ಮುಂಡಗೋಡ: ಜಗತ್ತಿಗೆ ಶಾಂತಿ ಸಂದೇಶ ನೀಡುವ ಶಕ್ತಿ ಇರುವುದು ಭಾರತಕ್ಕೆ ಮಾತ್ರ. ಹಾಗಾಗಿ ಭಾರತ ಉಳಿಯಬೇಕು. ಭಾರತವನ್ನು ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ ಎಂದು ನಿಜಗುಣಾನಂದ ಸ್ವಾಮೀಜಿ ಹೇಳಿದರು.ಶನಿವಾರ ಇಲ್ಲಿಯ ನಗರಸಭಾ ಭವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜಯಂತಿ ಮತ್ತು ಡಾ.ಬಾಬು ಜಗಜೀವನರಾಮ್ ಅವರ ೧೧೮ನೇ ಜಯಂತಿ ಅಂಗವಾಗಿ ಗೌತಮ ಬುದ್ದ, ಬಸವಣ್ಣನವರ ಶಾಂತಿ ಮತ್ತು ಸಮಾನತೆಯ ವೈಚಾರಿಕ ಹಬ್ಬದ ಜಿಲ್ಲಾ ಮಟ್ಟದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರು ಕೂಡ ಹೊಟ್ಟೆ ಪಾಡಿಗಾಗಿ ಜೀವನ ನಡೆಸುತ್ತಾರೆ. ಆದರೆ ಜಗತ್ತಿನ ಎಲ್ಲರ ಬದುಕಿಗೆ ಬೆಳಕು ಮತ್ತು ಶಾಂತಿಯನ್ನು ನೀಡಿದವರು ಬುದ್ದ, ಬಸವ ಹಾಗೂ ಅಂಬೇಡ್ಕರ್ ಮಾತ್ರ. ಪ್ರತಿಯೊಬ್ಬರಿಗೂ ಶಾಂತಿ ಸುವ್ಯವಸ್ಥಿತವಾಗಿ ಭಾವೈಕ್ಯತೆಯಿಂದ ಬದುಕಲು ಅವಕಾಶ ಕಲ್ಪಿಸಿಕೊಟ್ಟಿರುವ ಏಕೈಕ ದೇಶವೆಂದರೆ ಅದು ಭಾರತ. ಹೊರಗಡೆಯಿಂದ ಬಂದರನ್ನು ಕೂಡ ಮಲತಾಯಿ ಧೋರಣೆ ಮಾಡದೇ ಸ್ವಂತ ಮಗನಂತೆ ನೋಡಿಕೊಳ್ಳುವ ಗುಣಧರ್ಮ ನಮ್ಮ ದೇಶದ್ದು. ಇದು ಜಗತ್ತಿಗೆ ಗೊತ್ತಿದೆ. ಇಂದು ದೇಶದಲ್ಲಿ ಪ್ರತಿಯೊಬ್ಬರು ಸ್ವತಂತ್ರವಾಗಿ ಮಾತನಾಡಲು ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಬಸವಣ್ಣನವ ಪಾತ್ರ ಪ್ರಮುಖವಾಗಿದೆ ಎಂದು ನಿಜಗುಣಾನಂದ ಸ್ವಾಮೀಜಿ ಬಣ್ಣಿಸಿದರು.
ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷ ಕಳೆದಿದ್ದು, ಸಾಕಷ್ಟು ಮುಂದುವರೆದರೂ ಇಂದಿಗೂ ನಾವು ಜಾತಿಯತೆ ಬಗ್ಗೆ ಮಾತನಾಡುತ್ತಿರುವುದು ಶೋಚನಿಯ. ಅಂಬೇಡ್ಕರ್ ಸಂವಿಧಾನವನ್ನು ಕೊಡುಗೆಯಾಗಿ ನೀಡದಿದ್ದರೆ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತಿತ್ತು ಎಂದು ಹೇಳಿದರು.ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್. ಫಕ್ಕೀರಪ್ಪ ಪ್ರಾಸ್ತಾವಿಕ ಮಾತನಾಡಿದರು. ಚಿತ್ರದುರ್ಗ ಕೋಡಿಹಳ್ಳಿ ತೋಂಟದಾರ್ಯ ಆಧಿಜಾಂಬವ ಮಠದ ಷಡಕ್ಷರಿ ಸ್ವಾಮಿಗಳು, ಟಿಬೇಟಿಯನ್ ಕಾಲನಿಯ ಬೌದ್ದ ಮಠದ ಮುಖ್ಯಸ್ಥರಾದ ಜಾಂಗ್ಚುಪ್ ಸಾಂಗೆ, ಜಿಗ್ಸೆ ಲಾವಸಾಗ್, ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ ಪಾಟೀಲ, ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಎಸ್.ಡಿ ಮುಡೆಣ್ಣವರ, ರಪೀಕ್ ಇನಾಮದಾರ, ಜ್ಞಾನದೇವ ಗುಡಿಯಾಳ ಮುಂತಾದವರು ಉಪಸ್ಥಿತರಿದ್ದರು.