ಕನ್ನಡಪ್ರಭ ವಾರ್ತೆ ಹಾಸನ
ನಗರದ ಹಾಸನಾಂಬೆ ಕಲಾಕ್ಷೇತ್ರದಲ್ಲಿ ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ, ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಕೋ- ಆಪರೇಟಿವ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಮತ್ತು ಅಭಿನಂದನಾ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ರಾಜ್ಯಾಧ್ಯಕ್ಷರು ಮಾತನಾಡಿದರು. ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ನಂತರ ಮೊದಲನೇ ಬಾರಿ ಈ ಕಾರ್ಯಕ್ರಮಕ್ಕೆ ಹಾಸನಕ್ಕೆ ಆಗಮಿಸಿದ್ದೇನೆ. ಹಲವಾರು ನೌಕರರ ಹಿತಾಸಕ್ತಿ ಕಾಯುವಂಥ ಕೆಲಸಗಳನ್ನು ಮಾಡಿಸಿದ್ದೇನೆ. ಈಗ ಎನ್ ಪಿಎಸ್ ರದ್ದುಗೊಳಿಸಲು ಹೋರಾಟಕ್ಕೆ ಎಲ್ಲಾ ಸರ್ಕಾರಿ ನೌಕರರು ಆಗಮಿಸಬೇಕು, ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ನೌಕರರ ವೇತನ ಕೊಡಿಸುವುದು ನನ್ನ ಮುಂದಿನ ಗುರಿ ಎಂದು ತಿಳಿಸಿದರು.
ಈಗ ಹಾಸನ ಜಿಲ್ಲೆಯಲ್ಲಿ ನಮ್ಮ ಸ್ನೇಹಿತರು ಮಾಜಿ ಅಧ್ಯಕ್ಷರಾದ ಕೆ.ಎಂ. ಶ್ರೀನಿವಾಸ್ ರವರ ತಂಡ ಸಹಕಾರ ಸಂಘ ಮತ್ತು ಕೋ ಆಪರೇಟಿವ್ ಸೊಸೈಟಿಯನ್ನು ಪ್ರಾರಂಭಿಸಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಾ, ಸಮಸ್ತ ಹಾಸನ ಜಿಲ್ಲೆಯ ನೌಕರರಿಗೆ ಅನುಕೂಲವಾಗುವ ರೀತಿಯಲ್ಲಿ ನಿವೇಶನಗಳನ್ನು ಕೊಡುವುದರ ಮೂಲಕ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದರ ಮೂಲಕ ನೌಕರರ ಏಳಿಗೆಗೆ ದುಡಿಯುತ್ತಿದ್ದಾರೆ. ಅವರಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಬಗ್ಗೆ ಹಾಗೂ ತಂದೆ- ತಾಯಿಗಳನ್ನು ನೋಡಿಕೊಳ್ಳುವುದರ ಬಗ್ಗೆ ಕಿವಿಮಾತು ಹೇಳುವುದರ ಮೂಲಕ ಮುಂದಿನ ಜೀವನಕ್ಕೆ ಶುಭಾಶಯ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ರವರು ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ನಮ್ಮ ಗೃಹ ಸಹಕಾರ ಸಂಘದ ಉದ್ದೇಶ ಹಾಸನ ನಗರದ ಸುತ್ತಮುತ್ತ ಹಲವಾರು ಬಡಾವಣೆಗಳನ್ನು ನಿರ್ಮಿಸಿ, ಸದ್ಯಸರಿಗೆ ಸಾಮಾಜಿಕವಾಗಿ ಕೆಲಸ ಮಾಡುವುದು. ಸಂಘವನ್ನು ಬೆಳೆಸುವ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭಗೊಂಡಂಥ ಹಾಸನ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸೊಸೈಟಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಕೇವಲ ಎರಡು ದಿನದ ಒಳಗೆ ಸಾಲ ಕೊಡುವುದರ ಮೂಲಕ ಸರ್ಕಾರಿ ನೌಕರರಿಗೆ ಅನುಕೂಲವಾಗುವ ಕೆಲಸ ಮಾಡುತ್ತದೆ. ಈ ಸೊಸೈಟಿಯು ಈಗಾಗಲೇ ಸದಸ್ಯರಿಗೆ ಎರಡರಿಂದ ಮೂರು ಕೋಟಿ ರು. ಸಾಲ ಕೊಡುವುದರ ಮೂಲಕ ಹಾಸನ ಜಿಲ್ಲೆಯಲ್ಲಿ ಉತ್ತಮವಾದ ಸೊಸೈಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ೨೫೦ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ, ಕ್ರೀಡಾಪಟುಗಳಿಗೆ ಸನ್ಮಾನ ಮಾಡಲಾಯಿತು.ಹಿಮ್ಸ್ ಪ್ರಾಂಶುಪಾಲ ಡಾ. ಬಿ.ಸಿ. ರವಿಕುಮಾರ್, ಜಿಲ್ಲಾ ಖಜಾನೆ ಇಲಾಖೆಯ ಎನ್. ಪ್ರದೀಪ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ತನಜಾ, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಆರ್.ಜಿ. ಗಿರೀಶ್, ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತ ಹಾಗೂ ಕಲಾವಿದ ಬಿ.ಟಿ. ಮಾನವಿ ಇವರನ್ನು ಗೌರವಿಸಲಾಯಿತು.
ಇದಕ್ಕೂ ಮೊದಲು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರಿಗೆ ಅದ್ಧೂರಿ ಸ್ವಾಗತ ನೀಡಿ ಅವರನ್ನು ಬೈಕ್ ರ್‍ಯಾಲಿಯೊಂದಿಗೆ ಕಲಾಭವನಕ್ಕೆ ಕರೆತರಲಾಯಿತು.ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ, ಸೊಸೈಟಿಯ ಅಧ್ಯಕ್ಷ ಎಂ.ಎನ್. ಪರಮೇಶ್, ಸಂಘದ ಗೌರವಾಧ್ಯಕ್ಷ ಜಿ.ಪಿ. ವಿಶ್ವನಾಥ್, ಉಪಾಧ್ಯಕ್ಷ ಬಿ.ಆರ್. ಧರ್ಮ, ಸೊಸೈಟಿ ಗೌರವಾಧ್ಯಕ್ಷ ಬಿ.ಎನ್. ರಾಜಶೇಖರಪ್ಪ, ಉಪಾಧ್ಯಕ್ಷ ಕೆ.ಜೆ. ಸಾವಿತ್ರಮ್ಮ, ಗೌರವ ಕಾರ್ಯದರ್ಶಿ ಸತೀಶ್, ಎಸ್. ಮಧು, ಟಿ. ರಾಜು ಇತರರು ಉಪಸ್ಥಿತರಿದ್ದರು.
ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಎಮ್.ಎನ್. ಪರಮೇಶ್ ಅವರು ಸ್ವಾಗತಿಸಿದರು.