;Resize=(412,232))
ಬೆಂಗಳೂರು : ಸರ್ಕಾರಿ ಕಾಮಗಾರಿಗಳ ಗುತ್ತಿಗೆ, ಖರೀದಿ ಪ್ರಕ್ರಿಯೆಗಳಲ್ಲಿ 2-ಬಿ ಪ್ರವರ್ಗದವರಿಗೆ (ಮುಸ್ಲಿಮರಿಗೆ) ಶೇ.4ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ನಿಯಮಗಳ ತಿದ್ದುಪಡಿ ವಿಧೇಯಕವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಬುಧವಾರ ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ಅಲ್ಲದೆ, ಏ.15 ರಂದು ರಾಜ್ಯಸರ್ಕಾರಕ್ಕೆ ವಿಧೇಯಕ ವಾಪಸ್ ಕಳುಹಿಸಿ ನಾನು ತಿಳಿಸಿದ್ದ ಅಭಿಪ್ರಾಯಕ್ಕೆ ಬದ್ಧನಾಗಿದ್ದೇನೆ. ವಿಧೇಯಕವು ಸಾಂವಿಧಾನಿಕ ಬಿಕಟ್ಟು ಸೃಷ್ಟಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಬೇಕು ಎಂದು ಪುನರುಚ್ಚರಿಸಿದ್ದಾರೆ.
ರಾಜ್ಯ ಸರ್ಕಾರವು ಮುಸ್ಲಿಮರಿಗೆ 2 ಕೋಟಿ ರು.ವರೆಗಿನ ಕಾಮಗಾರಿಗಳಲ್ಲಿ ಹಾಗೂ ವಿವಿಧ ಇಲಾಖೆ, ನಿಗಮ-ಮಂಡಳಿಗಳಲ್ಲಿನ ಖರೀದಿ ಪ್ರಕ್ರಿಯೆಯಲ್ಲಿ 1 ಕೋಟಿ ರು.ವರೆಗೆ ಮೀಸಲಾತಿ ಕಲ್ಪಿಸಲು ತಿದ್ದುಪಡಿ ವಿಧೇಯಕ ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ರಾಜ್ಯಪಾಲರ ಅನುಮೋದನೆ ಕಳುಹಿಸಿತ್ತು.
6 ಪುಟಗಳ ಪತ್ರ ಬರೆದಿದ್ದ ಗವರ್ನರ್:
ಈ ವಿಧೇಯಕವನ್ನು ತಿರಸ್ಕರಿಸಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಏ.15 ರಂದು ಈ ವಿಧೇಯಕದ ಬಗ್ಗೆ ಗಂಭೀರ ಆಕ್ಷೇಪ ಎತ್ತಿದ್ದು, ತಕರಾರುಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ಆರು ಪುಟಗಳ ಸುದೀರ್ಘ ಪತ್ರ ಬರೆದಿದ್ದರು.
ಈ ಕಾನೂನು ತಿದ್ದುಪಡಿ ವಿಧೇಯಕ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದ ರಾಜ್ಯಪಾಲರು, ವಿಧೇಯಕವನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕೇಂದ್ರಕ್ಕೆ ರವಾನಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದರು.
ಧರ್ಮದ ಆಧಾರದ ತಾರತಮ್ಯ ಮಾಡಲು ಹಾಗೂ ಮೀಸಲು ಕಲ್ಪಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ಉದಾಹರಿಸಿ, ಸುಪ್ರೀಂ ಕೋರ್ಟ್ ತೀರ್ಪುಗಳನ್ನು ರಾಜ್ಯಪಾಲರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರ ತಮಿಳುನಾಡು ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿ, ಇದು ರಾಜ್ಯಕ್ಕೆ ಸಂಬಂಧಿಸಿದ ವಿಷಯ. ಇದರಲ್ಲಿ ಕೇಂದ್ರದ ಪಾತ್ರ ಏನೂ ಇಲ್ಲ. ಇದು ಹಿಂದುಳಿದಿರುವಿಕೆ ಗುರುತಿಸಿ ನೀಡಿರುವ ಮೀಸಲಾತಿ. 2-ಬಿ ಅಡಿ ಈಗಾಗಲೇ ಮೀಸಲಾತಿ ಜಾತಿಯಲ್ಲಿದ್ದು, ಅದನ್ನು ಗುತ್ತಿಗೆಗೆ ವಿಸ್ತರಿಸಲಾಗಿದೆ ಅಷ್ಟೇ. ಇದಕ್ಕೆ ಕೇಂದ್ರ ಅಥವಾ ರಾಷ್ಟ್ರಪತಿಗಳ ಅಂಗೀಕಾರ ಬೇಕಾಗಿಲ್ಲ ಎಂದು ವಿಧೇಯಕವನ್ನು ರಾಜ್ಯಪಾಲರಿಗೆ ಮರು ಮಂಡನೆ ಮಾಡಿತ್ತು.
2ನೇ ಬಾರಿಗೆ ವಿಧೇಯಕ ವಾಪಸ್:
ಬುಧವಾರ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಎರಡನೇ ಬಾರಿಗೆ ಸರ್ಕಾರಕ್ಕೆ ವಿಧೇಯಕ ವಾಪಸ್ ಕಳುಹಿಸಿದ್ದು, ವಿಧೇಯಕವು ಸಾಂವಿಧಾನಿಕ ಬಿಕಟ್ಟು ಸೃಷ್ಟಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಬೇಕು ಎಂದು ಪುನರುಚ್ಚಾರ ಮಾಡಿದ್ದಾರೆ.
- ಮುಸ್ಲಿಮರಿಗೆ ₹2 ಕೋಟಿವರೆಗಿನ ಕಾಮಗಾರಿಗಳಲ್ಲಿ ಶೇ.4 ಮೀಸಲು ನಿರ್ಧಾರ ಆಗಿತ್ತು
- ವಿಧಾನಮಂಡಲ ಅನುಮತಿ ಪಡೆದು ರಾಜ್ಯಪಾಲರಿಗೆ ಮಸೂದೆ ಕಳಿಸಿ ಕೊಡಲಾಗಿತ್ತು
- ಏ.15ರಂದು ಈ ವಿಧೇಯಕ ಬಗ್ಗೆ ರಾಜ್ಯಪಾಲ ಆಕ್ಷೇಪ ಎತ್ತಿ ಸರ್ಕಾರಕ್ಕೆ ಮರಳಿಸಿದ್ದರು
- ಈಗ 2ನೇ ಸಲ ಕಳಿಸಲಾಗಿದ್ದ ವಿಧೇಯಕ ಗೌರ್ನರ್‌ರಿಂದ ಮತ್ತೆ ಸರ್ಕಾರಕ್ಕೆ ವಾಪಸು