ಮೃತನ ಕುಟುಂಬಕ್ಕೆ ಮುಸ್ಲಿಂ ಮುಖಂಡರ ಭೇಟಿ, ನಿಮ್ಮೊಂದಿಗೆ ನಾವಿದ್ದೇವೆಂದು ಅಭಯ

KannadaprabhaNewsNetwork |  
Published : Aug 08, 2025, 01:03 AM IST
7ಕೆಪಿಎಲ್23 ಗವಿಸಿದ್ದಪ್ಪ ನಾಯಕ ಅವರ ನಿವಾಸಕ್ಕೆ ಕೊಪ್ಪಳ ನಗರದ ಮುಸ್ಲಿಂ ಸಮಾಜದ ಮುಖಂಡರು ಭೇಟಿ ನೀಡಿ, ಸಾಂತ್ವಾನ ಹೇಳಿದರು. | Kannada Prabha

ಸಾರಾಂಶ

ಘಟನೆಯಿಂದ ನಮಗೂ ಅತೀವ ನೋವಾಗಿದೆ. ಇದನ್ನು ನಾವು ಬೆಂಬಲಿಸುವುದಿಲ್ಲ. ಆರೋಪಿಗಳು ಯಾರೇ ಇದ್ದರೂ ಅವರಿಗೆ ಗರಿಷ್ಠ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತೇವೆ. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಮನವಿ ಮಾಡುತ್ತೇವೆ ಎಂದು ಮುಸ್ಲಿಂ ಸಮಾಜದ ಮುಖಂಡರು ಹೇಳಿದರು.

ಕೊಪ್ಪಳ:

ಗವಿಸಿದ್ದಪ್ಪ ನಾಯಕ ನಿವಾಸಕ್ಕೆ ಗುರುವಾರ ಮುಸ್ಲಿಂ ಸಮಾಜದ ಹಿರಿಯರು ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಘಟನೆ ನಡೆಯಬಾರದಿತ್ತು. ಇದನ್ನು ನಾವು ಸಹಿಸುವುದಿಲ್ಲ. ಅಂಥವರನ್ನು ಸಮಾಜ ಬೆಂಬಲಿಸುವುದಿಲ್ಲ ಎಂದು ಸಾರಿದರು. ಆದರೆ, ನೀವು ಇಷ್ಟು ದಿನ ಸುಮ್ಮನಿದ್ದು ಹೀಗೇಕೆ ಬಂದಿದ್ದೀರಿ. ನಾವು ಅಂದೇ ಅಂಥವರ ವಿರುದ್ಧ ಧ್ವನಿ ಎತ್ತಬೇಕಾಗಿತ್ತು ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಕೊಲೆಯಾದ ತಕ್ಷಣವೇ ಸ್ಥಳಕ್ಕೆ ಬಂದಿದ್ದೇವೆ. ಘಟನೆ ಖಂಡಿಸಿದ್ದೇವೆ. ಆರೋಪಿಗಳ ವಿರುದ್ಧವೇ ನಾವಿದ್ದು, ನಿಮ್ಮ ಜತೆಗೆ ಇರುತ್ತೇವೆ ಎಂದು ಧೈರ್ಯ ತುಂಬಿದರು.

ಕಠಿಣ ಶಿಕ್ಷೆಯಾಗಲಿ:

ಮುಸ್ಲಿಂ ಸಮಾಜದ ಮುಖಂಡರು ಹಾಗೂ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಕಾಟನ್ ಪಾಶಾ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆಯಿಂದ ನಮಗೂ ಅತೀವ ನೋವಾಗಿದೆ. ಇದನ್ನು ನಾವು ಬೆಂಬಲಿಸುವುದಿಲ್ಲ. ಆರೋಪಿಗಳು ಯಾರೇ ಇದ್ದರೂ ಅವರಿಗೆ ಗರಿಷ್ಠ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತೇವೆ. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಮನವಿ ಮಾಡುತ್ತೇವೆ ಎಂದರು.

ನಾವೆಲ್ಲರೂ ನೊಂದ ಕುಟುಂಬದ ಪರವಾಗಿ ಇದ್ದೇವೆ ಎಂದ ಅವರು, ನಗರದಲ್ಲಿ ಇಂಥ ಘಟನಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು. ಇಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದ್ದು ಯುವಕರು ದಾಸರಾಗುತ್ತಿದ್ದಾರೆ. ಇದರಿಂದಲೇ ಅಪರಾಧಿ ಕೃತ್ಯ ನಡೆಯುತ್ತಿವೆ. ಇದನ್ನು ಮೊದಲು ತಡೆಯಬೇಕು ಎಂದರು.

ಯುವಕರು ಹಾದಿ ತಪ್ಪುತ್ತಿದ್ದು ಹಿಂದೂ-ಮುಸ್ಲಿಂರು ಸೇರಿ ಶಾಂತಿ ಸಭೆಸಿ ಯುವಕರಿಗೆ ಬುದ್ಧಿವಾದ ಹೇಳಬೇಕು. ಎರಡು ಸಮಾಜದ ಮುಖಂಡರು ಸಹೋದರತ್ವದಿಂದ ಇದ್ದಾರೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಕೆಟ್ಟದಾಗಿ ಹಾಕುತ್ತಿರುವವರ ವಿರುದ್ಧವೂ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಾನ್ವಿ ಪಾಶಾ, ಸಾದಿಕ್ ಪಾಶಾ, ಭಾಷುಸಾಬ್‌ ಖತೀಬ್, ಇಬ್ರಾಹಿಂಸಾಬ್‌ ಅಡ್ಡೆವಾಲೆ, ಆಸಿಫ್ ಕರ್ಕಿಹಳ್ಳಿ, ಗೌಸಸಾಬ್‌ ಸರ್ದಾರ್‌, ರಾಮಣ್ಣ ಕಲ್ಲಣ್ಣ, ಯಮನೂರಪ್ಪ ನಾಯಕ, ರಾಮಣ್ಣ ಹದ್ದಿನ ಇದ್ದರು.

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್