ಮಡಿಕೇರಿ: ಮುತ್ತಪ್ಪ ತೆರೆ ಮಹೋತ್ಸವ

KannadaprabhaNewsNetwork | Published : Apr 7, 2024 1:51 AM

ಸಾರಾಂಶ

ಮುತ್ತಪ್ಪ ತೆರೆ ಮಹೋತ್ಸವ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಸಾವಿರಾರು ಜನರು ನೆರೆದಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೇರಳದ ದೇವರುಗಳಾದ ಮುತ್ತಪ್ಪನ್, ತಿರುವಪ್ಪನ್ ತೆರೆ ಮಹೋತ್ಸವ ಕೇರಳ ಗಡಿಗೆ ಹೊಂದಿಕೊಂಡಂತೆ ಇರುವ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಮಡಿಕೇರಿಯ ಮುತ್ತಪ್ಪ ದೇವಾಲಯದಲ್ಲಿ ಎರಡು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ಇಲ್ಲಿನ ಪರಿವಾರ ದೇವರುಗಳಾದ ಒಟ್ಟು 14 ದೇವರುಗಳ ವಿವಿಧ ಕೋಲಗಳು ನಡೆದವು. ದೇವಾಲಯದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಶುಕ್ರವಾರ ಮುತ್ತಪ್ಪ ತೆರೆ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಆ ಬಳಿಕ ಗುಳಿಗ ಕೋಲ, ಮುತ್ತಪ್ಪ, ತಿರುವಪ್ಪ, ಪೊವ್ವಾದಿ ಹಾಗೂ ವಿಷ್ಣುಮೂರ್ತಿ ಕೋಲಗಳು ಸೇರಿದಂತೆ ವಿವಿಧ ಕೋಲಗಳು ನಡೆದವು.

ರಾತ್ರಿ ಇಡೀ ನಡೆದ ಕೋಲ ದೈವಗಳನ್ನು ಕಣ್ತುಂಬಿಕೊಳ್ಳಲು ದೇವಾಲಯದಲ್ಲಿ ಸಾವಿರಾರು ಜನ ಭಕ್ತರು ನೆರೆದಿದ್ದರು. ಶಿವಭೂತ ತೆರೆ, ಕುಟ್ಟಿಚಾತನ್ ತೆರೆ, ಗುಳಿಗ ದೇವರ ತೆರೆಗಳನ್ನು ಭಕ್ತರು ಕಣ್ತುಂಬಿಕೊಂಡರು. ಗುಳಿಗ ದೇವರ ತೆರೆ ಆರಂಭವಾಗುತ್ತಿದ್ದಂತೆ ದೇವಾಲಯದ ಆವರಣದಲ್ಲಿ ನೆರೆದಿದ್ದ ಭಕ್ತರಲ್ಲಿ ದೊಡ್ಡ ಉತ್ಸಾಹವೇ ಮೂಡಿತು.

ವಿವಿಧ ದೈವದ ಕೋಲಗಳನ್ನು ಕಣ್ತುಂಬಿಕೊಳ್ಳಲು ಮಧ್ಯರಾತ್ರಿಯಾದರೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಸಮೂಹ ನೆರೆದಿತ್ತು. ಗುಳಿಗ ದೇವರು ದೇವಾಲಯದ ಆವರಣದಲ್ಲಿ ನೆರೆದಿದ್ದ ಯುವ ಹಾಗೂ ಬಾಲಕರ ಸಮೂಹಕ್ಕೆ ಇನ್ನಿಲ್ಲದ ಕಾಟಗಳನ್ನು ಕೊಡುತ್ತಾ, ದೇವಾಲಯದ ಆವರಣದಲ್ಲೆಲ್ಲಾ ಓಡಾಡಿಸಿತು. ನೆರೆದಿದ್ದ ಭಕ್ತ ಸಮೂಹ ಭಕ್ತಿ ಭಾವದಿಂದ ವಿವಿಧ ಪೂಜೆಗಳನ್ನು ಮಾಡಿಸಿ, ಹರಕೆಗಳನ್ನು ತೀರಿಸಿತು. ಜೊತೆಗೆ ಒಂದೊಂದು ದೈವಕೋಲ ಬಂದಾಗಲೂ ಭಕ್ತರು ತಮ್ಮ, ತಮ್ಮ ಸಮಸ್ಯೆಗಳನ್ನು ದೈವಗಳ ಬಳಿ ಹೇಳಿಕೊಂಡು ತಮ್ಮ ಕಷ್ಟಗಳನ್ನು ಪರಿಹರಿಸು ದೇವಾ ಎಂದು ಬೇಡಿಕೊಂಡರು.

