ಜನಪ್ರತಿನಿಧಿ, ಅಧಿಕಾರಿಗಳು ಒಂದೇ ಗಾಡಿಯ ಎರಡು ಚಕ್ರಗಳಂತೆ । ಪಂಚಾಯತ್ ರಾಜ್ ದಿನಾಚರಣೆ ಹಾಗೂ ಬೇಸಿಗೆ ಬೆಸುಗೆ ಸಮಾರೋಪ ಸಮಾರಂಭ
ಗ್ರಾಮೀಣಾಭಿವೃದ್ಧಿ ಗುರಿ ಸಾಧಿಸಲು ಜನಪ್ರತಿನಿಧಿ, ಅಧಿಕಾರಿಗಳು ಒಂದೇ ಗಾಡಿಯ ಎರಡು ಚಕ್ರಗಳಂತೆ ಸಮನ್ವಯ ದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಜಿಪಂ ಹಾಗೂ ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪಂಚಾಯತ್‌ರಾಜ್ ದಿನಾಚರಣೆ ಹಾಗೂ ಬೇಸಿಗೆ ಬೆಸುಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪಂಚಾಯತ್ ರಾಜ್ ವ್ಯವಸ್ಥೆ ಪ್ರಜಾಪ್ರಭುತ್ವದ ಅಡಿಪಾಯ. ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ಜಾರಿಗೆ ತಂದ ಅಧಿಕಾರ ವಿಕೇಂದ್ರೀಕರಣದ ಮಾದರಿ ದೇಶಕ್ಕೇ ದಾರಿ ದೀಪವಾಯಿತು. ನಂತರ 73 ಮತ್ತು 74ನೇ ಸಂವಿಧಾನ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಸಂವಿಧಾನಾತ್ಮಕ ಮಾನ್ಯತೆ ದೊರೆತಿದೆ ಎಂದು ತಿಳಿಸಿದರು.ಸ್ಥಳೀಯ ಸಂಸ್ಥೆಗಳಿಂದ ಬೆಳೆದು ಬಂದ ಜನಪ್ರತಿನಿಧಿಗಳಿಗೆ ಗ್ರಾಪಂ, ನಗರಸಭೆ ಹಾಗೂ ಪುರಸಭೆಗಳ ಅಧಿಕಾರಿಗಳು ಎದುರಿಸುವ ಸವಾಲುಗಳ ಅರಿವು ಹೆಚ್ಚು. ಆದ್ದರಿಂದ ಜನಸೇವೆ ಮತ್ತಷ್ಟು ಪರಿಣಾಮಕಾರಿಯಾಗಲು ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ನಡುವೆ ಉತ್ತಮ ಹೊಂದಾಣಿಕೆ ಅಗತ್ಯ ಎಂದು ಅಭಿಪ್ರಾಯಪಟ್ಟರು.ಚಿಕ್ಕಮಗಳೂರು ಜಿಲ್ಲೆ ಸತತ ಎರಡನೇ ವರ್ಷ ತೆರಿಗೆ ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿರುವುದು ಅಧಿಕಾರಿ ಮತ್ತು ಸಿಬ್ಬಂದಿ ಪರಿಶ್ರಮದ ಪ್ರತಿಫಲ ಎಂದು ಶ್ಲಾಘಿಸಿದರು.
