ಕೊಪ್ಪಳ:
ನನ್ನಪ್ಪ ಬದುಕಿನಲ್ಲಿ ಬಂದ ಕಷ್ಟಗಳನ್ನು ಎದುರಿಸದೇ ಕುಡಿತದ ಚಟಕ್ಕೆ ದಾಸನಾಗಿದ್ದ. ಅದರಿಂದ ನೊಂದಿದ್ದರು. ಅಲ್ಲಿಗೆ ನಮ್ಮ ಬದುಕೇ ಮುಗಿದು ಹೋಯಿತು ಎನ್ನುವಂತಾಗಿತ್ತು. ಆದರೆ, ಶ್ರೀಧರ್ಮಸ್ಥಳ ಮಂಜುನಾಥ ಸಂಸ್ಥೆ ಜನಜಾಗೃತಿ ವೇದಿಕೆ ನಡೆಸಿದ ಮದ್ಯವರ್ಜನ ಶಿಬಿರಕ್ಕೆ ತೆರಳಿದ್ದರಿಂದ ನನ್ನಪ್ಪ ಕುಡಿತ ಬಿಟ್ಟರು. ಇದರಿಂದ ನಮ್ಮ ಬದುಕು ಹಸನವಾಯಿತು ಎಂದು ಮದ್ಯವ್ಯಸನದಿಂದ ಮುಕ್ತವಾಗಿರುವ ಯಲಬುರ್ಗಾದ ಶರಣಗೌಡರ ಪುತ್ರಿ ಸರಸ್ವತಿ ಹೇಳಿದರು.ಭಾಗ್ಯನಗರದ ಫಂಕ್ಷನ್ ಹಾಲ್‌ನಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್, ಜನಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ಗಾಂಧಿ ಸ್ಮೃತಿ, ಪಾನಮುಕ್ತರಿಗೆ ಅಭಿನಂದನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ನನ್ನ ಅಪ್ಪ ಮೊದಲು ಸ್ವಲ್ಪ ಕುಡಿಯುತ್ತಿದ್ದ, ಆದರೆ ದಾಳಿಂಬೆ ಬೆಳೆ ಹಾಕಿದಾಗ ಅದು ನಷ್ಟವಾಗಿದ್ದರಿಂದ ವಿಪರೀತ ಕುಡಿತಕ್ಕೆ ಬಿದ್ದ. ಬಳಿಕ ಆತ ಜೀವನವೇ ಕುಡಿತದಲ್ಲಿ ಮುಳುಗಿತು. ಈ ನಡುವೆ ನನ್ನ ತಾಯಿ ತಂದೆಯೊಂದಿಗೆ ಇದೇ ಕಾರಣಕ್ಕೆ ಜಗಳವಾಡಿ ತವರುಮನೆ ಸೇರಿದರು. ಆಗ ನನಗೆ ನನ್ನ ತಂದೆ ಜತೆ ಇರುವುದು ದೊಡ್ಡ ಸವಾಲಾಯಿತು. ಆಗ ಮದ್ಯವರ್ಜನ ಶಿಬಿರಕ್ಕೆ ತೆರಳಿ ನನ್ನ ತಂದೆ ಕುಡಿತ ಬಿಟ್ಟರು. ಈಗ ದುಡಿದು ಉತ್ತಮ ಬದುಕು ಸಾಗಿಸುತ್ತಿದ್ದಾರೆ. ಜತೆಗೆ ಬಿಲ್ಡಿಂಗ್ ಕೂಡ ಕಟ್ಟಿದ್ದಾರೆ. ಬಾಡಿಗೆ ದುಡಿಯುತ್ತಿದ್ದಾರೆ. ಈಗ ನಮ್ಮ ಬದುಕು ಸುಂದರವಾಗಿದೆ. ನನ್ನಪ್ಪ ಅಷ್ಟೇ ಪಾನಮುಕ್ತರಾಗುವುದಲ್ಲ, ಗಾಂಧೀಜಿ ಕನಸಿನಂತೆ ನಮ್ಮ ದೇಶವೇ ಪಾನಮುಕ್ತರಾಗಬೇಕು. ಆಗ ಪ್ರತಿ ಕುಟುಂಬದಲ್ಲಿ ನೆಮ್ಮದಿ ಲಭಿಸುತ್ತದೆ ಎಂದರು.
