ನನ್ನಣ್ಣ 23ನೇ ವಯಸ್ಸಲ್ಲೇ ನಿಮ್ಮ ವಿರುದ್ಧ ತೊಡೆ ತಟ್ಟಿದ್ದರು: ಡಿ.ಕೆ.ಸುರೇಶ್

KannadaprabhaNewsNetwork | Published : Nov 10, 2024 1:41 AM

ಸಾರಾಂಶ

ನನ್ನ ಅಣ್ಣ ಡಿ.ಕೆ.ಶಿವಕುಮಾರ್ 100 ರು.ಗಳಿಗೆ ಯಾರ ಹತ್ತಿರಾನೋ ಇದ್ದರು ಎಂದು ದೇವೇಗೌಡರು ಹೇಳಿದ್ದಾರೆ. ಆದರೆ, ದುಡ್ಡಿಗಾಗಿ ನಮ್ಮ ತಂದೆ-ತಾಯಿ ಯಾರ ಹತ್ತಿರವೂ ನಮ್ಮನ್ನು ಕಳಿಸಿಲ್ಲ. ನನ್ನ ಅಣ್ಣ 23ನೇ ವಯಸ್ಸಿಗೆ ನಿಮ್ಮ ವಿರುದ್ಧ ತೊಡೆ ತಟ್ಟಿ ನಿಂತಿದ್ದವರು. ತೊಡೆ ತಟ್ಟು ನಾನಿದ್ದೇನೆ ಎಂದು ನಮ್ಮ ಅಪ್ಪ ಹೇಳಿದ್ದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ದೇವೇಗೌಡರಿಗೆ ತಿರುಗೇಟು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ನನ್ನ ಅಣ್ಣ ಡಿ.ಕೆ.ಶಿವಕುಮಾರ್ 100 ರು.ಗಳಿಗೆ ಯಾರ ಹತ್ತಿರಾನೋ ಇದ್ದರು ಎಂದು ದೇವೇಗೌಡರು ಹೇಳಿದ್ದಾರೆ. ಆದರೆ, ದುಡ್ಡಿಗಾಗಿ ನಮ್ಮ ತಂದೆ-ತಾಯಿ ಯಾರ ಹತ್ತಿರವೂ ನಮ್ಮನ್ನು ಕಳಿಸಿಲ್ಲ. ನನ್ನ ಅಣ್ಣ 23ನೇ ವಯಸ್ಸಿಗೆ ನಿಮ್ಮ ವಿರುದ್ಧ ತೊಡೆ ತಟ್ಟಿ ನಿಂತಿದ್ದವರು. ತೊಡೆ ತಟ್ಟು ನಾನಿದ್ದೇನೆ ಎಂದು ನಮ್ಮ ಅಪ್ಪ ಹೇಳಿದ್ದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ತಿರುಗೇಟು ನೀಡಿದ್ದಾರೆ.

ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಿಗಳ ಸಮಾಜದ ಕಾಂಗ್ರೆಸ್ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು. ದೇವೇಗೌಡರು ಹಿರಿಯರು ಎಂದು ಗೌರವ ಕೊಡುತ್ತಿದ್ದೇವೆ. ಅವರು ಯಾವ ರೀತಿ ಮಾತನಾಡುತ್ತಾರೆ ಎನ್ನುವುದನ್ನು ಜನರು ತಿಳಿದುಕೊಳ್ಳಬೇಕು. ನಾವು ಯಾರ ಹತ್ತಿರವೂ ಕೈ ಚಾಚಿ ನಿಲ್ಲಲಿಲ್ಲ ಎಂದು ಹೇಳಿದರು.

ನೀವು ಚನ್ನಪಟ್ಟಣಕ್ಕೆ ಬಂದು ಎದೆ ತಟ್ಟಿಕೊಂಡು ಮಾತಾಡಿದ್ದೀರಿ. ಗೌಡರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿ, 100 ವರ್ಷ ಚೆನ್ನಾಗಿರಿ. ಹಿರಿಯರಾಗಿ ನೀವು ದೇಶಕ್ಕೆ ಸಲಹೆ ಕೊಡುತ್ತೀರಿ ಎಂದುಕೊಂಡಿದ್ದೆವು. ಆದರೆ, ನಿಮ್ಮ ಮೊಮ್ಮಗನ ಪರ ಮತ ಕೇಳೋಕೆ ಬಂದಿದ್ದೀರಿ. ಸರ್ವರಿಗೂ ಸಮಪಾಲು ಕೊಡಬೇಕು ಅಂತೀರಲ್ಲ. ಹಾಗಾಗಿಯೇ ಹಾಸನದಲ್ಲಿ ನಿಮ್ಮ ಇಬ್ಬರು ಮೊಮ್ಮಕ್ಕಳ ಪರವಾಗಿ ಪ್ರಚಾರ ಮಾಡಿದ್ದೀರಿ, ಈಗಿಲ್ಲಿ ಇನ್ನೊಬ್ಬ ಮೊಮ್ಮಗನ ಪರ ಪ್ರಚಾರ ಮಾಡಿ. ನಿಮ್ಮ ಕುಟುಂಬಕ್ಕೆ ಓಟ್‌ ಕೇಳಿ, ನಮ್ಮ ತಕರಾರಿಲ್ಲ. ಆದರೆ, ಸರ್ಕಾರ ಕಿತ್ತೊಗೆಯುತ್ತೀವಿ ಎಂದಿದ್ದೀರಲ್ಲ, ಅದು ಮಾತ್ರ ಸಾಧ್ಯವಿಲ್ಲ ಎಂದರು.

ತಾಲೂಕಿನ ಜನ ಎರಡು ಬಾರಿ ಕುಮಾರಸ್ವಾಮಿಯವರನ್ನು ಆಯ್ಕೆ ಮಾಡಿದರು. ಇಲ್ಲಿಂದಲೇ ಮುಖ್ಯಮಂತ್ರಿ ಸಹ ಆದರು. ಆದರೆ, ನಿಮ್ಮ ಕಷ್ಟ ಕೇಳಲಿಲ್ಲ. ಅವರು ಸಿಎಂ ಆಗಿದ್ದಾಗ ಅಭಿವೃದ್ಧಿ ಮಾಡಬೇಡ ಎಂದು ಹೇಳಿದ್ದೇವಾ?. ನೀವು ಪ್ರಧಾನಿಯಾಗಿದ್ರಿ. ಅಭಿವೃದ್ಧಿ ಮಾಡಲಿಲ್ಲ. ಆದರೆ, ನಾವು ಯಾರು, ಯಾವ ಕೆಲಸ ಕೇಳಿದರೂ ಮಾಡಿಕೊಟ್ಟಿದ್ದೇವೆ ಎಂದರು.

Share this article