ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನಲ್ಲಿ ಕುರುಬರ ಸಂಘದ ಜಾಗ, ಭೈರಪ್ಪನ ಗುಡಿ ಉಳಿಯಲು ಮತ್ತು ಕಾಗಿನೆಲೆ ಗುರುಪೀಠ ಸ್ಥಾಪನೆಯಾಗಲು ನಾನು ಕಾರಣ. ಕುರುಬ ಸಮುದಾಯಕ್ಕೆ ನನ್ನ ಕೊಡುಗೆ ಏನು ಎಂದು ಕೇಳುವವರು ನನ್ನ ಕೆಲಸದ ಇತಿಹಾಸ ತಿಳಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಗಾಂಧಿನಗರದಲ್ಲಿ 36 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿದ್ದರಾಮಯ್ಯ, ಕುರುಬರ ಸಂಘಕ್ಕೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ ಎಂದು ಕೆಲವರು ಮಾತನಾಡುತ್ತಾರೆ. ಅವರಿಗೆ ಇತಿಹಾಸ ಗೊತ್ತಿಲ್ಲ. ಇತಿಹಾಸ ತಿಳಿದವರು ಯಾರ ಬಳಿಯಲ್ಲೂ ನಿಷ್ಠುರವಾದಿಗಳಾಗಬಾರದು ಎಂದು ಮಾತನಾಡುತ್ತಿಲ್ಲ. ಒಂದು ರೀತಿ ‘ಅಂದರಿಕಿ ಮಂಚಿವಾಡು’ ಎನ್ನುವಂತಿದ್ದಾರೆ. ಹೀಗಾಗಿ ಸಂಘ ಮತ್ತು ಸಮುದಾಯಕ್ಕೆ ನನ್ನ ಕೊಡುಗೆ ಏನು ಎಂಬುದನ್ನು ಅನಿವಾರ್ಯವಾಗಿ ನಾನೇ ಹೇಳಬೇಕಿದೆ ಎಂದರು.
ಸಂಘದ ಕಟ್ಟಡ ಇರುತ್ತಿರಲಿಲ್ಲ:1983ರಲ್ಲಿ ನಾನು ಮೊದಲ ಬಾರಿ ಶಾಸಕನಾಗಿ, 1984ರಲ್ಲಿ ಸಾರಿಗೆ ಸಚಿವನಾದೆ. 1988ರಲ್ಲಿ ಕನಕದಾಸರ 500ನೇ ಜಯಂತ್ಯುತ್ಸವ ಆಚರಣೆ ಮಾಡಿಸಿದೆ. ನಾನು ರಾಜಕಾರಣಕ್ಕೆ ಬಾರದೇ ಹೋಗಿದ್ದರೆ ಕುರುಬ ಸಂಘದ ಕಟ್ಟಡ ಉಳಿಯುತ್ತಿರಲಿಲ್ಲ. 1988ರಲ್ಲಿ ರೌಡಿ ಕೊತ್ವಾಲ್ ರಾಮಚಂದ್ರ ಜತೆ ಸೇರಿ ಸಂಘದ ಆಗಿನ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ 3 ಕೋಟಿ ರು. ಸಾಲ ಮಾಡಿ ಕಟ್ಟಡ ಹರಾಜಿಗೆ ತರುವವನಿದ್ದ. ನನಗೆ ಜೀವ ಬೆದರಿಕೆಯೂ ಹಾಕಿದ್ದ. ನಾನು ಹೆದರದೆ ದಾವಣಗೆರೆ ಮಲ್ಲಪ್ಪ ಅವರನ್ನು ಪುಟ್ಟಸ್ವಾಮಿ ಎದುರು ನಿಲ್ಲಿಸಿ ಸಂಘದ ಚುನಾವಣೆ ಗೆಲ್ಲಿಸಿದೆ ಎಂದರು.
