶೇಖ್, ಉಮರ್ ಫಾರೂಖ್ ಹುಬ್ಬಳ್ಳಿ, ಮಹಮ್ಮದ್ ಶಾಲಗಾರ, ಅಬ್ದುಲ್ ಮುನಾಫ್ ಮುಲ್ಲಾ ಉಪಸ್ಥಿತರಿದ್ದರು.
ಈದ್ ಮಿಲಾದ್ ಹಬ್ಬ ಮುಸಲ್ಮಾನ ಬಾಂಧವರ ಪವಿತ್ರ ಹಬ್ಬವಾಗಿದೆ. ಈ ಪವಿತ್ರ ದಿನದಂದು ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡವುದೇ ನಮ್ಮ ಧ್ಯೇಯವಾಗಿದೆ. ಡಿಜೆ ಬಳಸುವುದರಿಂದ ರೋಗಿಗಳಿಗೆ, ವೃದ್ಧರಿಗೆ ಹಾಗೂ ಚಿಕ್ಕ ಮಕ್ಕಳಿಗೆ ಅಪಾಯ ಆಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಈದ್ ಮಿಲಾದ್ ದಿನದಂದು ಡಿಜೆ ಬಳಸದೇ ಶಾಂತಿಯ ಸಂದೇಶ ಸಾರಲು ಗದಗ-ಬೆಟಗೇರಿ ಜಮಾತ್ ಎಲ್ಲ ಮುಖಂಡರು ತಿರ್ಮಾನಿಸಿದ್ದಾರೆ ಎಂದು ಮುಖಂಡ ಸಯ್ಯದ್ ಖಾಲೀದ್ ಕೊಪ್ಪಳ ಹೇಳಿದರು.