ಇನ್ನು ಹಟ್ಟಿ ಗ್ರಾಮದ ಭಾಗ್ಯಲಕ್ಷ್ಮಿ ಮಾತನಾಡಿ, ನನ್ನ ತಂದೆ ವಿಪರೀತ ಕುಡಿಯುತ್ತಿದ್ದ. ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮದ್ಯ ಸೇವನೆ ಬಿಟ್ಟಿದ್ದಾರೆ. ಈಗ ನಾವು ನೆಮ್ಮದಿಯಾಗಿದ್ದೇವೆ ಎಂದು ಹೇಳಿದರು.ಗಾಂಧೀಜಿ ಕನಸು ನನಸಿಗೆ ಸಂಕಲ್ಪ: ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಪ್ರಾದೇಶಿಕ ನಿರ್ದೇಶಕ ಬಿ. ಗಣೇಶ, ಇಡೀ ದೇಶದಲ್ಲಿ ಗಾಂಧೀಜಿ ಪಾನಮುಕ್ತ ದೇಶದ ಸಂಕಲ್ಪ ಮಾಡಿರುವುದು ಧರ್ಮಸ್ಥಳದ ಮಂಜುನಾಥಸ್ವಾಮೀಜಿ ಎಂದರು. ಅವರ ಪ್ರಯತ್ನದಿಂದಲೇ ರಾಜ್ಯದಲ್ಲಿ ಸುಮಾರು 1.75 ಲಕ್ಷ ಜನರು ಮದ್ಯಪಾನ ಮಾಡುವುದನ್ನು ಬಿಟ್ಟಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಸ್ಥೆಯಿಂದ ಶಿಬಿರಗಳು ನಡೆಯುತ್ತಲೇ ಇವೆ ಎಂದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಮಾತನಾಡಿ, ಮದ್ಯಪಾನದಿಂದ ಆರೋಗ್ಯ, ಸಾಮಾಜಿಕ, ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ನಾವು, ನಮ್ಮೂರು, ನಮ್ಮ ಮನೆಯ ಸುತ್ತ ಸ್ವಚ್ಛತೆ ಕಾಪಾಡಬೇಕು. ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದರು.ಜಿಲ್ಲೆಯಲ್ಲಿ 30 ಪಾನಮುಕ್ತ ಶಿಬಿರಗಳು ನಡೆದು 864 ಜನರು ಪಾನಮುಕ್ತರಾಗಿದ್ದಾರೆ. ಅವರನ್ನು ಗೌರವಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಭಾಗ್ಯನಗರದ ಶಂಕರಮಠದ ಶ್ರೀಶಿವರಾಮಕೃಷ್ಣಾನಂದ ಸ್ವಾಮೀಜಿ ಉದ್ಘಾಟಿಸಿದರು. ಜನಜಾಗೃತಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಅಧ್ಯಕ್ಷತೆ ವಹಿಸಿದ್ದರು. ಸದಾನಂದ ಬಂಗೇರಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಸಿರಿಧಾನ್ಯ ಜಾಗೃತಿಗಾಗಿ ಕೊಪ್ಪಳದ ಈಶ್ವರ ಪಾರ್ಕಿನಿಂದ ಬಾಲಾಜಿ ಫಂಕ್ಷನ್ ಹಾಲ್‌ವರೆಗೆ ಮೆರವಣಿಗೆ ನಡೆಯಿತು. ಎತ್ತಿನಬಂಡಿಯಲ್ಲಿ ವಿವಿಧ ವೇಷಭೂಷಣ, ಡೊಳ್ಳು, ಭಜನೆ, ಕುಂಬ ಹೊತ್ತು ಮೆರವಣಿಗೆ ನಡೆಯಿತು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಜಿಪಂ ಮಾಜಿ ಅಧ್ಯಕ್ಷ ಟಿ.ಜನಾರ್ದನ, ಡಾ.ವಿ.ವಿ. ಹಿರೇಮಠ, ವೀರಣ್ಣ ನಿಂಗೋಜಿ, ತ್ರೀಶಾಲಾ ಪಾಟೀಲ, ಸಂಗಪ್ಪ ತೆಂಗಿನಕಾಯಿ, ರಮೇಶ ಕುಲಕರ್ಣಿ, ರಾಧಾ ಕುಲಕರ್ಣಿ ಇದ್ದರು.