-ಚಿತ್ರದುರ್ಗದಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ । ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಿ, ಗೃಹ ಸಚಿವ, ರಕ್ಷಣಾ ಸಚಿವರಿಗೆ ಮನವಿ
--ಕನ್ನಡಪ್ರಭವಾರ್ತೆ ಚಿತ್ರದುರ್ಗ
ಜಮ್ಮು-ಕಾಶ್ಮೀರದ ಪಹಲ್ಗಾಮ್‍ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡಿರುವ ಘಟನೆಗೆ ಮುಸ್ಲಿಂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಿ, ಗೃಹ ಸಚಿವ, ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿದರು.ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ನಂತರ ಮೆರವಣಿಗೆ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿ, ಭಯೋತ್ಪಾದಕರನ್ನು ಪತ್ತೆ ಮಾಡಿ ಹೊಡೆದುರುಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ನ್ಯಾಯವಾದಿ ಸಾಧಿಕ್‍ವುಲ್ಲಾ, ಭಾರತದ ಸ್ವರ್ಗ ಎಂದೇ ಪ್ರಸಿದ್ಧಿ ಪಡೆದಿರುವ ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿ 26 ಮಂದಿಯನ್ನು ಭೀಕರವಾಗಿ ಕೊಂದಿರುವುದು ಅತ್ಯಂತ ಹೇಯ ಕೃತ್ಯ. ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಮಂತ್ರಿ ರಾಜನಾಥ್‍ಸಿಂಗ್ ಅವರು ಭಯೋತ್ಪಾದಕರನ್ನು ಸದೆಬಡಿದು ಇನ್ನು ಮುಂದೆ ಇಂತಹ ಅಮಾನವೀಯ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕೆಂದು ವಿನಂತಿಸಿದರು.ಜಿಲ್ಲಾ ವಕ್ಫ್ ಮಂಡಳಿ ಮಾಜಿ ಚೇರ್ಮನ್ ಇಕ್ಬಾಲ್ ಹುಸೇನ್(ಎಂಸಿಒ ಬಾಬು) ಮಾತನಾಡಿ, ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳು ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ ನಡೆಸಿ 26 ಜನ ಅಮಾಯಕರನ್ನು ಬಲಿ ಪಡೆದಿರುವುದರಿಂದ ಇಡಿ ದೇಶವೇ ಶೋಕದಲ್ಲಿದೆ. ಪಹಲ್ಗಾಮ್‍ನಲ್ಲಿ ದುಷ್ಕೃತ್ಯ ಮೆರೆದಿರುವ ಉಗ್ರರು ಎಲ್ಲಿಯೇ ಅಡಗಿರಲಿ ಅಲ್ಲಿಗೆ ನುಗ್ಗಿ ಬಗ್ಗು ಬಡಿಯಬೇಕು. ದೇಶದ ಸಹಬಾಳ್ವೆ ಮತ್ತು ಐಕ್ಯತೆಯನ್ನು ಕದಡುವ ಭಯೋತ್ಪಾದಕರುಗಳಿಗೆ ದೇಶದ ಪ್ರಧಾನಿ ಮೋದಿ ತಕ್ಕ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಸುಲ್ತಾನಿ ಜಾಮಿಯಾ ಮಸ್ಜಿದ್ ಮರ್ಕಜೆ-ಎ-ಅಹಲೆ ಸುನ್ನತ್ ಅಧ್ಯಕ್ಷ ಸಾಧಿಕ್‍ಭಾಷ, ಕಾರ್ಯದರ್ಶಿ ಮುಹಿಬ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಹಾಜಿ ಆರ್.ದಾದಾಪೀರ್, ಪಟೇಲ್ ದಾದಾಪೀರ್, ಮುಖ್ತಿಯಾರ್, ಸೈಯದ್ ಮೋಹಿದ್ದೀನ್, ಸೈಯದ್ ಖುದ್ದೂಸ್, ಸುಬಾನ್, ನೂರುಲ್ಲಾ, ಹುಸೇನ್‍ಪೀರ್, ಸೈಯದ್ ಅಫಾಖ್ ಅಹಮದ್, ಸೈಯದ್ ಇಸ್ಮಾಯಿಲ್ ಸೇರಿದಂತೆ ವಿವಿಧ ಮಸೀದಿಗಳ ಮುತುವಲ್ಲಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.--
ಪೋಟೋ:ಕಾಶ್ಮೀರದ ಪಹಲ್ಗಾಮ್‍ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಅಮಾಯಕರನ್ನು ಬಲಿತೆಗೆದುಕೊಂಡಿರುವುದನ್ನು ಖಂಡಿಸಿ ಶುಕ್ರವಾರ ಚಿತ್ರದುರ್ಗದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
-------ಫೋಟೋ:25 ಸಿಟಿಡಿ3
--