ಕನ್ನಡಪ್ರಭ ವಾರ್ತೆ ಹೊಸಕೋಟೆ
ಹಾಲಿನ ಗುಣಮಟ್ಟ ಕಾಪಾಡಿಕೊಳ್ಳುವ ಮೂಲಕ ಹಾಲು ಉತ್ಪಾದಕರು, ಮಾರಾಟಗಾರರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ, ಬೆಂಗಳೂರು ಹಾಲು ಒಕ್ಕೂಟದ ಅಮುಲಾಗ್ರ ಬದಲಾವಣೆಗೆ ಸಹಕಾರ ನೀಡಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.ನಗರದ ಹೊರವಲಯದ ಚಿಕ್ಕಹುಲ್ಲೂರು ಬಳಿ ಇರುವ ಬಮುಲ್ ಹೊಸಕೋಟೆ ಶಿಬಿರ ಕಚೇರಿಯಲ್ಲಿ ಹಾಲಿನ ಡೈರಿ ಅಧ್ಯಕ್ಷರುಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ನಾನು ನೂತನವಾಗಿ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ಮೊದಲ ಸಭೆ ನಡೆಸಿ, ವಿಭಾಗವಾರು ಪ್ರಗತಿ, ಹಾಲಿನ ಉತ್ಪಾದನೆ ಹಾಗೂ ಮಾರುಕಟ್ಟೆ ಹೆಚ್ಚಳ, ಮೌಲ್ಯವರ್ಧನೆ, ಹೈನೋದ್ಯಮಿಗಳ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ವಿಚಾರಗಳನ್ನು ಸಮಾಲೋಚಿಸಿ, ಮಾಡಬೇಕಾದ ಕೆಲಸಗಳ ಬಗ್ಗೆ ಮುಂದಡಿ ಇಟ್ಟಿದ್ದೇವೆ. ಪ್ರಮುಖವಾಗಿ ನಂದಿನಿ ಉತ್ಪನ್ನಗಳು ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡಿದ್ದು, ಪರಿಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ನಂದಿನಿ ಉಳಿಸಿ ನಂದಿನಿ ಬೆಳೆಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಮಾರುಕಟ್ಟೆ ವಿಸ್ತರಣೆಗೆ ಚಿಂತನೆ ನಡೆಸಿದ್ದೇವೆ ಎಂದರು.ಹೊಸಕೋಟೆ ಚಿಲ್ಲಿಂಗ್ ಸೆಂಟರ್ 2 ಲಕ್ಷ ಲೀಟರ್ ಹಾಲು ಸಂಗ್ರಹಣ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 1.5 ಲಕ್ಷ ಲೀಟರ್ ಉತ್ಪಾದನೆ ಆಗುತ್ತಿದೆ. ಪ್ರತಿದಿನ ರಾಜ್ಯದಲ್ಲಿ 1.5 ಕೋಟಿ ಲೀಟರ್ ಹಾಗೂ ಬಮುಲ್ ನಲ್ಲಿ 18 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ನಿರೀಕ್ಷೆಗಿಂತ ಉತ್ಪಾದನೆ ಕಡಿಮೆ ಆಗುತ್ತಿರುವ ಪರಿಣಾಮ ಕಳೆದ ಸಾಲಿನಲ್ಲಿ ಬಮುಲ್ ನಲ್ಲಿ ನಷ್ಟ ಆಗಿದೆ. ಪ್ರಮುಖವಾಗಿ ಕೆಎಂಎಫ್ ಮಾರುಕಟ್ಟೆ ವ್ಯವಸ್ಥೆಯಲ್ಲಿ ಹಿಂದೆ ಉಳಿದಿರುವುದು ನಿಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆ ವಿಸ್ತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಹೊಸಕೋಟೆ ಹಾಲು ಶಿಥಿಲೀಕರಣ ಕೇಂದ್ರ ೨೩ ಎಕರೆ ಪ್ರದೇಶವನ್ನು ಹೊಂದಿದ್ದು, ಬಿ.ಎನ್. ಬಚ್ಚೇಗೌಡರ ದೂರದೃಷ್ಟಿಯ ಫಲವಾಗಿದೆ. ಜಿಲ್ಲೆಯಲ್ಲಿ ಗುಣಮಟ್ಟದ ಹಾಲು ಉತ್ಪಾದನೆಯಲ್ಲೂ ಹೊಸಕೋಟೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ನಿರಂತರವಾಗಿ ಕಾಯ್ದುಕೊಂಡಿದೆ. ಮುಂದಿನ ದಿನಗಳಲ್ಲಿ ಹೊಸಕೋಟೆ ತಾಲೂಕಿನಲ್ಲಿ ಫೀಡ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ನೂತನ ಅಧ್ಯಕ್ಷರು ಮುಂದಾಗಬೇಕು. ತಾಲೂಕಿನಲ್ಲಿ ೨೦೦ ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಎಲ್ಲ ಸಂಘಗಳ ಅಭಿವೃದ್ಧಿಗೆ ರಾಜಕೀಯ ಬದಿಗೊತ್ತಿ ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ ಎಂದರು.ಕೆ. ಮಲ್ಲಸಂದ್ರ ಡೈರಿ ಅಧ್ಯಕ್ಷ ಮುರಳಿಧರ್, ಅನ್ಯ ರಾಜ್ಯಗಳ ಹಾಲು ಒಕ್ಕೂಟದವರು ಹೆಚ್ಚಿನ ಲಾಭ ಮಾರಾಟಗಾರರಿಗೆ ನೀಡುತ್ತಿದ್ದು, ಮಾರುಕಟ್ಟೆ ವ್ಯವಸ್ಥೆಯನ್ನು ಮತ್ತಷ್ಟು ಪ್ರಬಲಗೊಳಿಸಲು ನೂತನ ಅಧ್ಯಕ್ಷರು ಅವರ ತಂಡ ಮುಂದಾಗಬೇಕು ಎಂದು ಡೈರಿ ಅಧ್ಯಕ್ಷರುಗಳ ಸಮಾಲೋಚನಾ ಸಭೆಯಲ್ಲಿ ತಿಳಿಸಿದರು.ಬಮುಲ್ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ಬಿ.ವಿ. ಸತೀಶ್ ಗೌಡ, ಕೆಎಂಎಂ ಮಂಜುನಾಥ್, ಬೈರೇಗೌಡ, ಸತೀಶ್ ಕಡತನಮನೆ, ಚನ್ನಪಟ್ಟಣ ಲಿಂಗೇಶ್, ಆನೇಕಲ್ ರಮೇಶ್, ಎಲ್ ಎನ್ ಟಿ ಮಂಜುನಾಥ, ಎಂಎಲ್ಸಿ ರವಿ, ವವಸ್ಥಾಪಕ ನಿರ್ದೇಶಕ ಡಾ. ಸುರೇಶ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ, ಬಿಎಂಆರ್ ಡಿಎ ಅಧ್ಯಕ್ಷ ಕೇಶವಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ ಹಾಜರಿದ್ದರು.