ಗ್ರಾಮೀಣ ಭಾಗದಲ್ಲಿ ಆರಂಭಿಸಿರುವ ಗ್ರಂಥಾಲಯ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವ ಯುವಕರು ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ನಿರಂತರವಾಗಿ ಓದುವ ಅಭ್ಯಾಸ ಬೆಳೆಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೇಂದ್ರ ಪರಿಸರ ಮಾಲಿನ್ಯ ಮೌಲ್ಯಮಾಪನ ಮಂಡಳಿ ಅಧ್ಯಕ್ಷ ಎ.ಎನ್.ಮಹೇಶ್, ಭಾರತ ಸ್ವಾತಂತ್ರ್ಯ ನಂತರ ಜಾರಿಗೆ ಬಂದ ಪಂಚಾಯತ್ ರಾಜ್ ವ್ಯವಸ್ಥೆಯಿಂದ ದೇಶದಲ್ಲಿ ಕ್ರಾಂತಿ ಕಾರಕ ಬದಲಾವಣೆ ಆಗಿದೆ. ಆದರೆ, ಇತ್ತೀಚೆಗೆ ಪಂಚಾಯತ್‌ರಾಜ್ ವ್ಯವಸ್ಥೆ ಅಧಿಕಾರ ಮೊಟುಕುಗೊಳಿಸುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ತರೀಕೆರೆ ಶಾಸಕ ಶ್ರೀನಿವಾಸ್ ಮಾತನಾಡಿ ಗ್ರಾಮೀಣ ಮಕ್ಕಳಿಗೂ ‘ಬೇಸಿಗೆ ಬೆಸುಗೆ’ ಕಾರ್ಯಕ್ರಮ ತಲುಪಿಸಿರುವುದು ಶ್ಲಾಘನೀಯ ಸಾಧನೆ ಎಂದರು. ಮುಂದಿನ ವರ್ಷದಿಂದ ಈ ಕಾರ್ಯಕ್ರಮ ರಾಜ್ಯಾದ್ಯಂತ ವಿಸ್ತರಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಕಾಡಾ ಯೋಜನೆ, ಎನ್‌ಆರ್‌ಇಜಿಎ ಸಹಯೋಗದ ನೀರು ನಿರ್ವಹಣಾ ಕಾರ್ಯಕ್ರಮ ಹಾಗೂ ಇ-ಸ್ವತ್ತು ಯೋಜನೆಗಳಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ಪಿಡಿಒಗಳು ಹಾಗೂ ಅಧಿಕಾರಿಗಳು ಜನಸ್ನೇಹಿ ಆಡಳಿತ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಇನ್ನಷ್ಟು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಸಾಧನೆ ತೋರಿದ ಅಧಿಕಾರಿ ಸಿಬ್ಬಂದಿ ಹಾಗೂ ಬೇಸಿಗೆ ಬೆಸುಗೆ ಶಿಬಿರದ ಕಾರ್ಯಕರ್ತರನ್ನು ಕಾರ್ಯಕ್ರಮದಲ್ಲಿ ಗೌರವಿಸ ಲಾಯಿತು. ಭಾರತೀಯ ಸೇನೆ ನಿವೃತ್ತ ಉಪ ಮುಖ್ಯಸ್ಥ ಬಗ್ಗವಳ್ಳಿರಾಜು, ಜಿಪಂ ಉಪಕಾರ್ಯದರ್ಶಿ ರಾಜಗೋಪಾಲ್, ಜಿ.ಪಂ. ಉಪಕಾರ್ಯದರ್ಶೀ ಗೌರವ ಕುಮಾರ್ ಶೆಟ್ಟಿ ಮೊದಲಾದವರಿದ್ದರು.
ಚೈತ್ರೋತ್ಸವ, ಭದ್ರಬಾಲ್ಯ, ಬೇಸಿಗೆ ಬೆಸುಗೆ ಮತ್ತಿತರೆ ಅನೇಕ ಯೋಜನೆ ಅನುಷ್ಠಾನ ಮಾಡುವಲ್ಲಿ ನಮ್ಮ ಗ್ರಾಮ ಪಂಚಾಯಿತಿ ಅಧಿಕಾರಿಗಳ ಪರಿಶ್ರಮ ಹೆಚ್ಚು, ಇದಕ್ಕೆ ಜನಪ್ರತಿನಿಧಿಗಳು ಕೈಜೋಡಿಸಿದ್ದಾರೆ. ತೆರಿಗೆ ವಸೂಲಿಯಲ್ಲಿ ನಮ್ಮ ಜಿಲ್ಲೆ ಶೇ.100ಸಾಧನೆ ಮಾಡಿದೆ. ಇದಕ್ಕೆ ಪಂಚಾಯತ್‌ರಾಜ್ ಇಲಾಖೆ ಅಧಿಕಾರಿ ಸಿಬ್ಬಂದಿಯ ಅವಿರತ ಪರಿಶ್ರಮವೇ ಕಾರಣ ಎಂದು ಜಿಪಂ ಸಿಇಒ ಎಚ್.ಎಸ್.ಕಿರ್ತನಾ ಮೆಚ್ಚಿಗೆ ವ್ಯಕ್ತಪಡಿಸಿದರು.