ಜನರ ಮತಭಿಕ್ಷೆಯ ಋಣ ತೀರಿಸಲು ನನ್ನ ಶ್ರಮ ನಿರಂತರ

KannadaprabhaNewsNetwork | Published : Mar 3, 2025 1:49 AM

ಸಾರಾಂಶ

ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಮತದಾರರು ನನಗೆ 1 ಲಕ್ಷಕ್ಕೂ ಅಧಿಕ ಮತ ಭಿಕ್ಷೆ ನೀಡಿದ್ದಾರೆ. ಇಲ್ಲಿನ ಮತದಾರರ ಋಣವನ್ನು ತೀರಿಸುವ ನಿಟ್ಟಿನಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವ ಪರ್ವಕ್ಕೆ ನಾನು ಮುನ್ನುಡಿ ಬರೆಯುತ್ತೇನೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು

ಕನ್ನಡಪ್ರಭ ವಾರ್ತೆ ಯಳಂದೂರು

ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಮತದಾರರು ನನಗೆ 1 ಲಕ್ಷಕ್ಕೂ ಅಧಿಕ ಮತ ಭಿಕ್ಷೆ ನೀಡಿದ್ದಾರೆ. ಇಲ್ಲಿನ ಮತದಾರರ ಋಣವನ್ನು ತೀರಿಸುವ ನಿಟ್ಟಿನಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವ ಪರ್ವಕ್ಕೆ ನಾನು ಮುನ್ನುಡಿ ಬರೆಯುತ್ತೇನೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

ತಾಲೂಕಿನ ವಿವಿಧೆಡೆ ರಸ್ತೆ, ಚರಂಡಿ ಅಭಿವೃದ್ಧಿ, ಅಂಬೇಡ್ಕರ್ ಸಮುದಾಯ ಭವನ, ಅಂಗನವಾಡಿ ಉದ್ಘಾಟನೆ, ಭೂಮಿಪೂಜೆ ಸೇರಿದಂತೆ ವಿವಿಧ 15 ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಕೊಮಾರನಪುರ ಗ್ರಾಮಕ್ಕೆ ಗುಂಬಳ್ಳಿ ಮುಖ್ಯರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕಳೆದ 20 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿತ್ತು. ಕಳೆದ ಬಾರಿ ಇದಕ್ಕೆ ಅನುದಾನ ಬಂದಿದ್ದರೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಈ ಹಣ ವಾಪಸ್ಸಾಗಿತ್ತು. ಮತ್ತೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ ಮಾಡಿ ಈ ರಸ್ತೆಗೆ 2 ಕೋಟಿ ರು. ಅನುದಾನವನ್ನು ತಂದಿದ್ದು ಇದಕ್ಕೆ ಭೂಮಿ ಪೂಜೆ ಮಾಡಿದ್ದೇನೆ ಎಂದು ತಿಳಿಸಿದರು.

ಇದೇ ಗ್ರಾಮಕ್ಕೆ ಎಸ್‌ಇಪಿ ಯೋಜನೆಯಡಿಯಲ್ಲಿ 50 ಲಕ್ಷ ರು. ವೆಚ್ಚದಲ್ಲಿ ಚರಂಡಿ, ರಸ್ತೆ ಅಭಿವೃದ್ಧಿಗೆ ಮೊದಲ ಕಂತಾಗಿ 16.50 ಲಕ್ಷ ಬಿಡುಗಡೆಯಾಗಿದೆ. ವಡಗೆರೆ ಗ್ರಾಮದ ಅಂಬೇಡ್ಕರ್ ಭವನ ಕಾಮಗಾರಿಗೆ 10 ಲಕ್ಷ ರು. ಗೌಡಹಳ್ಳಿ ಗ್ರಾಮದ ಲಿಂಗಾಯಿತ, ಕುರುಬ ಹಾಗೂ ಉಪ್ಪಾರ ಬೀದಿಯ ರಸ್ತೆ ಚರಂಡಿ ಅಭಿವೃದ್ಧಿಗೆ 50 ಲಕ್ಷ ರು. ಗೌಡಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ 20 ಲಕ್ಷ ರು. ಆಲ್ಕೆರೆ ಅಗ್ರಹಾರ ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರು. ಇಲ್ಲಿನ ಅಂಗನವಾಡಿ ಕೇಂದ್ರದ ಭೂಮಿ ಪೂಜೆ, ದೇವರಹಳ್ಳಿ ಗ್ರಾಮದ ಸಿಸಿ ರಸ್ತೆಗೆ 20 ಲಕ್ಷ ರು. ಬನ್ನಿಸಾರಿಗೆ ರಸ್ತೆ ಅಭಿವೃದ್ಧಿಗೆ 40 ಲಕ್ಷ ರು. ರಾಮಾಪುರ ಗ್ರಾಮದ ಸಿಸಿ ರಸ್ತೆ ಚರಂಡಿಗೆ 40 ಲಕ್ಷ ರು. ಇಲ್ಲಿನ ಅಂಬೇಡ್ಕರ್ ಭವನದ ಉದ್ಘಾಟನೆ ಹಾಗೂ ಮಿನಿ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಮಾಡಲಾಗಿದೆ ಎಂದರು.ನೀರಾವರಿ ಯೋಜನೆ ತಂದು ಕೆರೆಗಳನ್ನು ತುಂಬಿಸುವ ಯೋಜನೆಗೆ 505 ಕೋಟಿ ರು.ಗಳ ಕ್ರಿಯಾ ಯೋಜನೆ ತಯಾರು ಮಾಡಿದ್ದು ಇದನ್ನು ಮುಖ್ಯಮಂತ್ರಿಗಳ ಮುಂದೆ ಇಡುತ್ತೇನೆ. ಇದಕ್ಕೆ ಅನುಮೋದನೆಯನ್ನು ಕೊಡಿಸುವಲ್ಲಿ ಶ್ರಮಿಸುತ್ತೇನೆ ಎಂದರು. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಚ್.ವಿ ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷೆ ಜೆ. ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಎಇಇ ಸಂತೋಷ್ ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಮಾಂಬಳ್ಳಿ ನಂಜುಂಡಸ್ವಾಮಿ ಗುಂಬಳ್ಳಿ ಗ್ರಾಪಂ ಅಧ್ಯಕ್ಷೆ ಪುಟ್ಟಮಾಧವಿ, ಗೌಡಹಳ್ಳಿ ಗ್ರಾಪಂ ಅಧ್ಯಕ್ಷೆ ವಸಂತ ಉಪಾಧ್ಯಕ್ಷೆ ಭಾಗ್ಯ, ಬೋಧಿರತ್ನ ಬಂತೇಜಿ, ಕಂದಹಳ್ಳಿ ನಂಜುಂಡಸ್ವಾಮಿ, ಕೆಆರ್‌ಐಡಿಎಲ್‌ನ ಉಪ ನಿರ್ದೇಶಕ ಚಿಕ್ಕಲಿಂಗಯ್ಯ ನಿರ್ಮಿತಿ ಕೇಂದ್ರ ಜೆಇ ನಂದೀಶ್, ಗುತ್ತಿಗೆದಾರ ಮಂಜುನಾಥ್, ಪಿಎಸ್‌ಐ ಹನುಮಂತ ಉಪ್ಪಾರ್, ಕೃಷಿಕ ಸಮಾಜದ ಅಧ್ಯಕ್ಷ ಗೌಡಹಳ್ಳಿ ರವಿ, ರಂಗರಾಮು, ಮಹಾದೇವ್ ಇದ್ದರು.

Share this article