ಕನ್ನಡಪ್ರಭ ವಾರ್ತೆ ನಾಗಮಂಗಲ
ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ 45 ನೇ ಜಾನಪದ ಕಲಾ ಮೇಳ, ಚುಂಚಶ್ರೀ ಪ್ರಶಸ್ತಿ ಪ್ರದಾನ ಹಾಗೂ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಗುರುಸಂಸ್ಮರಣೋತ್ಸವದಲ್ಲಿ ತೆಪ್ಪೋತ್ಸವಕ್ಕೂ ಮುನ್ನ ನಿರ್ಮಲಾನಂದನಾಥ ಶ್ರೀಗಳನ್ನು ಸರ್ವಾಲಂಕೃತ ಮುತ್ತಿನ ಪಾಲಕ್ಕಿಯಲ್ಲಿ ಕೂರಿಸಿದರು.
ನಂತರ ಕ್ಷೇತ್ರದ ರಥದ ಬೀದಿಯ ಜೋಡಿರಸ್ತೆಯಿಂದ ಶ್ರೀಕಾಲಭೈರವೇಶ್ವರಸ್ವಾಮಿ ಪುಷ್ಕರಣಿವರೆಗೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಹತ್ತಾರು ಬಗೆಯ ಜಾನಪದ ಕಲಾತಂಡಗಳು ಮತ್ತು ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.ಬಗೆ ಬಗೆಯ ಹೂವು ಮತ್ತು ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದ ತೆಪ್ಪೋತ್ಸವದ ಒಂದು ಬದಿಯಲ್ಲಿ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ಪುತ್ಥಳಿ ಮತ್ತೊಂದು ಬದಿಯಲ್ಲಿ ಶ್ರೀಕಾಲಭೈರವೇಶ್ವರ, ಮಾಳಮ್ಮದೇವಿ ಮತ್ತು ಚೌಡೇಶ್ವರಿದೇವಿಯ ಮೂರ್ತಿಯನ್ನಿರಿಸಲಾಗಿತ್ತು.
ತೆಪ್ಪೋತ್ಸವ ಆರಂಭಗೊಂಡು ಮುಕ್ತಾಯದವರೆಗೂ ಬಣ್ಣ ಬಣ್ಣದ ಪಟಾಕಿಗಳು ಸಿಡಿದು ಬಾನಂಗಳದಲ್ಲಿ ಚಿತ್ತಾರಗಳು ಬಿಡಿಸಿದವು. ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಆದಿಚುಂಚನಗಿರಿ ಮಹಾಸಂಸ್ಥಾನಮಠ ನೆರೆದಿದ್ದ ಜನಪದ ಕಲಾವಿದರು ಮತ್ತು ಭಕ್ತರಿಗೆ ವಿಶೇಷ ಮೆರಗು ನೀಡಿತ್ತು.