ಕನ್ನಡಪ್ರಭ ವಾರ್ತೆ ವಿಜಯಪುರ
ಮುಸ್ಲಿಂ ಧರ್ಮ ಗುರು ಮೊಹ್ಮದ್ ಪೈಗಂಬರ್ ಅವರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಂಟಿ ಆ್ಯಕ್ಷನ್ ಕಮಿಟಿ ನೇತೃತ್ವದಲ್ಲಿ ಮುಸ್ಲಿಮರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಗರ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದರು. ಈ ವೇಳೆ ಯತ್ನಾಳ ವಿರೋಧಿ ಸಂದೇಶಗಳನ್ನು ಪ್ರದರ್ಶಿಸಿದರು. ಸಚಿವ ಶಿವಾನಂದ ಪಾಟೀಲ, ಶಾಸಕರಾದ ಅಶೋಕ ಮನಗೂಳಿ, ಯಶವಂತರಾಯಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮೊದಲಾದವರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು. ನಂತರ ಯತ್ನಾಳರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ವಿಧಾನ್ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಹಿಂದು- ಮುಸ್ಲಿಂ ಸಹೋದರರಂತೆ ಬದುಕುತ್ತಿದ್ದಾರೆ. ಈ ಸಾಮರಸ್ಯವನ್ನು ಯಾವ ನಾಯಕರು ಕದಡುವ ಪ್ರಯತ್ನ ಮಾಡಬಾರದು ಎಂದರು.ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಮಾತನಾಡಲು ಎಲ್ಲರಿಗೂ ಬರುತ್ತದೆ, ಯತ್ನಾಳರು ಇದನ್ನು ಅರ್ಥೈಸಿಕೊಳ್ಳಬೇಕು. ಮುಸ್ಲಿಂ ಧರ್ಮ ಗುರು ಹಜರತ್ ಮೊಹ್ಮದ್ ಪೈಗಂಬರ್‌ರನ್ನು ಜಗತ್ತೇ ಗೌರವಿಸುತ್ತದೆ. ಯತ್ನಾಳರು ಅನೈತಿಕ ಮಾರ್ಗದ ಮೂಲಕ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಆರೋಪಿಸಿದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಮೊಹ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ನೋವಿನ ಸಂಗತಿ. ಇಂತಹ ಹೇಳಿಕೆಯನ್ನು ಯತ್ನಾಳರು ಕೂಡಲೇ ನಿಲ್ಲಿಸಬೇಕು ಎಂದರು.ಹಿರಿಯರಾದ ಯೂಸೂಫ್ ಖಾಜಿ, ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಕರ್ನಾಟಕ ಅಹಲೆ ಸುನ್ನತ್ ರಾಜ್ಯಾಧ್ಯಕ್ಷ ಸೈಯ್ಯದ್ ತನ್ವೀರಪೀರಾ ಹಾಶ್ಮೀ ಮಾತನಾಡಿ, ಪದೇ ಪದೇ ನಾಲಿಗೆ ಹರಿಬಿಡುತ್ತಿರುವ ನಗರ ಶಾಸಕರ ಮೇಲೆ ಕ್ರಮವಾಗಬೇಕು. ಈ ನಿಟ್ಟಿನಲ್ಲಿ ವಿಳಂಬವಾದರೆ ಈಗ ಕೇವಲ ಶೇ.೧ ರಷ್ಟು ಜನರು ಪ್ರತಿಭಟನೆ ನಡೆಸಿದ್ದಾರೆ. ಕ್ರಮ ಕೈಗೊಳ್ಳಲು ವಿಫಲವಾದರೆ ಲಕ್ಷಾಂತರ ಜನರೊಂದಿಗೆ ಪ್ರತಿಭಟನೆ ನಡೆಸಲು ನಾವು ಸಿದ್ಧ ಎಂದು ಎಚ್ಚರಿಸಿದರು.
ಮಠಾಧೀಶರಾದ ವೀರ ಯತೀಶಾನಂದ ಸ್ವಾಮೀಜಿ, ಶಾಸಕ ವಿಠ್ಠಲ ಕಟಕಧೋಂಡ, ಪ್ರಮುಖರಾದ ಮೊಹ್ಮದ್‌ರಫೀಕ್ ಟಪಾಲ್, ಅಡಿವೆಪ್ಪ ಸಾಲಗಲ್ಲ, ಎಸ್.ಎಂ.ಪಾಟೀಲ ಗಣಿಹಾರ, ಎಂ.ಸಿ.ಮುಲ್ಲಾ, ಜಮೀರ ಭಕ್ಷಿ, ಅಬ್ದುಲ್‌ರಜಾಕ್ ಹೊರ್ತಿ, ಸಜ್ಜಾದೆಪೀರಾ ಮುಶ್ರೀಫ್, ಅಹಿಂದ ಮುಖಂಡ ಸೋಮನಾಥ ಕಳ್ಳೀಮನಿ, ರಫೀಕ್‌ಅಹ್ಮದ್ ಖಾಣೆ, ಶ್ರೀನಾಥ ಪೂಜಾರಿ, ಫಯಾಜ್ ಕಲಾದಗಿ, ಶಕೀಲ್ ಬಾಗಮಾರೆ, ಮೈನುದ್ದೀನ್ ಬೀಳಗಿ ಮುಂತಾದವರು ಇದ್ದರು.ಸಮಾವೇಶಕ್ಕೂ ಮುನ್ನ ಉಗ್ರರ ದಾಳಿಗೊಳಗಾಗಿ ಪ್ರಾಣ ಕಳೆದುಕೊಂಡ ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.