1989ರಲ್ಲಿ ನಾನು ಚುನಾವಣೆಯಲ್ಲಿ ಸೋತಿದ್ದೆ. ಆದರೂ, ನನ್ನ ಹಳೇ ಕಾರಿನಲ್ಲೇ ಇಡೀ ರಾಜ್ಯ ಸುತ್ತಿ ಸಮಾಜವನ್ನು ಸಂಘಟಿಸಿದೆ. 1992ರಲ್ಲಿ ಕಾಗಿನೆಲೆ ಗುರುಪೀಠ ಸ್ಥಾಪಿಸಿ, ತಾರಕಾನಂದರನ್ನು ಪೀಠಾಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಿದೆ. ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಮತ್ತು ಕೇಂದ್ರ ಸಚಿವರಾಗಿದ್ದ ಶರದ್ ಪವಾರ್ ಅವರನ್ನು ಕರೆಯಿಸಿ ಪೀಠಕ್ಕೆ ಚಾಲನೆ ನೀಡಲಾಯಿತು. ಬಳಿಕ ಪೀಠದ ಸಮಿತಿಗೆ ವಿಶ್ವನಾಥ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ನಾನು. ಈಗ ವಿಶ್ವನಾಥ್ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಸಮಾಜವು ಸತ್ಯ ಮತ್ತು ಇತಿಹಾಸ ಅರಿಯಬೇಕಿದೆ. ಗುರುಪೀಠ ಸ್ಥಾಪಿಸಿದ್ದು ತಾವೆಂದು ನಿರಂಜನಾನಂದಪುರಿ ಸ್ವಾಮೀಜಿಗೆ ಹೆದರಿಸುವವರು ಇತಿಹಾಸ ತಿರುಚುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ವಿಧಾನಪರಿಷತ್ ಮಾಜಿ ಉಪ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಇದ್ದರು.ವಿದ್ಯಾರ್ಥಿನಿಲಯಕ್ಕೆ ಸಿದ್ದರಾಮಯ್ಯ ಹೆಸರಿಡಿ:ಹೊಸದಾಗಿ ನಿರ್ಮಾಣವಾಗಲಿರುವ ವಿದ್ಯಾರ್ಥಿನಿಲಯಕ್ಕೆ ಸಿದ್ದರಾಮಯ್ಯ ಹೆಸರಿಡುವಂತೆ ಕಾರ್ಯಕ್ರಮದಲ್ಲಿ ಒತ್ತಾಯಿಸಲಾಯಿತು. ಸಚಿವ ಬೈರತಿ ಸುರೇಶ್, ಸಿದ್ದರಾಮೇಶ್ವರ ನಂದಾಪುರ ಸ್ವಾಮೀಜಿ ಸೇರಿ ಇತರರು ವೇದಿಕೆಯಲ್ಲಿಯೇ ಸಿದ್ದರಾಮಯ್ಯ ಹೆಸರಿಡುವ ಪ್ರಸ್ತಾಪ ಮಾಡಿದರು.ಮಗನನ್ನು ಸಿಎಂ ಮಾಡಿ: ವರ್ತೂರು ಪ್ರಕಾಶ್
ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲು ಕುರುಬರಷ್ಟೇ ಅಲ್ಲದೆ, ಎಲ್ಲ ವರ್ಗದವರೂ ಕಾರಣರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕುರುಬ ಸಮುದಾಯದ ಹೆಚ್ಚಿನ ಜನರು ಸ್ಪರ್ಧಿಸಿ ಗೆಲ್ಲಬೇಕು. ನಾನು ಬಿಜೆಪಿಯಲ್ಲಿ ಸಕ್ರಿಯವಾಗಿಲ್ಲ, ನೆಪ ಮಾತ್ರಕ್ಕೆ ಮಾತ್ರ ಇದ್ದೇನೆ. ನನಗೆ ಪಕ್ಷ ಮುಖ್ಯವಲ್ಲ, ಜಾತಿ ಮುಖ್ಯ. ಆದರೆ, ಅಪ್ಪತಪ್ಪಿಯೂ ನೀವು (ಸಿದ್ದರಾಮಯ್ಯ) ನಿವೃತ್ತಿಯಾಗುತ್ತೇನೆಂದು ಹೇಳಬಾರದು. ನಾವೆಲ್ಲರೂ ಪಕ್ಷಾತೀತವಾಗಿ ಬೆಂಬಲ ನೀಡುತ್ತೇವೆ. ಹಾಗೆಯೇ, ನೀವು ಗಟ್ಟಿಯಾಗಿರುವಂತೆಯೇ ನಿಮ್ಮ ಮಗನನ್ನು (ಯತೀಂದ್ರ) ಸಿಎಂ ಮಾಡಬೇಕು ಎಂದರು.100 ದೇವೇಗೌಡರು ಒಬ್ಬ ಸಿದ್ದರಾಮಯ್ಯ ಅವರಿಗೆ ಸಮ. ದೇವೇಗೌಡರು ಬದುಕಿದ್ದಾಗಲೇ ಮಗನನ್ನು ಮುಖ್ಯಮಂತ್ರಿ ಮಾಡಿದರು. ಸಿದ್ದರಾಮಯ್ಯ ಅವರು ಕೂಡ ತಮ್ಮ ಮಗನನನ್ನು ಸಿಎಂ ಮಾಡಬೇಕು. ಈಗಲೂ ದೇವರ ದಯೆ ಮತ್ತು 100 ಶಾಸಕರ ಬೆಂಬಲವಿದೆ. ಒಂದು ವೇಳೆ ಏನಾದರೂ ಆದರೆ ಅಹಿಂದ ವರ್ಗದವರು ಹೋರಾಟ ಮಾಡಲು ಸಿದ್ಧರಿರಬೇಕು ಎಂದು ಹೇಳಿದರು.