ದಾವಣಗೆರೆಯಲ್ಲಿ ಅಕ್ರಮ ಸಾಗಾಟದ 4 ಗೋವು ರಕ್ಷಿಸಿದ ಮುತಾಲಿಕ್‌

KannadaprabhaNewsNetwork | Published : Mar 17, 2025 12:33 AM

ಸಾರಾಂಶ

ರಾಣೆಬೆನ್ನೂರು ದನದ ಸಂತೆಯಿಂದ ಚಿತ್ರದುರ್ಗದ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ಕು ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು, ಗೋವುಗಳನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ರಕ್ಷಿಸಿರುವ ಘಟನೆ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದಿದೆ.

ಚಿತ್ರದುರ್ಗ ಕಸಾಯಿಖಾನೆಗೆ ಒಯ್ಯುತ್ತಿದ್ದ ಹಸುಗಳು । ಸಿನಿಮೀಯ ಮಾದರಿಯಲ್ಲಿ ಗೂಡ್ಸ್ ವಾಹನ ತಡೆದ ಪ್ರಮೋದ್

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಣೆಬೆನ್ನೂರು ದನದ ಸಂತೆಯಿಂದ ಚಿತ್ರದುರ್ಗದ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ಕು ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು, ಗೋವುಗಳನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ರಕ್ಷಿಸಿರುವ ಘಟನೆ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದಿದೆ.

ಹುಬ್ಬಳ್ಳಿಯಿಂದ ದಾವಣಗೆರೆಗೆ ಬರುತ್ತಿದ್ದ ಪ್ರಮೋದ ಮುತಾಲಿಕ್‌ಗೆ ರಾಣೆಬೆನ್ನೂರು ಕಡೆಯಿಂದ ಹೊರಟಿದ್ದ ಸಣ್ಣ ಗೂಡ್ಸ್ ವಾಹನದಲ್ಲಿ ಪೂರ್ತಿ ಮುಚ್ಚಿಕೊಂಡು ಹೋಗುತ್ತಿದ್ದುದನ್ನು ಗಮನಿಸಿ, ಬೆನ್ನು ಹತ್ತಿ ಇಲ್ಲಿನ ಕುಂದುವಾಡ ಬಳಿ ವೇಗದಲ್ಲಿ ಹೋಗುತ್ತಿದ್ದ ಗೂಡ್ಸ್ ಗಾಡಿಯನ್ನು ಸ್ವತಃ ಮುತಾಲಿಕ್‌ರ ವಾಹನ ಅಡ್ಡಗಟ್ಟಿ, ತಡೆಯಿತು. ನಂತರ ಪರಿಶೀಲಿಸಿದಾಗ ನಾಲ್ಕು ದೊಡ್ಡದಾ ದ ಗೋವುಗಳು ಅದರಲ್ಲಿ ಪತ್ತೆಯಾಗಿವೆ.

ದಾಖಲೆಯೇ ಇಲ್ಲದೇ ರಾಣೆಬೆನ್ನೂರಿನಿಂದ ಚಿತ್ರದುರ್ಗಕ್ಕೆ ಹೀಗೆ ಪೂರ್ತಿ ಮುಚ್ಚಿಕೊಂಡು ಹೋಗುತ್ತಿದ್ದ ವಾಹನ ಚಾಲಕನಿಗೆ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದಾಗ ಚಿತ್ರದುರ್ಗಕ್ಕೆ ಒಯ್ಯುತ್ತಿರುವುದಾಗಿ ಚಾಲಕ ಬಾಯಿ ಬಿಟ್ಟಿದ್ದಾನೆ. ಇವು ದಾಖಲೆಯೇ ಇಲ್ಲದ ಒಯ್ಯುತ್ತಿದ್ದ ಹಸುಗಳಾಗಿವೆ. ರಾಣೆಬೆನ್ನೂರಿನಿಂದ ಚಿತ್ರದುರ್ಗ ಕಸಾಯಿಖಾನೆಗೆ ಒಯ್ಯುತ್ತಿದ್ದ ಬಗ್ಗೆ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ವಿದ್ಯಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ವಿದ್ಯಾನಗರ ಇನ್‌ಸ್ಪೆಕ್ಟರ್ ಶಿಲ್ಪಾ, ಸಿಬ್ಬಂದಿ, ಸ್ಥಳಕ್ಕೆ ಧಾವಿಸಿ ಗೋವುಗಳನ್ನು ವಶಕ್ಕೆ ಪಡೆದು, ವಾಹನ ಜಪ್ತು ಮಾಡಿ, ಚಾಲಕನನ್ನು ವಶ ಪಡೆದರು. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದುವಾಡ ಗ್ರಾಮಸ್ಥರು, ಶ್ರೀರಾಮ ಸೇನೆ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ಗೋಹತ್ಯೆ ತಡೆಯದ ಪೊಲೀಸ್ ಬಗ್ಗೆ ಮುತಾಲಿಕ್ ಆಕ್ರೋಶ:

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ನಿತ್ಯವೂ ಲೋಡ್‌ಗಟ್ಟಲೇ ಗೋವುಗಳು ರಾಜ್ಯಾದ್ಯಂತ ಸಾಗಾಟವಾಗುತ್ತಿದ್ದು, ಪೊಲೀಸ್ ಇಲಾಖೆ, ಪೊಲೀಸ್ ಚೆಕ್‌ ಪೋಸ್ಟ್‌ಗಳು ಏನು ಮಾಡುತ್ತಿವೆ ಎಂದು ಪ್ರಮೋದ್‌ ಮುತಾಲಿಕ್ ಹರಿಹಾಯ್ದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದಲೇ ಎಗ್ಗಲ್ಲದೇ ಗೋವುಗಳ ಸಾಗಾಟ, ವಧೆಯಾಗುತ್ತಿದೆ ಎಂದರು.