ಮುಂಜಾನೆ ಐದು ಗಂಟೆಯ ಸಮಯದಲ್ಲಿ ವಿಷ್ಣುಮೂರ್ತಿ ಕೋಲ ನಡೆಸುವುದಕ್ಕಾಗಿ ಶುಕ್ರವಾರ ಸಂಜೆಯಿಂದಲೇ ಕೊಂಡಕ್ಕೆ ಬೆಂಕಿ ಹಾಕಲಾಗಿತ್ತು. ಕೊಂಡಕ್ಕೆ ಭಕ್ತರು ಹರಕೆ ರೂಪದಲ್ಲಿ ಸೌದೆಯನ್ನು ಅರ್ಪಿಸಿ ಭಕ್ತಿ ಮೆರೆದರು. ತಮ್ಮ ಇಷ್ಟಾರ್ಥಗಳು ಸಿದ್ಧಿಸಿದರೆ ಸೌದೆಯ ರೂಪದಲ್ಲಿ ತಮ್ಮ ಹರಕೆ ತೀರಿಸುವುದಾಗಿ ಬೇಡಿಕೊಂಡಿದ್ದ ಭಕ್ತರು ಕೊಂಡಕ್ಕೆ ಸೌದೆಗಳನ್ನು ಅರ್ಪಿಸಿದರು. ಹೀಗಾಗಿ ನಿಗಿ ನಿಗಿ ಕೆಂಡದ ದೊಡ್ಡ ರಾಶಿಯೇ ಸಿದ್ಧವಾಗಿತ್ತು. ಕೆಂಡದ ರಾಶಿಗೆ ವಿಷ್ಣುಮೂರ್ತಿ ಕೋಲ ದೈವವು ಹಲವು ಬಾರಿ ಹಾರಿ ನೆರೆದಿದ್ದ ಭಕ್ತರನ್ನು ಮೂಕವಿಸ್ಮಿತರನ್ನಾಗಿಸಿತು.

ಕೇರಳದ ಚಂಡೆಮದ್ದಳೆ ವಾದ್ಯದ ಧ್ವನಿಯ ನಡುವೆ ನಡೆದ ವಿಷ್ಣುಮೂರ್ತಿ ಕೋಲ ದೈವಕ್ಕೆ ಭಕ್ತರು ಕೈಮುಗಿದು ಬೇಡಿಕೊಂಡರು. ವಿಶೇಷವಾಗಿ ನಡೆಯುವ ಈ ಮುತ್ತಪ್ಪನ್, ತಿರುವಪ್ಪನ್ ತೆರೆ ಮಹೋತ್ಸವಕ್ಕೆ ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಮಡಿಕೇರಿಗೆ ಆಗಮಿಸಿದ್ದರು.

ಹೀಗೆ ಎರಡು ದಿನಗಳ ಕಾಲ ನಡೆದ ಮುತ್ತಪ್ಪ ದೇವಾಲಯದ ತೆರೆ ಮಹೋತ್ಸವವು ಅದ್ಧೂರಿಯಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಬಳಿಕ ಶನಿವಾರ ಧ್ವಜಾರೋಹಣ ಮಾಡುವ ಮೂಲಕ ಮುತ್ತಪ್ಪ ತೆರೆಮಹೋತ್ಸವಕ್ಕೆ ತೆರೆ ಎಳೆಯಲಾಯಿತು.

Share this article