ಕುಂದುವಾಡ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿತ್ರದುರ್ಗಕ್ಕೆ ಒಯ್ಯುತ್ತಿದ್ದ ನಾಲ್ಕು ಗೋವುಗಳನ್ನು ರಕ್ಷಿಸಿ, ವಿದ್ಯಾನಗರ ಪೊಲೀಸರ ವಶಕ್ಕೆ ನೀಡಿದ್ದೇವೆ. ಗೂಡ್ಸ್ ವಾಹನ ಚಾಲಕ, ಮಾಲೀಕ ಇಬ್ಬರೂ ಮುಸ್ಲಿಮರೇ ಆಗಿದ್ದು, ಇದು ಯಾರೋ ರೈತರಿಗಾಗಿ ಸಾಗಿಸುತ್ತಿದ್ದುದಲ್ಲ. ಕೆಎ 16- ಸಿ 8422 ವಾಹನದಲ್ಲಿ ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದುದು ಸ್ಪಷ್ಟವಾಗಿದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ನಿರಂತರ ಗೋವುಗಳ ವಧೆಯಾಗುತ್ತಿದ್ದು, ಅಕ್ರಮವಾಗಿ ಗೋವುಗಳನ್ನು ಹೀಗೆ ಸಾಗಿಸಲಾಗುತ್ತಿದೆ. ಗೋ ಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಯಲ್ಲಿದೆ. ಹೀಗಿದ್ದರೂ ಪೊಲೀಸ್ ಇಲಾಖೆ ಯಾಕೆ ಗೋವುಗಳನ್ನು ರಕ್ಷಣೆ ಮಾಡುತ್ತಿಲ್ಲ. ನಿಮಗೆ ಅಂತಲೇ ಚೆಕ್ ಪೋಸ್ಟ್ ಸ್ಥಾಪಿಸಿದ್ದು, ಅಲ್ಲಿ ವಾಹನಗಳನ್ನು ನೀವು ಯಾಕೆ ತಪಾಸಣೆ ಮಾಡುತ್ತಿಲ್ಲ ಎಂದು ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದರು.

ಕಾನೂನಾತ್ಮಕವಾಗಿ ಗೋವುಗಳನ್ನು ರಕ್ಷಿಸುವ ಅಧಿಕಾರ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕೈಯಲ್ಲಿದೆ. ಆದರೆ, ನೀವೇ ಹೀಗೆ ಗೋವುಗಳನ್ನು ಕಸಾಯಿಖಾನೆ ಪಾಲಾಗಲು ಬಿಟ್ಟರೆ ಮುಂದೆ ನಿಮ್ಮ ಮಕ್ಕಳಿಗೆ ಕುಡಿಯುವುದಕ್ಕೆ ಹಾಲು, ನಿಮಗೆ ಊಟಕ್ಕೆ ಅನ್ನವೂ ಇಲ್ಲದಂತಾಗುತ್ತದೆ. ಗೋ ಹತ್ಯೆ ನಿಷೇಧ ಕಾಯ್ದೆಯನ್ವಯ ಗೋವುಗಳ ರಕ್ಷಣೆ ಮಾಡಿ, ನಿಮ್ಮ ಬದ್ಧತೆ ಪ್ರದರ್ಶಿಸಿ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಇನ್ನಾದರೂ ತುಷ್ಟೀಕರಣದ ಆಡಳಿತ ನಿಲ್ಲಿಸಲಿ. ಕಣ್ಣೆದುರಲ್ಲೇ ಇಷ್ಟೊಂದು ರಾಜಾರೋಷವಾಗಿ ಗೋವುಗಳನ್ನು ಸಾಗಿಸುತ್ತಿದ್ದು, ವಧೆ ಮಾಡುತ್ತಿದ್ದರೂ ಯಾಕೆ ಸುಮ್ಮನಿದ್ದೀರಿ? ಇದೇ ರೀತಿ ಗೋವುಗಳ ವಧೆಯಾದರು ನಿಮ್ಮ ಮಕ್ಕಳಿಗೆ ಹಾಲು, ನಿಮಗೆ ಅನ್ನ, ಔಷಧಿ, ಗೊಬ್ಬರವೂ ಸಿಗುವುದಿಲ್ಲ. ಗೋವುಗಳನ್ನು ರಕ್ಷಿಸದ ನೀವುಗಳೂ ಪಾಪಿಷ್ಟರಾಗುತ್ತೀರಿ ಎಂದು ಹರಿಹಾಯ್ದರು.

Share this article